ತೋಟತ್ತಾಡಿ ನೆಲ್ಲಿಗುಡ್ಡೆ ಯುವಕ ಆತ್ಮಹತ್ಯೆ ಪ್ರಕರಣ: ಸಂಘದ ಸದಸ್ಯರ ಕಿರುಕುಳವೇ ಆತ್ಮಹತ್ಯೆಗೆ ಕಾರಣ: ಸಾಲ ಕಟ್ಟಲಿಲ್ಲ ಎಂದು ಮಾನಸಿಕ ಹಿಂಸೆ ನೀಡಿ ಬೆದರಿಕೆ: ಕಾರಣರಾದವರ ವಿರುದ್ಧ ದೂರು ನೀಡಿದರೂ ಬಂಧಿಸಿಲ್ಲ: ನ 07 ರಂದು ಧರ್ಮಸ್ಥಳ ಪೊಲೀಸ್ ಠಾಣೆ ಎದುರು ಪ್ರತಿಭಟನೆ, ಮೃತ ಯುವಕನ ಪೋಷಕರಿಂದ ಪತ್ರಿಕಾಗೋಷ್ಠಿ:

 

 

ಬೆಳ್ತಂಗಡಿ: ಸಂಘದಲ್ಲಿ ತೆಗೆದ ಸಾಲ ಯುವಕನೋರ್ವನ ಸಾವಿಗೆ ಕಾರಣವಾದ ಘಟನೆ ಸೆ.‌23 ರಂದು ಬೆಳ್ತಂಗಡಿ ತಾಲೂಕಿನ‌ ತೋಟತ್ತಾಡಿ ಗ್ರಾಮದ ನೆಲ್ಲಿಗೆಡ್ಡೆ ಮನೆಯಲ್ಲಿ ನಡೆದಿತ್ತು. ಆದರೆ ಯುವಕನ ಸಾವಿಗೆ ಸಂಘದವರೇ ನೀಡಿದ ಕೊಲೆ‌ ಬೆದರಿಕೆ, ಹಾಗೂ ಪ್ರಚೋದನೆ ಕಾರಣವಾಗಿದ್ದರೂ ಆರೋಪಿಗಳನ್ನು ಇನ್ನೂ ಬಂಧಿಸಲಿಲ್ಲ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯ ಮುಂದೆ ನ.07 ರಂದು ಪ್ರತಿಭಟನೆ ನಡೆಸುವುದಾಗಿ‌ ಮೃತ ಯುವಕನ ಪೋಷಕರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಘಟನೆಯ ವಿವರ

ಆನಂದ ಪೂಜಾರಿ ಎಂಬವರ ಮಗ ಚಂದ್ರಶೇಖರನು ಅಣಿಯೂರಿನ ಶಬರಿ ಸ್ವ ಸಹಾಯ ಸಂಘದ ಸದಸ್ಯನಾಗಿದ್ದಾನೆ. ಸಂಘದಲ್ಲಿ ಒಟ್ಟು 8 ಜನ ಸದಸ್ಯರಿದ್ದು, ಕಳೆದ ವರ್ಷ ಸಂಘಕ್ಕೆ ಉಜಿರೆ ವಿಶ್ವಕರ್ಮ ಬ್ಯಾಂಕ್. 4 ಲಕ್ಷ ರೂ ಸಾಲವನ್ನು ನೀಡಿದ್ದು ಸದ್ರಿ ಹಣವನ್ನು 8 ಜನ ಸದಸ್ಯರುಗಳು ಹಂಚಿಕೊಂಡಿದ್ದು, ಚಂದ್ರಶೇಖರನ ಹೆಸರಿನಲ್ಲಿ ಯೋಗೀಶ ಎಂಬವನು ಹಣ ಪಡೆದುಕೊಂಡಿದ್ದ. ಆದರೆ ಈತ ಬಳಿಕ ಸಾಲದ ಹಣವನ್ನು ಸಂಘಕ್ಕೆ ಕಟ್ಟದೆ , ಹಣ ಕಟ್ಟುವಂತೆ ಚಂದ್ರಶೇಖರನಿಗೆ ತಾಕೀತು ಮಾಡಿರುತ್ತಾನೆ. ಈ ಬಗ್ಗೆ ಯೋಗೀಶ್ ಗೆ ಎಷ್ಟೇ ಬಾರೀ ಹೇಳಿದರೂ ಹಣ ಮರುಪಾವತಿ ಮಾಡಲಿಲ್ಲ.

ಬಳಿಕ ಸ್ವ ಸಹಾಯ ಸಂಘದ ಸದಸ್ಯರುಗಳಾದ ನೆರಿಯ ಗ್ರಾಮ ಪಂಚಾಯತ್ ಸದಸ್ಯ ಸಚಿನ್, ಯೋಗೀಶ್, ನಾರಾಯಣ ಹಾಗೂ ಸುದರ್ಶನ್ ಎಂಬವರುಗಳು ಯೋಗೀಶ ತೆಗೆದ ಎಲ್ಲಾ ಹಣವನ್ನು ಚಂದ್ರಶೇಖರನೇ ಕಟ್ಟಬೇಕು ಎಂದು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೆ ಆ 23ರಂದು ಚಂದ್ರಶೇಖರ ಸಂಜೆ 05.30ರ ವೇಳೆಗೆ ಮನೆಯ ಕಡೆ ಬರುವಾಗ ನೆರಿಯ ಗ್ರಾಮದ ಬಯಲು ಬಸ್ಸು ನಿಲ್ದಾಣದ ಬಳಿ ಆರೋಪಿಗಳಾದ ಸಚಿನ್, ಯೋಗೀಶ್, ನಾರಾಯಣ ಮತ್ತು ಸುದರ್ಶನ್ ರವರುಗಳು ಆತನನ್ನು ತಡೆದು ನಿಲ್ಲಿಸಿ ನಾವು ಸಂಘದ ಕಟ್ಟುವುದಿಲ್ಲ. ಬೇಕಿದ್ದರೆ, ನೀನೇ ಕಟ್ಟು ಎಂದಿದ್ದಲ್ಲದೆ ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೆ ಕೊಲೆ ಬೆದರಿಕೆ ಹಾಕಿದ್ದಾರೆ.

ಘಟನೆಯ‌ ಬಳಿಕ ಚಂದ್ರಶೇಖರ ಮನೆಯಲ್ಲಿ ಮಂಕಾಗಿದ್ದು, ಯಾರೊಂದಿಗೂ ಬೆರೆಯದೆ , ಸರಿಯಾಗಿ ಊಟ,ನಿದ್ದೆ ಮಾಡದೆ ಇರುತ್ತಿದ್ದ. ಆ 25 ರಂದು ಬೆಳಿಗ್ಗೆ 06.30ಕ್ಕೆ ಬಚ್ಚಲು ಕೊಟ್ಟಿಗೆಯಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಮನೆಯವರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಸೆ.29 ರಂದು ಚಂದ್ರಶೇಖರ ಸಾವನ್ನಪ್ಪಿದ್ದಾನೆ.

ಆರೋಪಿಗಳ ವಿರುದ್ಧ ಪೋಷಕರ ದೂರು : ರಾಜಾರೋಷವಾಗಿ ತಿರುಗಾಡುತ್ತಿರುವ ಆರೋಪಿಗಳು

ಘಟನೆಗೆ ಸಂಬಂದಪಟ್ಟಂತೆ ಮೃತ ಚಂದ್ರಶೇಖರನ ಪೋಷಕರು ಆರೋಪಿಗಳ ವಿರುದ್ಧ ದೂರು ನೀಡಿದರೂ ಆರೋಪಿಗಳನ್ನು ಪೊಲೀಸರು ಬಂದಿಸಲಿಲ್ಲ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಅಳಲುತೋಡಿಕೊಂಡ ಚಂದ್ರಶೇಖರ್ ತಂದೆ ‘ಆರೋಪಿಗಳ ಪೈಕಿ ಸಚಿನ್ ಎಂಬಾತನು ನೆರಿಯ ಪಂಚಾಯತ್ ಬಿ.ಜೆ.ಪಿ ಬೆಂಬಲಿತ ಗ್ರಾಮ ಪಂಚಾಯತ್‌ ಸದಸ್ಯನಾಗಿದ್ದು ಊರಿನಲ್ಲಿ ರೌಡಿಯಂತೆ ವರ್ತಿಸುತ್ತಿದ್ದು ಈಗಲೂ ರಾಜಾರೋಷವಾಗಿ ಊರಿನಲ್ಲಿ ತಿರುಗಾಡಿಕೊಂಡಿರುತ್ತಾನೆ, ಆತನ ವಿರುದ್ಧ ಈ ಹಿಂದೆ ತನ್ನ ಚಿಕ್ಕಪ್ಪನ ಮನೆಯಿಂದ ಹಣ ಮತ್ತು ಬಂಗಾರ ಕದ್ದ ಪ್ರಕರಣ ಕೂಡ ಇರುತ್ತದೆ. ಆತ ಮತ್ತು ಆತನ ಸಹಚರರು ನಮಗೆ ಶಾಸಕರ ರಾಜಕೀಯ ಬೆಂಬಲ ಇದೆ, ನಮ್ಮನ್ನು ಯಾರಿಂದಲೂ ಏನು ಮಾಡೋದಕ್ಕೂ ಆಗಲ್ಲ ಎಂದು ರಾಜಾರೋಷವಾಗಿ ತಿರುಗಾಡಿಕೊಂಡಿರುತ್ತಾರೆ. ಇದರಿಂದಾಗಿ ಭಯ ನಮಗೆ ಉಂಟಾಗಿದೆ ಎಂದಿದ್ದಾರೆ.‌

ನ.7 ರಂದು ಧರಣಿಗೆ ನಿರ್ಧಾರ

ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ ಆನಂದ ಪೂಜಾರಿಯವರು ಆರೋಪಿಗಳನ್ನು ತಕ್ಷಣ ಬಂದಿಸಿ ಕಾನೂನುಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ನಾನು, ನಮ್ಮ ಕುಟುಂಬಸ್ಥರು ಮತ್ತು ಊರಿನವರು ಸೇರಿ ನ.7 ರಂದು ಸೋಮವಾರ ಪೂರ್ವಾಹ್ನ 10 ಗಂಟೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಮುಂದೆ ಅಮರಣಾಂತ ಧರಣಿ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ವಕೀಲರಾದ ಮನೋಹರ್ ಇಳಂತಿಲ, ಮೃತ ಚಂದ್ರಶೇಖರ ಪೂಜಾರಿಯವರ ತಂದೆ ಆನಂದ ಪೂಜಾರಿ, ತಾಯಿ ಪುಷ್ಪವತಿ, ಸಹೋದರ ವಿನಯ ಕುಮಾರ್, ಸ್ಥಳೀಯರಾದ ಸನತ್ ಕೋಟ್ಯಾನ್, ರಾಜನ್ ನೆಲ್ಲಿಗುಡ್ಡೆ ಮತ್ತು ಮಂಜುನಾಥ್ ನೆಲ್ಲಿಗುಡ್ಡೆ ಉಪಸ್ಥಿತರಿದ್ದರು.

error: Content is protected !!