ಸಚಿವ ಹಾಗೂ ಸರ್ಕಾರದ ವಿರುದ್ಧ 40 ಪರ್ಸೆಂಟ್ ಆರೋಪ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿ ನಾಲ್ವರು ಅರೆಸ್ಟ್​ :

 

 

ಬೆಂಗಳೂರು:ತೋಟಗಾರಿಕಾ ಸಚಿವ ಮುನಿರತ್ನ ಸೇರಿದಂತೆ ರಾಜ್ಯ ಸರ್ಕಾರದ ವಿರುದ್ಧ ಶೇ.40ರಷ್ಟು ಕಮಿಷನ್ ಆರೋಪ ಮಾಡಿದ್ದಲ್ಲದೆ ಈ ಬಗ್ಗೆ ಪ್ರಧಾನಿ ಕಚೇರಿಗೂ ಪತ್ರ ಬರೆದಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಸೇರಿ ನಾಲ್ವರನ್ನು ಕೇಂದ್ರ ವಿಭಾಗದ ವೈಯಾಲಿಕಾವಲ್ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಡಿ. ಕೆಂಪಣ್ಣ ಮತ್ತು ಗುತ್ತಿಗೆದಾರರ ಸಂಘದ ಕೃಷ್ಣಾರೆಡ್ಡಿ, ನಟರಾಜ್, ಗುರುಸಿದ್ದಪ್ಪ ಎಂಬವರನ್ನು ಬಂಧಿಸಲಾಗಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ, ಉಪಾಧ್ಯಕ್ಷ ಕೃಷ್ಣಾಾರೆಡ್ಡಿ, ಖಜಾಂಚಿ ನಟರಾಜ್ ಸೇರಿ ಇತರೆ ಆರೋಪಿಗಳು ಸಚಿವ ಮುನಿರತ್ನ ವಿರುದ್ಧ ಮಾಧ್ಯಮ ಹೇಳಿಕೆ ನೀಡಿದ್ದರು. ಶೇ.40ರಷ್ಟು ಕಮಿಷನ್ ಆರೋಪ ಮಾಡಿದ್ದರು.ಈ ಸಂಬಂಧ ಸಚಿವ ಮುನಿರತ್ನ ಕೋರ್ಟ್‌ನಲ್ಲಿ ಕ್ರಿಮಿನಲ್ ಮತ್ತು 50 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗಳಿಗೆ ನೋಟಿಸ್ ಕೊಟ್ಟು ಡಿ.22ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಆದರೆ, ಡಿ.22ರ ವಿಚಾರಣೆಗೆ ಆರೋಪಿಗಳು ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ನಗರದ 8ನೇ ಎಸಿಎಂಎಂ ಕೋರ್ಟ್ ಕೆಂಪಣ್ಣ ಸೇರಿ 19 ಮಂದಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಈ ಬೆನ್ನಲ್ಲೇ ಕೆಂಪಣ್ಣ ಹಾಗೂ ಇತರರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

error: Content is protected !!