ಹೈದರಾಬಾದ್: ಸಿಕಂದರಾಬಾದ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಯುವತಿಯರು ಹಾಗೂ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಕಾಲ್ ಸೆಂಟರ್‌ಗಳು, ಬಟ್ಟೆ ಅಂಗಡಿಗಳು, ಕಂಪ್ಯೂಟರ್ ಸಂಸ್ಥೆಗಳು, ಮತ್ತು ಇತರ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದ ಪ್ಯಾರಡೈಸ್ ಬಳಿಯ ಸ್ವಪ್ನಲೋಕ ಬಹುಮಹಡಿ ಕಟ್ಟಡದಲ್ಲಿ ಮಾ 16ರ ಸಂಜೆ 6.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. 8 ಮಹಡಿಗಳಿಗೆ ಕೆನ್ನಾಲಿಗೆ ವ್ಯಾಪಿಸಿತ್ತು. ಇದಕ್ಕೂ ಮುನ್ನ ಶಾರ್ಟ್ಸರ್ಕ್ಯೂಟ್‌ನಿಂದಾಗಿ ಏಳನೇ ಮಹಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ನಂತರ 4ನೇ ಮಹಡಿಗೆ ಹರಡಿದೆ. 5ನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿದೆ. ಬೆಂಕಿ ಹೊತ್ತಿಕೊಂಡ ತಕ್ಷಣ ಅಲ್ಲಿ ಕೆಲಸ ಮಾಡುತ್ತಿದ್ದವರು ಹಾಗೂ ಅಂಗಡಿಗೆ ಬಂದವರು ಗಾಬರಿಯಿಂದ ಹೊರಗೆ ಓಡಿಬಂದಿದ್ದಾರೆ. ಹೊಗೆ ಹಾಗೂ ಬಣ್ಣದ ಡಬ್ಬಗಳಿಂದಾಗಿ ಕೆಲವರಿಗೆ ಕೆಳಗಿಳಿಯಲು ಸಾಧ್ಯವಾಗಲಿಲ್ಲ. 15ಕ್ಕೂ ಹೆಚ್ಚು ಮಂದಿ ಕಟ್ಟಡದಲ್ಲಿ ಸಿಲುಕಿಕೊಂಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಬೃಹತ್ ಕ್ರೇನ್‌ಗಳ ಸಹಾಯದಿಂದ ಕೆಲವರನ್ನು ರಕ್ಷಿಸಿದರು. ಈ ಪೈಕಿ ಆರು ಮಂದಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ತಕ್ಷಣ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಟ್ಟ ಹೊಗೆ ಹರಡಿದ್ದರಿಂದ ಕೊಠಡಿಯಲ್ಲಿ ಸಿಲುಕಿಕೊಂಡಿದ್ದವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಅಗ್ನಿಶಾಮಕ ಸಿಬ್ಬಂದಿ ಮತ್ತು ಇತರ ರಕ್ಷಣಾ ತಂಡಗಳು ಸಂತ್ರಸ್ತರನ್ನು ರಕ್ಷಿಸಲು ಹರಸಾಹಸಪಟ್ಟಿದ್ದು ಹೈಡ್ರಾಲಿಕ್ ಕ್ರೇನ್‌ಗಳ ಸಹಾಯದಿಂದ ಸಿಬ್ಬಂದಿ ಮೇಲಕ್ಕೆ ಹೋಗಿ ಸಿಕ್ಕಿಬಿದ್ದವರನ್ನು ಕೆಳಗಿಳಿಸಲು ಪ್ರಯತ್ನಿಸಿದ್ದಾರೆ. ರಾತ್ರಿ ಹತ್ತು ಗಂಟೆಯ ನಂತರ ಬೆಂಕಿಯನ್ನು ಹತೋಟಿಗೆ ತರಲಾಯಿತು.