ಬೆಳ್ತಂಗಡಿ: ವಿಧಾನ ಸಭಾ ಚುನಾವಣೆಯ ಕಾವು ದಿನೇ ದಿನೇ ಹೆಚ್ಚಾಗುತ್ತಿದ್ದು ಇಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಅಂತಿಮ ಪಟ್ಟಿ ಹೊರಬೀಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್‌ನ 120 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಿ ರಾಜ್ಯನಾಯಕರು ದಿಲ್ಲಿಗೆ ಕಳುಹಿಸಿಕೊಟ್ಟಿದ್ದು, ಇಂದು (ಮಾ.17) ಇದಕ್ಕೆ ಅಂತಿಮ ರೂಪ ನೀಡುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಭಾರೀ ಕುತೂಹಲ ಮೂಡಿದಂತಾಗಿದೆ.
ಬೆಳ್ತಂಗಡಿ ಕಾಂಗ್ರೆಸ್ ಪಕ್ಷದಿಂದ ರಕ್ಷಿತ್ ಶಿವಾರಂ ಹಾಗೂ ಮಾಜಿ ಸಚಿವ ಗಂಗಾಧರ ಗೌಡ ಅವರು ಕಣಕ್ಕಿಳಿದ್ದು ಟಿಕೆಟ್ ಯಾರ ಕೈಸೇರಲಿದೆ ಎಂಬುದೇ ಸಾಕಷ್ಟು ಕುತೂಹಲದಾಯಕವಾಗಿದೆ. ಕೆಲವು ತಿಂಗಳುಗಳಿಂದ ಬೆಳ್ತಂಗಡಿ ತಾಲೂಕಿನ ಹಲವಾರು ಕಡೆಗಳಲ್ಲಿ ಮಾಜಿ ಸಚಿವ ಗಂಗಾಧರ ಗೌಡ ಅವರ ಬ್ಯಾನರ್‌ಗಳು ಜೊತೆಗೆ ರಕ್ಷಿತ್ ಶಿವರಾಂ ಅವರ ದೊಡ್ಡ ದೊಡ್ಡ ಕಟೌಟ್‌ಗಳು ರಾರಾಜಿಸುತ್ತಿದ್ದು ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಮಣೆಹಾಕಲಿದೆ ಎಂದು ಕಾದುನೋಡಬೇಕಿದೆ.
ಬೆಳ್ತಂಗಡಿ ಜನರ ನಿರೀಕ್ಷೆ ಏನು ..?
ಬಹುನಾಯಕತ್ವದ ಕೋಟೆಯಾಗಿರುವ ಬೆಳ್ತಂಗಡಿ ಕಾಂಗ್ರೆಸ್ ನಲ್ಲಿ ಸದ್ಯದ ಮಟ್ಟಿಗೆ ಶಾಸಕ ಹರೀಶ್ ಪೂಂಜರ ವಿರುದ್ಧ ಚುನಾವಣಾ ಕಣದಲ್ಲಿ ಸಮರಸಾರಲು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಂ ಒಳ್ಳೆಯ ಅಭ್ಯರ್ಥಿ ಎಂದು ಜನಾಭಿಪ್ರಾಯ. ಅಲ್ಲದೆ ಡಿ.ಕೆ ಶಿವಕುಮಾರ್ ಈ ಬಾರಿ ಯುವಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುವುದು ಎಂಬುದು ಹೇಳಿರುವುದು ರಕ್ಷಿತ್ ಶಿವರಾಂ ಅವರನ್ನು ಬೆಂಬಲಿಸಿದಂತಿತ್ತು. ಆದರೆ ಮಾಜಿ ಸಚಿವ ಗಂಗಾಧರ ಗೌಡ ಅವರಿಗೆ ಹೈಕಮಾಂಡ್ ಗಳ ಜೊತೆ ಮೊದಲೇ ಸ್ನೇಹ ಸಂಪರ್ಕವಿರುವುದರಿಂದ ಅಲ್ಲದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಜೊತೆ ನಿಕಟ ಸಂಪರ್ಕವಿರುವುದರಿಂದ ಟಿಕೆಟ್ ಗಂಗಾಧರ ಗೌಡ ಅವರಿಗೆ ಸಿಗುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿಯ ಘೋಷಣೆಯನ್ನು ಇಡೀ ತಾಲೂಕಿನ ಜನ ಎದುರು ನೋಡುತ್ತಿದ್ದಾರೆ.