ಬೆಳ್ತಂಗಡಿ : ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವ ವ್ಯಕ್ತಿಗತ ಸಾಧನೆಯ ದೂರದೃಷ್ಟಿಯ ಜೊತೆಗೆ ಮಾನವೀಯ ಮೌಲ್ಯಗಳ ಪರವಾದ ಬದ್ಧತೆ ರೂಢಿಸಿಕೊಳ್ಳುವ ಮೂಲಕ ಶೈಕ್ಷಣಿಕ ಅರ್ಹತೆಯ ಅರ್ಥವಂತಿಕೆಯನ್ನು ಹೆಚ್ಚಿಸಬೇಕು ಎಂದು ಲಂಡನ್ ಸ್ಕೂಲ್ ಆಫ್ ಮೆಡಿಸಿನ್ ಪ್ರಾಧ್ಯಾಪಕ, ನವಜಾತ ಶಿಶುತಜ್ಞ, ಅಳದಂಗಡಿ ಮೂಲದ ಡಾ. ನರೇಂದ್ರ ಹೇಳಿದರು.
ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳಿಗೆ ಪ್ರವೇಶಾತಿ ಪಡೆದ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಸಂಸ್ಥೆಯ ಶೈಕ್ಷಣಿಕ ಸ್ವರೂಪವನ್ನು ಪರಿಚಯಿಸುವ ಉದ್ದೇಶದಿಂದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಓರಿಯೆಂಟೇಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಅರ್ಹತೆಯು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮತ್ತು ಪರಿಪೂರ್ಣತೆಗೆ ನೆರವಾಗುತ್ತದೆ. ಶಿಕ್ಷಣವು ಜೀವನ ಮೌಲ್ಯ ಮತ್ತು ಕೌಶಲ್ಯಗಳನ್ನು ಕಲಿಯುವುದಕ್ಕೂ ಬುನಾದಿ ಹಾಕಿಕೊಡುತ್ತದೆ. ಇಂಥ ಶೈಕ್ಷಣಿಕ ಸಂಸ್ಕಾರದೊಂದಿಗೆ ಉತ್ತಮ ನಾಗರಿಕರಾಗುವ ಹಂಬಲವು ವ್ಯಕ್ತಿಗತ ಸಾಧನೆಯ ಮೌಲ್ಯವನ್ನು ಹೆಚ್ಚಿಸುತ್ತದೆ. ಜಗತ್ತಿನಲ್ಲಿ ಹಲವು ಬದಲಾವಣೆಗಳಿಗೆ ಪ್ರೇರಣೆಯಾಗುವಂಥ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಶಿಕ್ಷಣದ ವಿವಿಧ ಹಂತಗಳನ್ನು ದಾಟಿಕೊಳ್ಳುವಾಗಲೇ ಉತ್ತಮ ಮನುಷ್ಯರಾಗುವ ಹಂಬಲವನ್ನು ವಿದ್ಯಾರ್ಥಿಗಳು ಗಟ್ಟಿಗೊಳಿಸಿಕೊಳ್ಳಬೇಕು. ಈ ಬಗೆಯ ತುಡಿತವು ವಿದ್ಯಾರ್ಥಿಗಳನ್ನು ದೇಶದ ಶ್ರೇಷ್ಠ ನಾಗರಿಕರನ್ನಾಗಿ ರೂಪಿಸುವುದಕ್ಕೆ ಒತ್ತಾಸೆ ಮೂಡಿಸುತ್ತದೆ. ಶ್ರೇಷ್ಠ ನಾಗರಿಕತ್ವ ದೇಶದ ಸುಸ್ಥಿರ ಬೆಳವಣಿಗೆಗೆ ಬೇಕಾಗುವ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ನುಡಿದರು.
ಪ್ರಬಲ ಶೈಕ್ಷಣಿಕ ಹಿನ್ನೆಲೆ, ಆರ್ಥಿಕ ಸಶಕ್ತತೆಯ ಕುರಿತ ಸ್ಪಷ್ಟ ಪ್ರಜ್ಞೆ, ಭಾವನಾತ್ಮಕ-ಬೌದ್ಧಿಕ ನಿರ್ವಹಣೆಯ ಕೌಶಲ್ಯ, ಪರಿಸರಕ್ಕೆ ಧಕ್ಕೆಯೊದಗಿಸದ ಬದ್ಧತೆ ಮತ್ತು ಹೊಸದನ್ನು ಯೋಚಿಸಿ ಮುನ್ನುಗ್ಗುವ ಸಾಮಥ್ರ್ಯದ ಮೂಲಕ ವಿದ್ಯಾರ್ಥಿ ಸಮೂಹ ದೇಶದ ಸರ್ವತೋಮುಖ ಅಭಿವೃದ್ಧಿಗೆ ಬೇಕಾಗುವ ಸಂಪನ್ಮೂಲವಾಗಿ ಮಾರ್ಪಡುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಯೋಚಿಸಬೇಕು ಎಂದು ಸಲಹೆ ನೀಡಿದರು.
ಸಂಶೋಧನಾ ರಂಗದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ವಿಶೇಷ ಮನ್ನಣೆ ಪಡೆಯುತ್ತಿದೆ. ಅತಿಹೆಚ್ಚು ಸಂಶೋಧನಾ ಮಹಾಪ್ರಬಂಧಗಳನ್ನು ರೂಪಿಸುವುದರಲ್ಲಿ ವಿಶ್ವದಲ್ಲಿಯೇ ನಾಲ್ಕನೇ ರ್ಯಾಂಕ್ ತನ್ನದಾಗಿಸಿಕೊಂಡಿದೆ. ಅಮೆರಿಕಾ, ಜರ್ಮನಿ, ಲಂಡನ್ ನಂತರದ ಸ್ಥಾನ ಭಾರತದ್ದಾಗಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಭಾರತದ ವಿಶೇಷ ಸಾಧನೆಯನ್ನು ಇದು ಸಾಬೀತುಪಡಿಸುತ್ತದೆ ಎಂದರು.
ಉನ್ನತ ಶಿಕ್ಷಣರಂಗವನ್ನು ಪ್ರವೇಶಿಸುವ ವಿದ್ಯಾರ್ಥಿನಿಯರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಮಹಿಳೆ ಮತ್ತು ಪುರುಷ ಎಂಬ ತಾರತಮ್ಯವನ್ನು ಇಲ್ಲವಾಗಿಸಿ ಸಮಾನರೀತಿಯಲ್ಲಿ ಎಲ್ಲರಿಗೂ ಶಿಕ್ಷಣ ದೊರಕಬೇಕು ಎಂಬ ದೂರದೃಷ್ಠಿಯಿಂದಾಗಿ ಈ ಬಗೆಯ ಬದಲಾವಣೆ ಸಾಧ್ಯವಾಗುತ್ತಿದೆ. ಎಲ್ಲರೂ ಸಮಾನತೆಯ ಮೌಲ್ಯದ ಪರವಾದ ನಿಲುವನ್ನು ಹೊಂದಬೇಕು ಎಂದು ಪ್ರತಿಪಾದಿಸಿದರು.
ನಮ್ಮ ಧರ್ಮ ಮತ್ತು ಸಂಸ್ಕೃತಿಯ ಶ್ರೇಷ್ಠ ಅಂಶಗಳನ್ನು ಅನುಸರಿಸುವ ನಿಷ್ಠೆಯೊಂದಿಗೆ ಉಳಿದ ಧರ್ಮಗಳನ್ನು ಗೌರವಿಸುವ ದೃಷ್ಟಿಕೋನವೂ ಇರಬೇಕು. ಹಾಗಾದಾಗ ಮಾತ್ರ ಉತ್ತಮ ನಾಗರಿಕರಾಗಲು ಸಾಧ್ಯ. ಈ ಮೂಲಕ ಇತರರಿಗೆ ಪ್ರೇರಣೆಯಾಗುವಂಥ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಪ್ರಕೃತಿ ಸಂರಕ್ಷಣೆಯ ಹೊಣೆಗಾರಿಕೆ ನಿಭಾಯಿಸುವುದರ ಕಡೆಗೂ ಗಮನವಿರಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ನೈತಿಕ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು ಎಂದರು. ನೈತಿಕ ತಳಹದಿಯಿಂದ ಜ್ಞಾನಾರ್ಜನೆ ಮತ್ತು ಕೌಶಲ್ಯಗಳ ಜೀವಂತಿಕೆ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಎಸ್.ಡಿ.ಎಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಉದಯಚಂದ್ರ ಪಿ.ಎನ್ ಮಾತನಾಡಿ ತಾರ್ಕಿಕವಾಗಿ ಯೋಚಿಸುವ ಸಾಮಥ್ರ್ಯವೇ ವಿದ್ಯಾರ್ಥಿ ಬದುಕಿನ ಮಹತ್ವದ ಅಡಿಪಾಯ ಎಂದು ಸ್ಪಷ್ಟಪಡಿಸಿದರು. ನಿರ್ದಿಷ್ಟ ಕ್ಷೇತ್ರದಲ್ಲಿ ಸಾಧಿಸುವ ಹುಮ್ಮಸ್ಸಿನೊಂದಿಗೆ ಹಜ್ಜೆಯಿರಿಸುವಾಗ ಎಚ್ಚರವಿರಬೇಕು. ಮುಂದಾಗಬಹುದಾದ ಪರಿಣಾಮಗಳನ್ನು ಲೆಕ್ಕಿಸದೇ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂಬ ಸ್ಪಷ್ಟತೆಯೂ ಇರಬೇಕು ಎಂದು ಹೇಳಿದರು.
ಎಸ್.ಡಿ.ಎಂ ಸ್ನಾತಕೊತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ್ ಪಿ ವಂದಿಸಿದರು. ಎಸ್.ಡಿ.ಎಂ ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಎ.ಜಯಕುಮಾರ ಶೆಟ್ಟಿ ಸ್ವಾಗತಿಸಿದರು. ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ನೆಫೀಸತ್ ಪಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ರೂಪಿಸಿದ, ಓರಿಯೆಂಟೇಷನ್ ಕಾರ್ಯಕ್ರಮದ ಸಚಿತ್ರ ಮಾಹಿತಿ ನೀಡುವ ವಿಶೇಷ ಎಸ್.ಡಿ.ಎಂ ಗೆಜೆಟ್ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.