ಇಂದಿನಿಂದ ವರ್ಷದ ಕೊನೆಯ ಮತ್ತು ಮಹತ್ವದ ಸಂಸತ್ ಚಳಿಗಾಲದ ಅಧಿವೇಶನ ಆರಂಭ: 16 ವಿವಿಧ ಮಸೂದೆಗಳನ್ನು ಮಂಡಿಸಲಿರುವ ಕೇಂದ್ರ ಸರ್ಕಾರ: ಸರ್ಕಾರದ ಚಳಿ ಬಿಡಿಸಲು ಸಜ್ಜಾದ ಪ್ರತಿಪಕ್ಷಗಳು..!

ನವದೆಹಲಿ: ವರ್ಷದ ಕೊನೆಯ ಮತ್ತು ಮಹತ್ವದ ಸಂಸತ್ ಚಳಿಗಾಲದ ಅಧಿವೇಶನ ಇಂದಿನಿಂದ ಡಿಸೆಂಬರ್ 29ರವರೆಗೆ ನಡೆಯಲಿದೆ. ಒಟ್ಟು 17 ದಿನಗಳ ಕಾಲ ನಡೆಯುವ ಸಂಸತ್ ಚಳಿಗಾಲದ ಅಧಿವೇಶನದಲ್ಲಿ 16 ವಿವಿಧ ಮಸೂದೆಗಳನ್ನು ಮಂಡಿಸಲು ಸರ್ಕಾರ ಸಿದ್ಧವಾಗಿದೆ. ಆದರೆ ಹಲವಾರು ವಿಷಯಗಳನ್ನಿಟ್ಟುಕೊಂಡು ಸರ್ಕಾರದ ಚಳಿ ಬಿಡಿಸಲು ಪ್ರತಿಪಕ್ಷಗಳು ಅಷ್ಟೇ ಸಜ್ಜಾಗಿವೆ.

ಸಂಸತ್ ಅಧಿವೇಶನ ಫಲಪ್ರದವಾಗಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಮಸೂದೆಗಳ ಮಂಡನೆಗೆ ತಯಾರಾಗಿದೆ. ಬಹುರಾಜ್ಯ ಸಹಕಾರ ಸೊಸೈಟಿ(ತಿದ್ದುಪಡಿ) ಕಾಯ್ದೆ, ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯ್ದೆ, ಜೈವಿಕ ವೈವಿಧ್ಯತೆ ತಿದ್ದುಪಡಿ ಮಸೂದೆ, ರಾಷ್ಟ್ರೀಯ ದಂತವೈದ್ಯ ಆಯೋಗ ಮಸೂದೆ, ರಾಷ್ಟ್ರೀಯ ನರ್ಸಿಂಗ್ ಆಯೋಗ ಮಸೂದೆಗಳು ಸೇರಿದಂತೆ ಒಟ್ಟು 16 ವಿವಿಧ ಮಸೂದೆಗಳನ್ನು ಉಭಯ ಸದನಗಳಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲು ಸರ್ಕಾರ ಸಜ್ಜಾಗಿದೆ.

ಈ ಮಧ್ಯೆ ಸರ್ಕಾರದ ವಿರುದ್ಧ ಹಲವಾರು ವಿಷಯಗಳನ್ನಿಟ್ಟುಕೊಂಡು ಚಾಟಿ ಬೀಸಲು ಮುಂದಾಗಿರುವ ಪ್ರತಿಪಕ್ಷಗಳು ಬೆಲೆ ಏರಿಕೆ, ನಿರುದ್ಯೋಗ, ಚೀನಾ ಗಡಿ ವಿವಾದ, ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10 ರಷ್ಟು ಮೀಸಲು, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಸರ್ಕಾರದ ಯತ್ನ, ಆರ್ಥಿಕತೆ ಕುಸಿತದ ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ.

error: Content is protected !!