ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಶಾಶ್ವತ ನಿವೇಶನ ಒದಗಿಸಿ ಪತ್ರಿಕಾಭವನ ನಿರ್ಮಾಣಕ್ಕೆ ಸರಕಾರದಿಂದ ಅನುದಾನ ಒದಗಿಸುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರನ್ನು ಭೇಟಿ ಮಾಡಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಮನವಿ ಮಾಡಿದರು.
ಉಜಿರೆ ಓಷ್ಯನ್ ಪರ್ಲ್ ಹೋಟೆಲ್ ನಲ್ಲಿ ಶಾಸಕರೊಂದಿಗೆ ನಡೆದ ಸಭೆಯಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಬಿ.ಶಿರ್ಲಾಲು, ಕಾರ್ಯದರ್ಶಿ ಚೈತ್ರೇಶ್ ಇಳಂತಿಲ, ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ, ಜತೆಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಹಾಗೂ ಸದಸ್ಯರು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಶಾಸಕರು ಪ್ರತಿಕ್ರಿಯಿಸಿ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘವು ತಮ್ಮ ಸೇವಾತತ್ಪರತೆಯೊಂದಿಗೆ ರಾಜ್ಯದಲ್ಲಿಯೇ ಮಾದರಿ ಸಂಘವಾಗಿ ಗುರುತಿಸಿಕೊಂಡಿದೆ. ಬೆಳ್ತಂಗಡಿಯಲ್ಲಿ ಸುಸಜ್ಜಿತ ಪತ್ರಿಕಾಭವನದ ಅವಶ್ಯಕತೆ ಇದೆ. ಮುಂದೆ ಪತ್ರಿಕಾಭವನ ನಿರ್ಮಾಣಕ್ಕೆ ಬೇಕಾಗುವ ಅಗತ್ಯತೆ ಕುರಿತು ಸಂಪೂರ್ಣ ಮಾಹಿತಿ ನೀಡಿದ ಅವರು ಶಾಸಕನ ನೆಲೆಯಲ್ಲಿ ಅನುದಾನವನ್ನು ಒದಗಿಸುವುದಾಗಿಯೂ ಮನವಿಗೆ ಶೀಘ್ರವಾಗಿ ಸ್ಪಂದಿಸಿದರು.
ಪತ್ರಿಕಾಭವನ ಹಾಗೂ ನಿವೇಶನಕ್ಕೆ ಪೂರಕ ಅನುದಾನವನ್ನು ಸರಕಾರ ಹಾಗೂ ಇತರ ವ್ಯವಸ್ಥೆಯಡಿ ಒದಗಿಸಲು ಶಾಸಕನ ನೆಲೆಯಲ್ಲಿ ಪತ್ರಕರ್ತ ಮಿತ್ರರೊಂದಿಗಿರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಜಿಲ್ಲಾ ಸಂಘದ ಕಾರ್ಯದರ್ಶಿ ಭುವನೇಶ್ ಜಿ., ತಾಲೂಕು ಪತ್ರಕರ್ತರ ಸಂಘದ ಸದಸ್ಯರಾದ ಆರ್.ಎನ್. ಪೂವಣಿ, ಶ್ರೀನಿವಾಸ ತಂತ್ರಿ, ಮಂಜುನಾಥ್ ರೈ, ಬಿ.ಎಸ್.ಕುಲಾಲ್, ಶಿಬಿ ಧರ್ಮಸ್ಥಳ, ಮನೋಹರ್ ಬಳಂಜ, ಆಚುಶ್ರೀ ಬಾಂಗೇರು, ಹೃಷಿಕೇಶ್ ಧರ್ಮಸ್ಥಳ, ಪದ್ಮನಾಭ ಕುಲಾಲ್, ಜಾರಪ್ಪ ಪೂಜಾರಿ, ಅರವಿಂದ ಹೆಬ್ಬಾರ್, ಪ್ರಸಾದ್ ಶೆಟ್ಟಿ ಎಣಿಂಜೆ, ತುಕಾರಾಮ ಉಪಸ್ಥಿತರಿದ್ದರು.