7 ಮಂದಿ ಐಪಿಎಸ್ ಅಧಿಕಾರಿಗಳನ್ನು‌ ವರ್ಗಾಯಿಸಿ ಸರ್ಕಾರ ಆದೇಶ: ಮಂಗಳೂರಿನ ಹೆಸರಾಂತ ಪೊಲೀಸ್​ ಕಮಿಷನರ್ ಎನ್ ಶಶಿಕುಮಾರ್ ವರ್ಗಾವಣೆ…!: 2 ವರ್ಷದ ಸೇವಾವಧಿಯಲ್ಲಿ ಜನ ಮೆಚ್ಚುಗೆಗಳಿಸಿದ್ದ ಪೊಲೀಸ್ ಕಮಿಷನರ್

ಬೆಂಗಳೂರು : ರಾಜ್ಯದಲ್ಲಿ 7 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಇಂದು ಆದೇಶಿಸಿದೆ.

ರಾಜ್ಯ ರೈಲ್ವೇ ಡಿಐಜಿಯಾಗಿ ಶಶಿಕುಮಾರ್, ರಾಜ್ಯ ಗುಪ್ತವಾರ್ತೆ ಎಸ್ಪಿಯಾಗಿ ಕಿಶೋರ್ ಬಾಬು, ವೈರ್ ಲೆಸ್ ವಿಭಾಗದ ಎಸ್ಪಿ ಕೋನವಂಶಿಕೃಷ್ಣ, ಕೇಂದ್ರ ಸಶಸ್ತ್ರ ವಿಭಾಗದ ಡಿಸಿಪಿಯಾಗಿ ಅರುಣಾಂಶು ಗಿರಿ ಹಾಗೂ ಕೊಪ್ಪಳ ಎಸ್ಪಿಯಾಗಿ ಯಶೋಧವೊಂಟಾಗೊಡಿ ವರ್ಗಾವಣೆಗೊಂಡಿದ್ದಾರೆ.

ಮಂಗಳೂರು ನಗರ ಕಮೀಷನರ್ ಆಗಿದ್ದ ಶಶಿಕುಮಾರ್ ಜಾಗಕ್ಕೆ ಬೆಂಗಳೂರು ನಗರ ಪಶ್ಚಿಮ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಅವರನ್ನು ವರ್ಗಾವಣೆಗೊಳಿಸಲಾಗಿದೆ‌. ಇವರು ಬೆಂಗಳೂರು ನಗರ ಟ್ರಾಫಿಕ್ ವೆಸ್ಟ್ ಡಿವಿಷನ್‌ನ ಡಿಸಿಪಿ ಆಗಿದ್ದರು.
ಕೊರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮಂಗಳೂರು ಕಮೀಷನರ್ ಆಗಿ ಬಂದಿದ್ದ ಎನ್ ಶಶಿಕುಮಾರ್ ಸುಮಾರು ಎರಡು ವರ್ಷ ಎರಡು ತಿಂಗಳು ಸೇವೆ ಸಲ್ಲಿಸಿದ್ದಾರೆ.

ಜನರೊಂದಿಗೆ ಬೆರೆತು ಜನಪ್ರಿಯರಾಗಿ, ವಿವಿಧ ಸಾರ್ವಜನಿಕ ಸಮಾರಂಭಗಳಲ್ಲಿ ಹಾಡುವ ಮೂಲಕ ಅನೇಕರ ಮೆಚ್ಚುಗೆಗೂ ಪಾತ್ರರಾಗಿದ್ದರು.
ಪುನೀತ್ ರಾಜ್‌ಕುಮಾರ್ ನೆನಪಿಗಾಗಿ ಕಾರ್ಯಕ್ರಮವೊಂದನ್ನು ಮಾಡಿ ಆ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಅವರನ್ನು ಆಹ್ವಾನಿಸಿದ್ದರು. ಅದೇ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಹೆಜ್ಜೆ ಹಾಕಿದ್ದರು. ಚಿತ್ರದುರ್ಗದ ಕೋಟೆ ಹತ್ತಿ ಸಾಹಸ ಮೆರೆದಿದ್ದರು. ಕೊರೋನಾ ಸಮಯದಲ್ಲಂತು ನಿಯಮಾವಳಿಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದರು.

ತಮ್ಮ ಸೇವಾವಧಿಯಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿಯೇ ಸೇವೆ ಸಲ್ಲಿಸಿ ಕಾಲೇಜು ವಿದ್ಯಾರ್ಥಿನಿಯರನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದ ಜಾಲವನ್ನು ಬೇಧಿಸಿದ್ದರು. ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ನಡೆಸುತ್ತಿದ್ದ ಗಾಂಜಾ ಪ್ರಕರಣ, ನಕಲಿ ನೋಟುಗಳ ಜಾಲ, ಹಲವು ಗಾಂಜಾ ಪ್ರಕರಣಗಳನ್ನು ಯಶಸ್ವಿಯಾಗಿ ಬೇಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದ ಸರಣಿ ಕೋಮು ಹತ್ಯೆ ಸಂದರ್ಭದಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿಯೂ ಹತ್ಯೆ ನಡೆದಿದ್ದು, ಈ ಪರಿಸ್ಥಿತಿಯನ್ನು ನಿಭಾಯಿಸಿದ್ದರು. ಮಂಗಳೂರಿನಲ್ಲಿ ಪಬ್ ಮೇಲೆ ನಡೆದ ದಾಳಿ ಇವರ ಆಡಳಿತ ಅವಧಿಯಲ್ಲಿ ನಡೆದಿತ್ತು.

error: Content is protected !!