ಬೆಳ್ತಂಗಡಿ : ರೋಗಿಗಳ ಸೋಗಿನಲ್ಲಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಾ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಕಳ್ಳಿಯನ್ನು ಧರ್ಮಸ್ಥಳ ಪೊಲೀಸರು ಬೆಂಗಳೂರಿನಲ್ಲಿ ಚಿನ್ನಾಭರಣ ಸಹಿತ ಬಂಧಿಸಿದ್ದಾರೆ.
ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಮತ್ತು ಯೋಗ ಚಿಕಿತ್ಸಾಲಯ ಶಾಂತಿವನ ಆಸ್ಪತ್ರೆಗೆ ಚಿಕಿತ್ಸೆಗೆಂದು ಬೆಂಗಳೂರಿನ ಶ್ರೀಮತಿ ಹೇಮಾ ಕುಟುಂಬದೊಂದಿಗೆ 30-06-2022 ರಂದು ಬಂದಿದ್ದು ಇವರ ಬಳಿ ಇದ್ದ 80 ಗ್ರಾಂ ತೂಕದ ಎರಡು ಹವಳದ ಚಿನ್ನದ ಮಾಂಗಲ್ಯ ಸರ ಹಾಗೂ 6000/- ರೂಪಾಯಿ ನಗದು ಇದ್ದ ವ್ಯಾನಿಟಿ ಬ್ಯಾಗನ್ನು ಚಿಕಿತ್ಸೆಗೆ ಹೋಗಿದ್ದ ವೇಳೆಯಲ್ಲಿ ಕಳ್ಳತನ ಮಾಡಿದ್ದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಕಾರ್ಯಾಚರಣೆ ನಡೆಸಿ ಕಳ್ಳತನ ಮಾಡಿದ್ದ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮದ ನಿವಾಸಿ ಬೆಂಗಳೂರಿನಲ್ಲಿ ವಾಸವಿರುವ ವರ್ಷಾ(26) ಯನ್ನು ಖಚಿತ ಮಾಹಿತಿ ಪಡೆದು ವಿಶೇಷ ಕರ್ತವ್ಯದಲ್ಲಿ ತೆರಳಿ ಬಂಧಿಸಿ ಕಳ್ಳತನ ಮಾಡಿದ್ದ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿ ವರ್ಷಳನ್ನು ಬಂಧಿಸಿ ಧರ್ಮಸ್ಥಳ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.ಕಳೆದ ಐದು ತಿಂಗಳಿಂದ ವಿಶೇಷ ಕರ್ತವ್ಯದಲ್ಲಿ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಅವರ ವಿಶೇಷ ತಂಡ ಬೆಂಗಳೂರಿನಲ್ಲಿರುವ ಇರುವಿಕೆಯನ್ನು ಪತ್ತೆ ಮಾಡಿ 65 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡು ಇದರ ಮೌಲ್ಯ ಅಂದಾಜು 2,50,000 ಅಗಿದೆ.
ಸದ್ರಿ ಪ್ರಕರಣದಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಪಿ.ಎಸ್.ಐ ಅನೀಲ್ ಕುಮಾರ ಡಿ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬೆನ್ನಿಚ್ಚನ್, ಪ್ರಶಾಂತ, ರಾಜೇಶ್, ಸತೀಶ ನಾಯ್ಕ , ರಾಧ ಕೋಟ್ಯಾನ್, ಪ್ರಮೋದಿನಿ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.