ಮಂಗಳೂರು : ಮಂಗಳೂರಿನ ಮೊದಲ ಆಟೋ ಡ್ರೈವರ್ ಮೋಂತು ಲೋಬೋ(87) ಅವರು ಇಂದು ನಿಧನರಾಗಿದ್ದಾರೆ. ‘ಆಟೋ ರಾಜ’ ಎಂದೇ ಗುರುತಿಸಿಕೊಂಡಿದ್ದ ಮೋಂತು ಲೋಬೋ ಅವರು ಮಂಗಳೂರಿನ ಮೊದಲ ಲೈಸೆನ್ಸ್ ಹೊಂದಿದ್ದ ಮೊದಲ ಆಟೋ ಚಾಲಕರಾಗಿದ್ದರು. ಇಳಿವಯಸ್ಸಿನಲ್ಲೂ ಆಟೋ ಓಡಿಸುತ್ತಿದ್ದ ಅವರು ಅಲ್ಪಕಾಲದ ಅನಾರೋಗ್ಯದಿಂದ ನಗರದ ವೆಲೆನ್ಸಿಯಾ ಬಳಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಮಂಗಳೂರಿನ ಮೊದಲ ಆಟೋ ರಾಜ :
1935ರಲ್ಲಿ ಮಂಗಳೂರಿನಲ್ಲಿ ಜನಿಸಿದ ಮೋಂತು ಲೋಬೋ ಆರನೇ ತರಗತಿಯವರೆಗಷ್ಟೇ ಶಾಲೆಗೆ ಹೋಗಿದ್ದರು. ಮೋಂತು ಲೋಬೋ ಅವರು ತನ್ನ 20ನೇ ವಯಸ್ಸಿನಲ್ಲಿ ಆಟೋ ಓಡಿಸಲು ಆರಂಭಿಸಿದ ಇವರು ಲ್ಯಾಂಬೀ ರಿಕ್ಷಾವನ್ನು ಮೊದಲ ಬಾರಿಗೆ ಚಲಾಯಿಸಿದ್ದರು. ಬಳಿಕ ಅಚ್ಯುತ್ ಸಾಲಿಯಾನ್ ಎಂಬವರ ಬಳಿ ಇದ್ದ ಎರಡು ಆಟೋಗಳಲ್ಲಿ ಒಂದು ಆಟೋವನ್ನು ಮೋಂತು ಲೋಬೋ ಅವರು ಓಡಿಸುತ್ತಿದ್ದರು. 1955ರ ಹೊತ್ತಲ್ಲಿ ಮಂಗಳೂರಿನಲ್ಲಿ ಓಡಾಡಿದ ಏಳು ಆಟೋಗಳ ಪೈಕಿ ಮೋಂತು ಲೋಬೋ ಓಡಿಸಿದ ಆಟೋ ಮೊದಲನೆಯದಾಗಿದೆ.ಬಳಿಕ 2001ರಲ್ಲಿ ಮೋಂತು ಲೋಬೋ ಅವರು ಬ್ಯಾಂಕ್ ಲೋನ್ ಮಾಡಿ ಸ್ವಂತ ಆಟೋ ರಿಕ್ಷಾ ಖರೀದಿಸಿದ್ದರು. ಅವರು ಇದುವರೆಗೆ ಒಟ್ಟು 14 ಆಟೋಗಳನ್ನು ಖರೀದಿಸಿ ಚಾಲನೆ ಮಾಡಿದ್ದಾರೆ. ಅವರು ತಮ್ಮ 66 ವರ್ಷಗಳ ಚಾಲನಾ ಬದುಕಿನಲ್ಲಿ ಒಂದು ಸಲ ಮಾತ್ರ ವಾಹನ ಅಪಘಾತ ಮಾಡಿದ್ದಾರೆ.
ಮೋಂತೋ ಲೋಬೋರ ಅವರ ಸೇವೆಯನ್ನು ಪರಿಗಣಿಸಿ ದ.ಕ ಜಿಲ್ಲಾಡಳಿತ, ಆರ್‌ಟಿಒ ಮತ್ತು ಪೊಲೀಸ್ ಇಲಾಖೆ 19 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸಂದರ್ಭದಲ್ಲಿ ಗೌರವಿಸಿತ್ತು. ಮಂಗಳೂರಿನಲ್ಲಿ ‘ಆಟೋ ರಾಜ’ ಬಿರುದು ಹಾಗೂ ಬೆಂಗಳೂರಿನಲ್ಲಿ ‘ಸಾರಥಿ ನಂಬರ್ 1’ ಪ್ರಶಸ್ತಿ ಇವರಿಗೆ ಸಿಕ್ಕಿದೆ.