ಕಣ್ಮನ ಸೆಳೆದ ಸಾಮೂಹಿಕ ಗೋಪೂಜೆ – ಗೋ ನಂದಾರತಿ: ಕಳೆಂಜ ನಂದಗೋಕುಲ ಗೋಶಾಲೆಯಲ್ಲಿ ದೀಪೋತ್ಸವ ಸಂಭ್ರಮ: ಉರಗ ಚಿಕಿತ್ಸಾಲಯ ನಿರ್ಮಾಣಕ್ಕೆ ಚಿಂತನೆ: ಶುಭ ಕಾರ್ಯಕ್ರಮದಂದು ಗೋಶಾಲೆಗೆ ಸಿಗಲಿ ದಾನ ರೂಪದ ಸೇವೆ: ಶಾಸಕ ಹರೀಶ್ ಪೂಂಜ ಕರೆ

ಕಳೆಂಜ: ಗೋವಿಗೆ ಸನಾತನ ಧರ್ಮದಲ್ಲಿ ಪೂಜ್ಯನೀಯ ಸ್ಥಾನಮಾನವಿದ್ದು ಹಿಂದೂಗಳು ಗೋವನ್ನು ದೇವತೆ ಎಂದು ಪೂಜಿಸುತ್ತಾರೆ. ಗೋವಿನ ಉಳಿವಿಗಾಗಿ ನಾವೆಲ್ಲ ಶ್ರಮಿಸಬೇಕಿದ್ದು ಹಿಂದು ಬಾಂಧವರು ತಮ್ಮ ಹುಟ್ಟುಹಬ್ಬ, ಗೃಹಪ್ರವೇಶದ ಸಹಿತ ಶುಭಕಾರ್ಯಕ್ರಮದಂದು ಗೋಶಾಲೆಗೆ ದಾನದ ರೂಪದಲ್ಲಿ ಸೇವೆ ನೀಡಬೇಕು ಎಂದು ಶಾಸಕ ಹರೀಶ್ ಪೂಂಜ ಕರೆ ನೀಡಿದರು.

ಅವರು ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಳೆಂಜ ಇದರ ಆಶ್ರಯದಲ್ಲಿ, ನಂದಗೋಕುಲ ದೀಪೋತ್ಸವ ಸಂಚಾಲನಾ ಸಮಿತಿ ವತಿಯಿಂದ ಕಳೆಂಜದ ನಂದಗೋಕುಲ ಗೋಶಾಲೆಯಲ್ಲಿ ಡಿ.25 ರಂದು ನಂದಗೋಕುಲ ದೀಪೋತ್ಸವ ಸಾಮೂಹಿಕ ಗೋಪೂಜೆ, ಗೋನಂದಾರತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೋಶಾಲೆ, ಗೋವಿನ ಪರಿಸರದ ಸುವ್ಯವಸ್ಥೆಯಾಗಿಸುವಲ್ಲಿ ತಾಲೂಕಿ‌ನ 81 ಗ್ರಾಮದ ಮಂದಿ ನೆರವಾಗಬೇಕು. ನಂದ ಗೋಕುಲದಲ್ಲಿ ಟ್ರಸ್ಟ್ ನ ಇಚ್ಚೆಯಂತೆ ಗಾಯಗೊಂಡ ಹವುಗಳಿಗೆ ಚಿಕಿತ್ಸೆ ನೀಡಬೇಕೆಂಬ ಟ್ರಸ್ಟ್ ನ ಚಿಂತನೆಯಂತೆ ಉರಗ ಸಂಗ್ರಹಾಲಯ ನಿರ್ಮಿಸಲು ಚಿಂತಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಶುಭಹಾರೈಸಿ, ದೇವರಿಗಿಂತ ಹೆಚ್ಚು ಗೋಮಾತೆಯನ್ನು ಪೂಜಿಸುವ ಧರ್ಮವಿದ್ದರೆ ಅದು ಹಿಂದೂ ಧರ್ಮ. ನಂದಗೋಕುಲ ಗೋಶಾಲೆ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.

ಟ್ರಸ್ಟ್ ನ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಪ್ರಾಸ್ತಾವಿಸಿ ಮೂರು ಹಸುಗಳಿಂದ ಆರಂಭಗೊಂಡು ಈಗ ಸುಮಾರು 210 ಕ್ಕೂ ಹೆಚ್ಚು ಅನಾಥ ಗೋವುಗಳು ಇಲ್ಲಿ ನೆಮ್ಮದಿಯ ದಿನಗಳನ್ನು ಕಾಣುತ್ತಿವೆ. ಗೋಶಾಲೆಗೆ ಸ್ಲರಿ, ಕುಡಿಯುವ ನೀರಿನ‌ ಪಂಪ್, ಒಣ ಹುಲ್ಲು,‌ ಸಿಬಂದಿ ವೇತನ ಪ್ರತಿ ವರ್ಷ 60 ಲಕ್ಷ ವ್ಯಯಿಸುತ್ತಿದೆ ಎಂದರು.


ಆರ್.ಎಸ್.ಎಸ್. ಉಜಿರೆ ತಾಲೂಕು ಸಂಘಚಾಲಕ ವಿನಯಚಂದ್ರ ಉಜಿರೆ, ಅಮೇರಿಕ ವೆಂಚರ್‌ಸಾಫ್ಟ್ ಗ್ಲೋಬಲ್ ಸಂಸ್ಥೆಗಳ ಸಂಸ್ಥಾಪಕ ವೆಂಕಟ್ರಮಣ ಭಟ್ ಅಗರ್ತ, ಕಳೆಂಜ ಗ್ರಾ.ಪಂ. ಅಧ್ಯಕ್ಷ ಪ್ರಸನ್ನ, ಭಾ.ಜ.ಪ ಅಧ್ಯಕ್ಷ ಕೆ. ಜಯಂತ್ ಕೋಟ್ಯಾನ್, ಉದ್ಯಮಿ ನಾರಾಯಣ ಗೌಡ, ಉದ್ಯಮಿ ಎಚ್.ಆರ್.ಪಟೇಲ್, ದೀಪೋತ್ಸವ ಪ್ರಧಾನ ಸಂಚಾಲಕ ಮೋಹನ್ ಕುಮಾರ್, ಸ್ವಾಮಿ ಶ್ರೀ.ವಿ.ಸೇ. ಟ್ರಸ್ಟ್ ಟ್ರಸ್ಟಿ ರಮೇಶ್ ಪ್ರಭು, ಬದುಕು ಕಟ್ಟೋಣ ತಂಡದ ಸಂಚಾಲಕ ರಾಜೇಶ್ ಪೈ, ಡೀಕಯ್ಯ ಗೌಡ ಬಂಡೇರಿ ಉಪಸ್ಥಿತರಿದ್ದರು.

ನಂದಗೋಕುಲ ದೀಪೋತ್ಸವ ಸಂಚಲನಾ ಸಮಿತಿ ಅಧ್ಯಕ್ಷ ಪೂರಣ್ ವರ್ಮ ಸ್ವಾಗತಿಸಿದರು. ಟ್ರಸ್ಟ್‌ನ ಅಧ್ಯಕ್ಷ ಉಜಿರೆಯ ಡಾ. ಎಂ.ಎಂ. ದಯಾಕರ್ ವಂದಿಸಿದರು. ಹರೀಶ್ ನೆರಿಯ, ಟ್ರಸ್ಟಿ ನವೀನ್ ನೆರಿಯ ನಿರೂಪಿಸಿದರು.

error: Content is protected !!