ನವದೆಹಲಿ: ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಶ್ರೀಗಂಧದಿಂದ ತಯಾರಿಸಿದ ವಿಶೇಷ ‘ಗೌತಮ ಬುದ್ಧನ ಮೂರ್ತಿ’ಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ಭಾರತ-ಜಪಾನ್ ದ್ವಿಪಕ್ಷೀಯ ಸಂಬಂಧಗಳ ಮೇಲೆ ಕರ್ನಾಟಕ ಶ್ರೀಗಂಧದ ಸುಗಂಧವನ್ನು ಹರಡಿದ್ದಾರೆ.
2 ದಿನಗಳ ಭಾರತ ಭೇಟಿಯಲ್ಲಿರುವ ಫ್ಯೂಮಿಯೊ ಕಿಶಿಡಾ ಅವರಿಗೆ ಕರ್ನಾಟಕದ ಶ್ರೀಮಂತ ಕಲಾ ಪರಂಪರೆಯನ್ನು ಪ್ರತಿನಿಧಿಸುವ ಬೋಧಿ ವೃಕ್ಷದ ಕೆಳಗೆ ‘ಧ್ಯಾನ ಮುದ್ರೆ’ಯಲ್ಲಿರುವ ಬುದ್ದನ ಮೂರ್ತಿ ಉಡುಗೊರೆಯಾಗಿ ಸಮರ್ಪಣೆಯಾಗಿದೆ. ಶ್ರೀಗಂಧದಿಂದ ತಯಾರಿಸಿದ ವಿಶೇಷ ‘ಗೌತಮ ಬುದ್ಧನ ಮೂರ್ತಿ’ಯನ್ನು ಭಾರತೀಯ ಸಂಸ್ಕೃತಿಯಲ್ಲಿ ಶುಭ ಎಂದು ಪರಿಗಣಿಸಲ್ಪಟ್ಟಿರುವ ಕದಂಬ ಮರದಿಂದ ಮಾಡಿದ ಜಾಲಿ ಪೆಟ್ಟಿಗೆಯಲ್ಲಿ ಇರಿಸಲಾಗಿದ್ದು ಇದನ್ನು ಕರ್ನಾಟಕದ ಕುಶಲಕರ್ಮಿಗಳು ಕೈಗಳಿಂದಲೇ ಸುಂದರವಾಗಿ ನಿರ್ಮಿಸಿದ್ದಾರೆ. ಪೆಟ್ಟಿಗೆ ಮೇಲೆ ಪ್ರಾಣಿ-ಪಕ್ಷಿಗಳು ಮತ್ತು ಅನೇಕ ನೈಸರ್ಗಿಕ ದೃಶ್ಯಗಳನ್ನು ಅದ್ಭುತವಾಗಿ ಕೆತ್ತಲಾಗಿದೆ.