ಬೆಳ್ತಂಗಡಿ ಕಾಂಗ್ರೆಸ್ ನಲ್ಲಿ ರಾಜಕೀಯ ಗೊಂದಲ..! ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಗುಪ್ತ ಸಮಾಲೋಚನಾ ಸಭೆ..? ಕೈಗುದ್ದಾಟಕ್ಕೆ ರಾಜ್ಯಾಧ್ಯಕ್ಷರಿಂದ ಬೀಳುತ್ತಾ ಬ್ರೇಕ್..!?

 

 

 

 

ಬೆಳ್ತಂಗಡಿ: ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ ಎಂದು ಜನ ಮಾತಾಡಿಕೊಳ್ಳುತ್ತಿರುವ ಈ ಸಮಯಲ್ಲಿ ಪಕ್ಷದೊಳಗೆ ಮತ್ತೊಂದು ಗೊಂದಲ ಶುರುವಾಗಿದೆ.

ಮುಂದಿನ ವಿಧಾನ ಸಭಾ ಚುನಾವಣೆಗೆ ಬೆಳ್ತಂಗಡಿಯಿಂದ ಸ್ಪರ್ಧಿಸಲು ಮಾಜಿ‌ ಶಾಸಕ ಕೆ. ವಸಂತ ಬಂಗೇರ, ಮಾಜಿ ಸಚಿವ ಗಂಗಾಧರ ಗೌಡ ಹಾಗೂ ಬೆಸ್ಟ್ ಫೌಂಡೇಷನ್ ಸ್ಥಾಪಕಾಧ್ಯಕ್ಷ ರಕ್ಷಿತ್ ಶಿವರಾಂ ಅಣಿಯಾಗಿದ್ದಾರೆ. ಪತ್ರಿಕಾಗೋಷ್ಠಿಯೊಂದರಲ್ಲಿ  ಬಂಗೇರ ಮತ್ತು ಗಂಗಾದರ ಗೌಡ ಒಟ್ಟಾಗಿ ಸೇರಿಕೊಂಡು ಬೆಳ್ತಂಗಡಿ ಕಾಂಗ್ರೆಸ್ಸಿನಲ್ಲಿ ಯಾವುದೇ ಗೊಂದಲ ಇಲ್ಲ ಎಂಬ ರೀತಿಯಲ್ಲಿ ಹೇಳಿಕೆ ನೀಡಿದರೂ ರಕ್ಷಿತ್ ಶಿವರಾಂ ವಿರುದ್ಧ ಹಿರಿಯ ನಾಯಕರಿಬ್ಬರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ಕಾಂಗ್ರೆಸ್ ನ ಈ ಪರಿಸ್ಥಿತಿ ಬಿಜೆಪಿಗೆ ಹಾಸ್ಯಸ್ಪದವಾದರೆ ಈಗ ಮತ್ತೆ ಕಾಂಗ್ರೆಸ್ಸಿನೊಳಗೊಂದು ಗೊಂದಲ ಶುರುವಾಗಿದೆ.  ಈ ಗೊಂದಲ ಪರಿಹರಿಸುವಂತೆ ಕೆಪಿಸಿಸಿ ಅಧ್ಯಕ್ಚ ಡಿ.ಕೆ.ಶಿವಕುಮಾರ್ ಅವರಿಂದ ಬೆಳ್ತಂಗಡಿ ಕಾಂಗ್ರೆಸ್ಸಿನ ಬಗ್ಗೆ ಸುಮ್ಮನಾಗಿರುವ  ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರಿಗೆ ಖಡಕ್ ಸೂಚನೆ ಬಂದಿದೆ ಎನ್ನಲಾಗಿದ್ದು , ಹೀಗಾಗಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನ ಪ್ರಮುಖರ ಗೌಪ್ಯ ಸಮಾಲೋಚನಾ ಸಭೆ ನಾಳೆ ಡಿ 11 ರಂದು ಬೆಳ್ತಂಗಡಿಯಲ್ಲಿ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:

ನಡಿಗೆ’ಯಲ್ಲಿ ಬಯಲಾಯ್ತು ‘ಕೈ’ ಪಕ್ಷದೊಳಗಿನ ಬಿರುಕು: ‘ಮನೆಯೊಂದು ನಾಲ್ಕು ಬಾಗಿಲು…?, ಹಿರಿಯ ಕಾರ್ಯಕರ್ತರು ಬಿಚ್ಚಿಟ್ಟ ಗುಂಪುಗಾರಿಕೆ ರಹಸ್ಯ: ಸಮಸ್ಯೆಗೆ ಸ್ಪಂದಿಸುವ ಮುಖಂಡರಿಲ್ಲದೆ ಕಾರ್ಯಕರ್ತರು ಅತಂತ್ರ!: ‘ಏಕ’ ನಾಯಕತ್ವವಿಲ್ಲದೆ ಬಲ ಕಳೆದುಕೊಳ್ಳುತ್ತಿದೆಯೇ ಕೈ?

 

ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾರ್ಯಕ್ರಮದ ಸಂದರ್ಭದಲ್ಲಿ ಗುರುವಾಯನಕೆರೆಯಿಂದ ಬೆಳ್ತಂಗಡಿವರೆಗೆ ಹಮ್ಮಿಕೊಂಡಿದ್ದ ಕಾಂಗ್ರೆಸ್ ನ‌ ಸ್ವಾತಂತ್ರ್ಯ ನಡಿಗೆಯಲ್ಲಿ ಕೈಯೊಳಗಿನ ಬಿರುಕು ಬಯಲಾಗಿದೆ. ಬಹುನಾಯಕತ್ವವಿರುವ ಪಕ್ಷದೊಳಗೆ ಗುಂಪುಗಾರಿಕೆಯೂ ಇದ್ದು , ಈ ಗುಂಪು ವಿಲೀನವಾಗದೆ ಹೋದರೆ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯ ಎತ್ತ ಸಾಗಲಿದೆ ಎಂಬುದೆ ಜನರಲ್ಲಿ ಪ್ರಶ್ನೆಯಾಗಿದೆ. ಇದೇ ಬರುವ ಡಿ 17 ರಂದು ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ವತಿಯಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮಿಸಲಿದ್ದಾರೆ. ಇದು ಚುನಾವಣೆಯ ಪೂರ್ವ ತಯಾರಿಗಾಗಿ ಮಾಡುವ ಕಾರ್ಯಕ್ರಮಗಳು ಎಂದು ನಾಯಕರುಗಳು ಹೇಳಿದ್ದಾರೆ. ವಿಪರ್ಯಾಸ ಎಂದರೆ ಚುನಾವಣೆಗಾಗಿ ತಾಲೂಕಿನಲ್ಲಿ ಎಷ್ಟೇ ಸಿದ್ಧತೆಗಳು ನಡೆದರೂ ಕಾಂಗ್ರೆಸ್ ಒಳಗಿನ ಬಿರುಕು ಮತ್ತೆ ಎದ್ದು ಕಾಣುವಂತಾಗಿದೆ. ನಾಯಕರುಗಳ ಗುದ್ದಾಟದಿಂದಾಗಿ ಈಗಾಗಲೇ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ ಅದಲ್ಲದೇ ಇನ್ನೂ ಕೂಡ ಬಿಜೆಪಿ ಸೇರಲು ಕಾರ್ಯಕರ್ತರು ಉತ್ಸುಕರಾಗಿದ್ದಾರೆ ಇದು ಕಾಂಗ್ರೆಸ್ಸಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆಯೂ ಇದೆ ಎನ್ನುವ ಮಾಹಿತಿ ಕೆಲವು ಕಾಂಗ್ರೆಸ್ ಅಪ್ತರಿಂದಲೇ ಕೇಳಿಬರುತ್ತಿದೆ.

ಇದನ್ನೂ ಓದಿ:

ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ವಿರುದ್ಧ ಮಾಜಿ ಸಚಿವ ಗಂಗಾಧರ ಗೌಡ ಗರಂ: “ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಅನಾಥವಲ್ಲ, ದೂರದ ಬೆಂಗಳೂರಿನವರಿಗೆ ಟಿಕೆಟ್ ಇಲ್ಲ”!: “ವಸಂತ ಬಂಗೇರ ಅಥವಾ ನನಗೆ ಮುಂದಿನ ಟಿಕೆಟ್”, ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಕಾಂಗ್ರೆಸ್ ಹಿರಿಯ ಮುಖಂಡ:

 

 

ಒಂದೆಡೆ ಕಾಂಗ್ರೆಸ್ ನ ಬಿ‌ ಫಾರ್ಮ್ ಯಾರ ಕೈಗೆ ಸೇರಲಿದೆ ಎಂಬ ಕುತೂಹಲವಿದ್ದರೆ ಇನ್ನೊಂದೆಡೆ ಈ ಬಾರಿ  ಯುವ ನಾಯಕರಿಗೆ ಹೆಚ್ಚಿನ   ಅವಕಾಶ ನೀಡಲಾಗುವುದು ಎಂಬ ರಾಜ್ಯಾಧ್ಯಕ್ಷರ ಹೇಳಿಕೆಗಳು ಬೆಳ್ತಂಗಡಿ ರಾಜಕೀಯದಾಟಕ್ಕೆ ಯಾವ ರೀತಿಯಲ್ಲಿ ಲಗಾಮು ಹಾಕಲಿದೆ ಅದೇ ರೀತಿ ಹಿರಿಯ ಮುಖಂಡರುಗಳನ್ನು ಯಾವ ರೀತಿಯಲ್ಲಿ ಮನವೊಲಿಸಲಿದೆ ಎಂದು ಕಾದುನೋಡಬೇಕಾಗಿದೆ.

error: Content is protected !!