ವ್ಯಸನಿಗಳ ಪರಿವರ್ತನೆಗೆ ಕುಟುಂಬಿಕರ ಸಹಕಾರ ಅಗತ್ಯ:ಡಾ. ಡಿ. ವೀರೇಂದ್ರ ಹೆಗ್ಗಡೆ: 189ನೇ ಮದ್ಯವರ್ಜನ ಶಿಬಿರ ಕಾರ್ಯಕ್ರಮ:

 

 

ಬೆಳ್ತಂಗಡಿ : “ ಮಾದಕ ವಸ್ತುಗಳು ಹಾಗೂ ಮದ್ಯಪಾನದ ಅಭ್ಯಾಸ ಮಾನಸಿಕ ಮತ್ತು ದೈಹಿಕ ಅವಲಂಬನೆಯಾದಾಗ ವ್ಯಕ್ತಿಯ ಜೀವನದಲ್ಲಿ ಜೀವನಶೈಲಿ ತನ್ನಷ್ಟಕ್ಕೆ ಬದಲಾಗಿ ಯಾರೂ ಒಪ್ಪದ ಸ್ಥಿತಿಗೆ ತಲುಪಿಸುತ್ತದೆ. ಈ ಸ್ಥಿತಿಯನ್ನು ಬದಲಾಯಿಸುವುದೇ ವ್ಯಸನಮುಕ್ತಿ ಕೇಂದ್ರದ ಉದ್ದೇಶ ಮತ್ತು ಸವಾಲಾಗಿದೆ.

ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು. ಅವರು ಉಜಿರೆ, ಲಾೈಲದ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ದಾಖಲಾಗಿ ಮದ್ಯವರ್ಜನದ ಚಿಕಿತ್ಸೆ ಪಡೆದ 189ನೇ ವಿಶೇಷ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಶಿಬಿರದಲ್ಲಿ ಮನಸ್ಥಿತಿ ಬದಲಾವಣೆಗೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸಿ ಮನಪರಿವರ್ತನೆ ಮಾಡಿದಾಗ ಮುಖ್ಯವಾಗಿ ನಿದ್ದೆ, ಹಸಿವು, ಆರೋಗ್ಯ, ಉತ್ಸಾಹ, ಮಾತುಗಾರಿಕೆ, ಹೊಂದಿಕೊಳ್ಳುವಿಕೆ, ಸಂಬಂಧಗಳ ಬೆಳೆಸುವಿಕೆ, ವ್ಯಕ್ತಿತ್ವ ವಿಕಸನ., ಹೀಗೆ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ. ಇದಲ್ಲದೆ ವ್ಯಸನಿಗಳ ಪರಿವರ್ತನೆಗೆ ಕುಟುಂಬದವರ ಸಹಕಾರ ಅತ್ಯವಶ್ಯಕವಾಗಿದೆ. ಮನೆಯ ಮಹಿಳೆಯರು ವಿಶೇಷವಾದ ಕಾಳಜಿಯನ್ನು ತೋರಿಸುತ್ತಾ ಪ್ರೀತಿ, ವಿಶ್ವಾಸದೊಂದಿಗೆ ಸಹಕರಿಸಿದಾಗ ಮಾತ್ರ ವ್ಯಸನಮುಕ್ತಿ ಹೊಂದಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಿಬಿರಗಳಲ್ಲಿ ಕೌಟುಂಬಿಕ ಸಲಹೆ, ಕುಟುಂಬದ ದಿನಾಚರಣೆ ಆಚರಿಸಿ ಸಂಬಂಧಗಳನ್ನು ಬಲಪಡಿಸುವ ಕೆಲಸಕ್ಕೂ ಆದ್ಯತೆ ನೀಡಲಾಗುತ್ತಿದೆ. ಆಣೆ, ಪ್ರಮಾಣ ಮುಂತಾದವುಗಳಿಂದ ಕುಡಿತದಿಂದ ದೂರವಾಗಲು ಸಾಧ್ಯವಾಗುವುದಿಲ್ಲ. ವ್ಯಸನಿಗಳು ತಾನಾಗಿಯೇ ಆಧ್ಯಾತ್ಮದ ಒಲವು ತನ್ನದಾಗಿಸಿಕೊಂಡು, ಹಳೆಯ ಗೆಳೆಯರಿಂದ, ಜೀವನಕ್ರಮಗಳಿಂದ ದೂರ ನಿಂತು ವ್ಯಸನಕ್ಕೆ ಕಾರಣವಾಗುವ ಅಂಶಗಳನ್ನು ಪರಿತ್ಯಾಗ ಮಾಡಿ ಜೀವನವನ್ನು ನವಜೀವನಗೊಳಿಸಬೇಕು” ಎಂದು ಶುಭ ಹಾರೈಸಿದರು.

 

 

 

 

ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಹೆಚ್. ಮಂಜುನಾಥ್‍ ಮಾತನಾಡಿ “ಮನುಷ್ಯ ಜೀವನವು ಹುಟ್ಟಿನಿಂದ ಸಾಯುವವರೆಗೆ ಬದಲಾವಣೆಯಾಗುತ್ತಿರುತ್ತದೆ. ಸಕಾರಾತ್ಮಕ ಬದಲಾವಣೆಯು ಮನುಷ್ಯನನ್ನು ಕೀರ್ತಿವಂತರನ್ನಾಗಿ ಮಾಡುತ್ತದೆ. ಇಂತಹ ಬದಲಾವಣೆಗೆ ಆಧ್ಯಾತ್ಮಿಕತೆ, ಸಂತೃಪ್ತ ಕುಟುಂಬ ಜೀವನ, ಸತ್ಸಂಗ ಬಹಳ ಮುಖ್ಯ. ನಿಜವಾದ ಸಂತೋಷ, ನಗು, ವಿಶ್ವಾಸ, ಪ್ರೀತಿ, ಪ್ರೇಮ ಪಡೆಯಲು ಪ್ರಯತ್ನ ಮಾಡಬೇಕು. ನಮ್ಮ ನಿಜವಾದ ಶಕ್ತಿಗೆ ಮದ್ಯಪಾನ ಲೋಪವಾಗಬಾರದು” ಎಂದು ಸಲಹೆ ನೀಡಿದರು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮತ್ತು ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ನಡೆದ ಈ ಶಿಬಿರದಲ್ಲಿ ರಾಜ್ಯದ ವಿವಿಧ ಕಡೆಗಳಿಂದ 53 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶಿಬಿರದಲ್ಲಿ ಶಿಬಿರಾಧಿಕಾರಿ ರಾಜೇಶ್‍ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಯೋಜನಾಧಿಕಾರಿ ಮೋಹನ್ ವಂದಿಸಿದರು. ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪಾೈಸ್ ಸಭೆಯಲ್ಲಿ ಉಪಸ್ಥಿತರಿದ್ದರು. ಈ ಶಿಬಿರದ ವ್ಯವಸ್ಥೆಯಲ್ಲಿ ಡಾ| ಮೋಹನದಾಸ ಗೌಡ, ಕೊಕ್ಕಡ, ಡಾ| ಬಾಲಕೃಷ್ಣ ಭಟ್, ಉಜಿರೆ, ಡಾ| ಶ್ರೀನಿವಾಸ ಭಟ್, ದೇರಳಕಟ್ಟೆ, ಶ್ರೀಮತಿ ಸುಮನ್ ಪಿಂಟೋ, ಮಂಗಳೂರು, ಡಾ| ಮಾರುತಿ ಶಾಂತಿವನ, ಉಜಿರೆ, ಫ್ರೊ. ಶಂಕರ್, ಪಟ್ಟಾಭಿರಾಮ ಸುಳ್ಯ, ಜಗದೀಶ್ ಶೆಟ್ಟಿ, ನೆಲ್ಲಿಕಟ್ಟೆ, ಡಿ.ಎ. ರಹಿಮಾನ್, ಶ್ರೀಮತಿ ಶಾರದ ಆರ್. ರೈ, ಆರೋಗ್ಯ ಸಹಾಯಕ ವೆಂಕಟೇಶ್, ಶಿಬಿರಾಧಿಕಾರಿ ನಾಗೇಂದ್ರ ಹೆಚ್.ಎಸ್. ಸಹಕರಿಸಿದರು. ಓಂಕಾರೇಶ್ವರ ಭಜನಾ ಮಂಡಳಿ ಕನ್ಯಾಡಿ, ಶ್ರೀರಾಮ ಭಜನಾ ಮಂಡಳಿ, ಕನ್ಯಾಡಿ, ಮನೆಮನ ಭಜನಾ ಮಂಡಳಿ, ಬೆದ್ರಬೆಟ್ಟು, ಶ್ರೀ ಕನ್ಯಾಕುಮಾರಿ ಮಹಿಳಾ ಭಜನಾ ಮಂಡಳಿ ಧರ್ಮಸ್ಥಳ., ಇವರುಗಳು ಭಜನೆಯ ಸೇವೆಯನ್ನು ನೀಡಿದರು. ಗಣೇಶ್, ಹಾಗೂ ಶ್ರೀಮತಿ ಸುನಂದ ನವಜೀವನ ಸದಸ್ಯರು ಭಾಗವಹಿಸಿ ಅನಿಸಿಕೆ ವ್ಯಕ್ತಪಡಿಸಿದರು. ಮುಂದಿನ ವಿಶೇಷ ಶಿಬಿರವು 2022 ನೇ ಡಿಸೆಂಬರ್ 5 ರಿಂದ ಪ್ರಾರಂಭವಾಗಲಿದೆ.

error: Content is protected !!