ವಿದ್ಯಾರ್ಥಿಗಳು ವಿವಿಧ ರಾಜಕೀಯ ಚಟುವಟಿಕೆ, ಧರ್ಮ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ : ವಿದ್ಯಾರ್ಜನೆಯ ಸಂದರ್ಭವನ್ನು ವ್ಯರ್ಥಗೊಳಿಸಿ ಯೌವನದ ಪ್ರಾಯದಲ್ಲೇ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ: ಪದ್ಮರಾಜ್ ಆರ್

ಬೆಳ್ತಂಗಡಿ: ಇಂದು ವಿದ್ಯೆ ಗಳಿಸಲು ಹಿಂದೆ ಇದ್ದ ಕಷ್ಟ ಇಲ್ಲ. ಆದರೆ ‘ವಿದ್ಯಾರ್ಥಿಗಳು ತಾನು ಸಾಗುತ್ತಿರುವ ಬದುಕಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಕೋಶಾಧಿಕಾರಿ ಪದ್ಮರಾಜ್ ಆರ್ ಹೇಳಿದರು.

ಅವರು ಮಂಗಳವಾರ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ನಡೆದ ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ವಿದ್ಯಾರ್ಥಿಗಳು ವಿದ್ಯಾರ್ಜನೆಯೊಂದಿಗೆ ಉತ್ತಮ ಬದುಕು ರೂಪಿಸುವೆಡೆಗೆ ಸದಾ ಚಿಂತನಶೀಲರಾಗಬೇಕು’. ಆದರೆ ವಿದ್ಯಾರ್ಥಿಗಳು ವಿವಿಧ ರಾಜಕೀಯ ಚಟುವಟಿಕೆ, ಧರ್ಮ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಜನೆಯ ಸಂದರ್ಭವನ್ನು ವ್ಯರ್ಥಗೊಳಿಸಿ ಯೌವನದ ಪ್ರಾಯದಲ್ಲೇ ಬದುಕನ್ನು ಕಳೆದುಕೊಳ್ಳುತ್ತಿರುವುದು ದುರಂತ’ ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ವೇಳೆ ಶೇ.90 ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಿ ಶೇ.100 ಅಂಕವನ್ನು ಕಾಲೇಜು ದಾಖಲಿಸುವುದು ಯಾವುದೇ ಸಾಧನೆಯಲ್ಲ. ಶೇ.35 ಅಂಕ ಗಳಿಸಿದ ವಿದ್ಯಾರ್ಥಿಯನ್ನು ತರಬೇತಿಗೊಳಿಸಿ ಶೇ.85 ಕ್ಕಿಂತ ಅಧಿಕ ಗಳಿಸುವಂತೆ ಶಿಕ್ಷಣ ಸಂಸ್ಥೆಯೊಂದು ಮಾಡುತ್ತಿರುವುದು ನಿಜವಾದ ಸಾಧನೆ. ಅಂತಹ ಕಾರ್ಯವನ್ನು ಶ್ರೀ ಗುರುದೇವ ಕಾಲೇಜು ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಯಣ್ಣ ಸಿ.ಡಿ. ಮಾತನಾಡಿ, ‘ಮೊಬೈಲ್ ನಂತಹ ಸಾಧನವನ್ನು ನಮ್ಮ ಸಾಧನೆಗೆ ಪೂರಕವಾಗಿ ಉಪಯೋಗಿಸುವ ಸಮಯೋಚಿತ ಚಿಂತನೆ ಇರಬೇಕು.
ಪಠ್ಯದ ಜೊತೆ ಪಠ್ಯೇತರ ವಿಚಾರದಲ್ಲಿ ಭಾಗವಹಿಸಿದಾಗ ಮಾತ್ರ ವಿದ್ಯಾರ್ಥಿ ಬದುಕು ಸಾರ್ಥಕವಾಗುವುದು. ‘ ಎಂದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ.ವಸಂತ ಬಂಗೇರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ ಯಾವುದೇ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಸಾಧನೆಗೆ ಮೆಟ್ಟಿಲಾಗಬೇಕು. ಭವಿಷ್ಯದ ಬದುಕಿಗೆ ಭದ್ರ ಬುನಾದಿಯನ್ನು ಹಾಕಬೇಕು’ ಎಂದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕ್ರೀಡಾ ಮತ್ತು ಸಾಂಸ್ಕೃತಿಕ ವಿಭಾಗದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಸಮೀವುಲ್ಲಾ ಬಿ. ಎ. ವರದಿ ವಾಚಿಸಿದರು. ಉಪನ್ಯಾಸಕರಾದ ಗಣೇಶ್ ಬಿ, ಬಬಿತಾ ಅತಿಥಿಗಳನ್ನು ಪರಿಚಯಿಸಿದರು. ರಾಕೇಶ್ ಕುಮಾರ್ ಸಂದೇಶ ವಾಚಿಸಿದರು
ನಂದಿನಿ ಶರ್ಮ, ಹರೀಶ್ ಪೂಜಾರಿ, ಶೇಖ್ ರಶೀದ್, ಸೌಮ್ಯ, ದೀಪ್ತಿ, ದೀಪಾ ಎಸ್ ಸುವರ್ಣ, ಮಲ್ಲಿಕಾ ಟಿ ಸಾಧಕರ ಹಾಗೂ ಬಹುಮಾನಿತರ ಪಟ್ಟಿ ವಾಚಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ ವಂದಿಸಿದರು. ಉಪಣ್ಯಾಕರಾದ ಸತೀಶ್ ಸಿ ಸಾಲಿಯಾನ್ ಮತ್ತು ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

error: Content is protected !!