ಕಮಿಷನ್ ಹಣ ಕೊಳ್ಳೆ ಹೊಡೆಯಲು ಟೆಂಡರ್ ಪ್ರಕ್ರಿಯೆ ಹೈಜಾಕ್ ..!’ ‘411 ಕೋಟಿ ರೂ.ಗಳ ಶಂಕುಸ್ಥಾಪನೆ ಬೋಗಸ್’ ‘ತಾಲೂಕಿನಾದ್ಯಂತ ವ್ಯಾಪಕ ಮರಳು ದಂಧೆ, ಮರಗಳ್ಳತನ’ ಮಾಜಿ ಶಾಸಕ ಕೆ.ವಸಂತ ಬಂಗೇರ ಗಂಭೀರ ಆರೋಪ

 

 

ಬೆಳ್ತಂಗಡಿ: ಕಳೆದ 5 ವರ್ಷಗಳಿಂದ ಬೆಳ್ತಂಗಡಿ ತಾಲೂಕು ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ಕುಗ್ರಾಮಗಳಿಗೂ ರಸ್ತೆ, ಮೂಲಭೂತ ಸೌಲಭ್ಯಗಳನ್ನು ಬಿಜೆಪಿ ಪಕ್ಷದ ಶಾಸಕ ಹರೀಶ್ ಪೂಂಜ ಮಾಡಿದ್ದಾರೆ. 5 ವರ್ಷದಲ್ಲಿ ಬೆಳ್ತಂಗಡಿಯ ಚಿತ್ರಣ ಬದಲಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿರುವಾಗಲೇ ಮಾಜಿ ಶಾಸಕ ಕೆ ವಸಂತ ಬಂಗೇರ ಅವರು ಶಾಸಕ ಹರೀಶ್ ಪೂಂಜರ ವಿರುದ್ಧ  ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು  ಪತ್ರಿಕಾಗೋಷ್ಠಿ ಮೂಲಕ  ಮಾಡಿದ್ದಾರೆ.
ಬೆಳ್ತಂಗಡಿಯ ಪ್ರವಾಸಿ ಬಂಗಲೆ ಕಾಮಗಾರಿ ಕುರಿತು ಮಾತನಾಡಿದ ಅವರು, ‘ಹಳೆಯ ಪ್ರವಾಸಿ ಬಂಗಲೆ ಕೆಡವಿ ಹೊಸ ಪ್ರವಾಸಿ ಬಂಗಲೆ ತಲೆ ಎತ್ತುತ್ತಿದ್ದು ಇದರಲ್ಲಿ  40% ಕಮಿಷನ್ ಹಣ ಕೊಳ್ಳೆ ಹೊಡೆಯುವ ಸಲುವಾಗಿ ಶಾಸಕರು ಟೆಂಡರ್ ಪ್ರಕ್ರಿಯೆಯನ್ನೇ ಹೈಜಾಕ್ ಮಾಡಿದ್ದಾರೆ.
ಇತ್ತೀಚೆಗೆ ತಾಲೂಕಿನಾದ್ಯಂತ ಸುಮಾರು 411 ಕೋಟಿ ರೂಪಾಯಿಗಳ ಶಂಕುಸ್ಥಾಪನೆ ನಡೆದಿದ್ದು ಬೆಳ್ತಂಗಡಿ ಕ್ಷೇತ್ರದ ಜನರ ಕಿವಿಗೆ ಹೂ ಇಡುವ ಕೆಲಸ ಮಾಡಿದ್ದಾರೆ. ಯಾವಾಗಲೂ ಶಾಸಕರು ಶಂಕುಸ್ಥಾಪನೆಗೆ ಹೋಗುವ ಸಂಧರ್ಭದಲ್ಲಿ ಇಂಜಿನಿಯರ್ ಮತ್ತು ಗುತ್ತಿಗೆದಾರರನ್ನು ಕರೆದುಕೊಂಡು ಹೋಗುತ್ತಿದ್ದರು. ಆದರೆ ಈ ಭಾರಿ ಬಹಳ ವಿಶೇಷ ಸಂಗತಿ ಎಂದರೆ ಇಂಜಿನಿಯರ್ ರಾಗಲಿ, ಗುತ್ತಿಗೆದಾರರಾಗಲಿ ಶಾಸಕರ ಜೊತೆಗೆ ಹೋಗದೆ ಇದ್ದುದು. ಈ ಬಗ್ಗೆ ಸಾರ್ವಜನಿಕರು ಪೋನ್ ಮಾಡಿ ವಿಚಾರಿಸಿದ್ದು ನಾನು ಇಂಜಿನಿಯರ್ ಗಳನ್ನು ಸಂಪರ್ಕಿಸಿದಾಗ ಶಂಕುಸ್ಥಾಪನೆ ನಡೆಸಿದ ಹೆಚ್ಚಿನ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆದಿಲ್ಲ, ಕಾಮಗಾರಿ ಆದೇಶವಾಗಲಿ ಅಗ್ರಿಮೆಂಟ್ ಆಗಲಿ ಯಾವುದೂ ಇಲ್ಲ. ಇಂತಹ ಅನಧಿಕೃತ ಕಾಮಗಾರಿಗಳನ್ನು ಅನುಷ್ಠಾನಿಸುವ ಮೊದಲು ಗುತ್ತಿಗೆದಾರರು ಎಚ್ಚರಿಕೆ ವಹಿಸುವುದು ಉತ್ತಮ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ನಮ್ಮ ಕಾಂಗ್ರೇಸ್ ಪಕ್ಷದ ಸರಕಾರ ಆಡಳಿತಕ್ಕೆ ಬರುವುದು ಖಚಿತ. ಆಗ ಈ ಎಲ್ಲಾ ಬೋಗಸ್ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಇದು ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಮಾಡಿದಂತಹ ಬೋಗಸ್ ಶಂಕುಸ್ಥಾಪನೆ ಎಂಬ ಆರೋಪ ಮಾಡಿದ್ದಾರೆ.

ಅಕ್ರಮ ಸಕ್ರಮ ಬೈಠಕ್ ಬಗ್ಗೆ ಮಾತನಾಡಿ, ಜಿಲ್ಲೆಯ ಎಲ್ಲಾ ಕಡೆ ಕಳೆದ 2-3 ವರ್ಷಗಳಿಂದ ಅಕ್ರಮ ಸಕ್ರಮ ಬೈಠಕ್ ನಡೆಸಿ ಬಡ ರೈತರಿಗೆ ನ್ಯಾಯ ಒದಗಿಸುವ ಕೆಲಸಗಳಾಗುತ್ತಿದ್ದರೂ ಬೆಳ್ತಂಗಡಿಯಲ್ಲಿ ಕೇವಲ ಒಂದು ಸಿಟ್ಟಿಂಗ್ ತಾಲೂಕು ಕಚೇರಿಯಲ್ಲಿ ಬಾಗಿಲು ಬಂದ್ ಮಾಡಿ ನಡೆಸಿದ ಶಾಸಕರು ನಂತರ ಬೈಠಕ್ ಮೊಟಕುಗೊಳಿಸಿ ಇದೀಗ ಗ್ರಾಮಗಳಲ್ಲಿ ಕಾನೂನು ಬಾಹಿರವಾಗಿ ಬೈಠಕ್ ನಡೆಸುತ್ತಿದ್ದಾರೆ. ಈ ಹಿಂದೆ ಮಂಜೂರುಗೊಳಿಸಿದ ಬೆರಳಣಿಕೆಯ ಅಕ್ರಮ-ಸಕ್ರಮ ಕಡತಗಳಲ್ಲಿ ಯಾವುದೇ ನಡವಳಿ ನಡೆಸಿ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿ ಆರ್.ಟಿ.ಸಿ ದಾಖಲು ಮಾಡುವ ಕೆಲಸ ಆಗಿಲ್ಲ. ಕಳೆದ ಗ್ರಾಮ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಗ್ರಾಮ ಗ್ರಾಮಗಳಿಗೆ ತೆರಳಿ ಮಾನ್ಯ ಶಾಸಕರಾದ ಹರೀಶ್ ಪೂಂಜಾರವರು ನೀವೆಲ್ಲ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿ. ಜೆ. ಪಿ ಪಕ್ಷದ ಪ್ರತಿನಿಧಿಗಳನ್ನು ಗೆಲ್ಲಿಸಿದರೆ ತಕ್ಷಣ ನಿಮ್ಮೆಲ್ಲರ ಕುಮ್ಕಿ ಭೂಮಿ ಸೇರಿದಂತೆ ಅಕ್ರಮ ಸಾಗುವಳಿಯನ್ನು ಸಕ್ರಮೀಕರಣ ಮಾಡಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಈಗ ಕುಮ್ಕಿ ಭೂಮಿ ಮಂಜೂರು ಮಾಡಲು ಅವಕಾಶ ಇಲ್ಲ ಎಂಬ ವಿಚಾರ ಗೊತ್ತಿದ್ದರೂ ಶಾಸಕರು ಕುಮ್ಕಿ ಭೂಮಿಯನ್ನು ಅಳತೆ ಮಾಡಿಸಲು ತನ್ನ ಪಕ್ಷದ ಕಾರ್ಯಕರ್ತರ ಮೂಲಕ ಹಣ ಪಡಕೊಂಡು ಕೆಲ ಗ್ರಾಮ ಕರಣಿಕರ ಮೂಲಕ ಅಳತೆ ಮಾಡಿಸುತ್ತಿದ್ದಾರೆ. ಕಡತದಲ್ಲಿ ‘ಕುಮ್ಕಿ ಹಕ್ಕಿನ ಜಮೀನನ್ನು ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶ ಬಂದ ನಂತರ ಕಡತ
ಮಂಡಿಸುವುದು’ ಎಂಬ ಷರಾ ಬರೆದು ಕಡತವನ್ನು ವಿಲೇ ಮಾಡಿ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಗ್ರಾಮ ಗ್ರಾಮದಲ್ಲಿ ಬಿಜೆಪಿ ಪಕ್ಷದ ಕೆಲ ಮದ್ಯವರ್ತಿಗಳು ಹಕ್ಕುಪತ್ರ ಮಾಡಿಸಿಕೊಡುವುದಾಗಿ ಜನರಿಂದ ಲಕ್ಷಗಟ್ಟಲೆ ಹಣ ಸಂಗ್ರಹಿಸಿದ್ದು ಇದರಲ್ಲಿ ಶಾಸಕರಿಗೂ ಕಮಿಷನ್ ಇರುವುದಾಗಿ ನನಗೆ ತಿಳಿದು ಬಂದಿರುತ್ತದೆ. ಇದಕ್ಕೆ ತಾಜಾ ಉದಾಹರಣೆಯಾಗಿ ತೋಟತ್ತಾಡಿಯ ವೆಂಕಟ್ರಮಣ ಗೌಡರವರ ಬಳಿಯಿಂದ ಗ್ರಾಮದ ಬಿ.ಜೆ.ಪಿ ಮುಖಂಡ ಮೋಹನ ಗೌಡ ಎಂಬವ ರೂ. 50,000/- ಪಡೆದಿದ್ದು ವಾಪಾಸ್ ಕೇಳಿದ್ದಕ್ಕೆ ಹಲ್ಲೆ ನಡೆಸಿದ್ದಾರೆ. ಪೋಲೀಸರಿಗೆ ದೂರು ನೀಡಿದ್ರೆ ಅವರು ಶಾಸಕ ಪೂಂಜಾರ ಒತ್ತಡಕ್ಕೆ ಒಳಗಾಗಿ ಎಫ್.ಐ.ಆರ್ ದಾಖಲಿಸದೇ ಕೋರ್ಟಿನಿಂದ ಅನುಮತಿ ಪಡೆಯುವಂತೆ ತಿಳಿಸಿದ್ದಾರೆ.

ತಾಲೂಕಿನಾದ್ಯಂತ ಶಾಸಕ ಹರೀಶ್ ಪೂಂಜಾರವರ ನೇತೃತ್ವದಲ್ಲಿ ವ್ಯಾಪಕ ಮರಳು ದಂಧೆ ಮತ್ತು ಮರಗಳ್ಳತನ ನಡೆಯುತ್ತಿದೆ ಎಂದ ಅವರು, ಇದಕ್ಕೆ ಕೆಲ ಕಂದಾಯ, ಅರಣ್ಯ ಮತ್ತು ಪೋಲೀಸ್ ಇಲಾಖೆಯ ಅಧಿಕಾರಿಗಳು ಸಾತ್ ನೀಡುತ್ತಿದ್ದಾರೆ. ಇದನ್ನು ಗಣಿ ಇಲಾಖೆ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಅವರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಮುಗೆರಡ್ಕದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಬಗ್ಗೆ ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.

ಬೆಳ್ತಂಗಡಿಗೆ ನೂತನವಾಗಿ ಆಗಮಿಸಿರುವ ತಹಶಿಲ್ದಾರವರು ಅಕ್ರಮ-ಸಕ್ರಮ ಸಿಟ್ಟಿಂಗ್ ವಿಚಾರವಾಗಿ ಶಾಸಕರೊಂದಿಗೆ ಅಲೆದಾಡುವುದು ಹೊರತುಪಡಿಸಿ ಜನರಿಗೆ ಅಗತ್ಯವಾಗಿ ಬೇಕಾದ ಯಾವುದೇ ಕಡತಗಳಿಗೆ ಸಹಿ ಹಾಕುತ್ತಿಲ್ಲ ಎಂಬ ಬಗ್ಗೆ ನನಗೆ ದೂರು ಬಂದಿದೆ. ಇದಕ್ಕೆ ಶಾಸಕ ಹರೀಶ್ ಪೂಂಜಾರವರ ಕುಮ್ಮಕ್ಕು ಇದೆಯೇ ಎಂಬ ಸಂಶಯ ಮೂಡುತ್ತಿದೆ. ತಹಶಿಹಿಲ್ದಾರರು ಈ ಚಾಳಿಯನ್ನು ಮುಂದುವರಿಸಿದಲ್ಲಿ ಜನರೊಂದಿಗೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಈ ಮೂಲಕ ಎಚ್ದರಿಸುತ್ತಿದ್ದೇನೆ ಎಂದಿದ್ದಾರೆ.

error: Content is protected !!