ಬೆಳ್ತಂಗಡಿ : ಕರ್ನಾಟಕ ರಾಜ್ಯದ ಹಲವೆಡೆ ಎಲೆಚುಕ್ಕಿ ರೋಗ ಕಾಣಿಸಿಕೊಳ್ಳುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆಯೂ ಎಲೆಚುಕ್ಕಿ ರೋಗದ ಆತಂಕ ರೈತರಲ್ಲಿ ಕಾಡತೊಡಗಿದೆ. ಈ ಬಗ್ಗೆ ತಾಲೂಕು ಪಂಚಾಯತ್ ಬೆಳ್ತಂಗಡಿ , ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ 2021-2022ನೇ ಸಾಲಿನ ಜಮಾಬಂದಿ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಎಚ್. ಆರ್ ನಾಯಕ್ ಇವರು ಎಲೆಚುಕ್ಕಿ ರೋಗದ ಬಗ್ಗೆ ಮಾಹಿತಿಯನ್ನು ಮಾದ್ಯಮದವರೊಂದಿಗೆ ಹಂಚಿಕೊಂಡರು.
ಶೃಂಗೇರಿಯಿಂದ ಆರಂಭವಾದ ಎಲೆಚುಕ್ಕಿರೋಗ ಸುಳ್ಯ, ಸಂಪಾಜೆ, ಮಡಿಕೇರಿ, ಕೊಪ್ಪ, ಕಳಸ ಸೇರಿದಂತೆ ಅನೇಕ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಹಾಗೂ ನೀರುಪಾಲದಲ್ಲೂ ಈ ರೋಗ ಹಬ್ಬಿದೆ. ಸುಮಾರು 3-4 ವರ್ಷದಿಂದ ಈ ರೋಗ ಕಾಣಿಸಿಕೊಳುತ್ತಿದ್ದು, ಈ ರೋಗವನ್ನು ತಡೆಯಲು ರೈತರು ಕೆಲವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಯಾವ ತೋಟದಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಳ್ಳುತ್ತಿದೆಯೋ ಆ ತೋಟಕ್ಕೆ ಔಷಧ ಸಿಂಪಡಿಸಬೇಕು. ರೋಗ ಹಿಡಿದ ಎಲೆಯನ್ನು, ಗರಿಯನ್ನು ತೆಗಿಯಬೇಕು ಜೊತೆಗೆ ಅದನ್ನು ಸುಡಬೇಕು. ತೋಟವನ್ನು ಆದಷ್ಟು ಶುಚಿಯಾಗಿಟ್ಟುಕೊಳ್ಳಬೇಕು. ಇದು ಒಂದು ಫಂಗಸ್‌ನಿಂದ ಹರಡುತ್ತಿರುವ ಕಾರಣ ಕೆಮಿಕಲ್ ಸ್ಪ್ರೇ ಮಾಡಬೇಕು. ಈ ಸಮಸ್ಯೆಯ ಬಗ್ಗೆ ಸರ್ಕಾರದ ಗಮನ ಸೆಳೆಯಲು ಒಂದು ತಂಡ ರಚನೆಯಾಗಿದ್ದು ಎಲ್ಲಾ ಕಡೆಯ ಮಾಹಿತಿಯನ್ನು ಕಲೆಹಾಕಿ ಸರ್ಕಾರಕ್ಕೆ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಸಂಶೋಧನೆಗಳು ನಡೆಯಲಿದೆ. ಇದಕ್ಕೆ ಸರ್ಕಾರದಿಂದ ಸಹಾಯ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ .ಬಿ, ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಉಪಕಾರ್ಯದರ್ಶಿ ಕೆ. ಆನಂದ್ ಕುಮಾರ್ ಉಪಸ್ಥಿತರಿದ್ದರು.