ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಫೆ.18ರಂದು ನಡೆಯುವ ಶಿವರಾತ್ರಿ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಸುಮಾರು ಐವತ್ತು ಸಾವಿರ ಮಂದಿ ಪಾದಯಾತ್ರಿಗಳು ಈಗಾಗಲೆ ಧರ್ಮಸ್ಥಳಕ್ಕೆ ಬರುವುದಾಗಿ ಹೆಸರು ನೋಂದಾಯಿಸಿದ್ದು, ಬೆಂಗಳೂರು, ಮೈಸೂರು, ಮಡಿಕೇರಿ, ಶಿವಮೊಗ್ಗ, ಭದ್ರಾವತಿ, ಹಾಸನ, ದಾವಣಗೆರೆ ಮೊದಲಾದ ಊರುಗಳಿಂದ ಪ್ರತಿ ವರ್ಷದಂತೆ ವಿವಿಧ ಪಾದಯಾತ್ರಿಗಳು ಸಂಘಟನೆಗಳ ಮೂಲಕ ಶಿವನಾಮ ಸ್ಮರಣೆಯೊಂದಿಗೆ ಪಾದಯಾತ್ರೆಯಲ್ಲಿ ಆಗಮಿಸುತ್ತಿದ್ದಾರೆ. ಧರ್ಮಸ್ಥಳದಲ್ಲಿ ಮುಖ್ಯ ಪ್ರವೇಶದ್ವಾರದಲ್ಲಿ ಸ್ವಾಗತ ಕಾರ್ಯಾಲಯ ಹಾಗೂ ಮಾಹಿತಿ ಕಾರ್ಯಾಲಯ ತೆರೆದಿದ್ದು ಪಾದಯಾತ್ರಿಗಳ ಸ್ವಾಗತ ಮತ್ತು ಆತಿಥ್ಯಕ್ಕೆ ಸ್ವಯಂ ಸೇವಕರ ತಂಡ ಸಜ್ಜಾಗಿದೆ.ಪಾದಯಾತ್ರಿಗಳ ಮಾಹಿತಿಗಾಗಿ 55 ಕಡೆಗಳಲ್ಲಿ ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು, ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿ, ಸ್ವಚ್ಛತೆ ಕಾಪಾಡುವಂತೆ ನಿದೇರ್ಶನ ನೀಡಲಾಗಿದೆ.
ಪಾದಯಾತ್ರಿಗಳಿಗೆ ಉಜಿರೆಯಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಂಗಣ, ಅನ್ನಪೂರ್ಣ ಛತ್ರದ ಹಿಂಭಾಗ, ಗಂಗೋತ್ರಿ, ಸಾಕೇತ ವಸತಿ ಛತ್ರಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ.
ಫೆ.18 ಸಂಜೆ ಆರು ಗಂಟೆಗೆ ಧರ್ಮಸ್ಥಳದಲ್ಲಿ ದೇವಸ್ಥಾನದ ಎದುರು ಇರುವ ಪ್ರವಚನಮಂಟಪದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿ ಶಿವಪಂಚಾಕ್ಷರಿ ಪಠಣಕ್ಕೆ ಚಾಲನೆ ನೀಡುವರು. ಪ್ರವಚನದ ಬಳಿಕ ಇಡೀ ರಾತ್ರಿ ಭಕ್ತರು ಶಿವನಾಮ ಸ್ಮರಣೆ, ಭಜನೆ, ಪ್ರಾರ್ಥನೆ, ಧ್ಯಾನದೊಂದಿಗೆ ಜಾಗರಣೆ, ದೇವಸ್ಥಾನದಲ್ಲಿ ಸಂಜೆ ಆರು ಗಂಟೆಯಿಂದ ನಾಲ್ಕು ಜಾವಗಳಲ್ಲಿ ಅಹೋರಾತ್ರಿ ಭಕ್ತರು ಶತರುದ್ರಾಭಿಷೇಕ, ಎಳನೀರು ಅಭಿಷೇಕ ಮಾಡಲಿದ್ದಾರೆ. ರಾತ್ರಿ ಇಡೀ ದೇವರ ದರ್ಶನಕ್ಕೆ ಅವಕಾಶವಿದ್ದು ಭಾನುವಾರ ಬೆಳಗ್ಗಿನ ಜಾವ ರಥೋತ್ಸವ ನಡೆಯಲಿದೆ.
ಎಸ್.ಡಿ.ಎಂ. ಆಸ್ಪತ್ರೆಯ ಆಶ್ರಯದಲ್ಲಿ 15 ಮಂದಿ ವೈದ್ಯರ ತಂಡ ಪಾದಯಾತ್ರಿಗಳ ಉಚಿತ ಸೇವೆಗೆ ಸಿದ್ದರಾಗಿದ್ದಾರೆ. ಶಿವರಾತ್ರಿಗೆ ನಾಡಿನೆಲ್ಲೆಡೆಯಿಂದ ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ಬರುವ ನಿರೀಕ್ಷೆ ಇದ್ದು, ಕೆ.ಎಸ್.ಆರ್.ಟಿ.ಸಿ. ಸಂಸ್ಥೆ ರಾಜ್ಯದ ವಿವಿಧ ಊರುಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.