ಪ್ರಕೃತಿ ಚಿಕಿತ್ಸಾ ಪದ್ಧತಿ ವಿಶ್ವದಲ್ಲೇ ಶ್ರೇಷ್ಠ: ಪ್ರಮೋದ್ ಸಾವಂತ್.

 

 

 

ಬೆಳ್ತಂಗಡಿ: ಆರೋಗ್ಯ ಭಾಗ್ಯ ಕಾಪಾಡಲು ಸಾವಿರಾರು ವರ್ಷಗಳಿಂದ ಭಾರತದಲ್ಲಿ ಋಷಿ-ಮುನಿಗಳು ಪ್ರಶಾಂತ ಪ್ರಕೃತಿಯ ಮಡಿಲಲ್ಲಿ ಬಳಸುತ್ತಿದ್ದ ಪ್ರಕೃತಿ ಚಿಕಿತ್ಸಾ ಪದ್ಧತಿ ಮತ್ತು ಯೋಗ ವಿಜ್ಞಾನವು ವಿಶ್ವದಲ್ಲೆ ಅತ್ಯಂತ ಜನಪ್ರಿಯ ಹಾಗೂ ಶ್ರೇಷ್ಠ ಶುಶ್ರೂಷಾ ವಿಧಾನವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು.
ಅವರು ಶನಿವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಉಜಿರೆಯ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಕಾಲೇಜಿನ 230 ಪದವೀಧರರಿಗೆ ಪದವಿ ಪ್ರದಾನ ಮಾಡಿ ಶುಭ ಹಾರೈಸಿದರು.

 

ಪ್ರಕೃತಿಯಲ್ಲಿರುವ ಪಂಚಭೂತಗಳನ್ನು ಬಳಸಿ ಪ್ರಕೃತಿ ಚಿಕಿತ್ಸಾ ಪದ್ಧತಿಯಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲಾಗುತ್ತದೆ. ಆಧುನಿಕ ಆಹಾರ ಸೇವನಾ ವಿಧಾನ, ಸದಾ ಒತ್ತಡ, ಭಯ, ಆತಂಕ ಮತ್ತು ಗಡಿಬಿಡಿಯ ಜೀವನ ಶೈಲಿ ಹಾಗೂ ಸಕಾಲದಲ್ಲಿ ಊಟ, ನಿದ್ರೆ, ವಿಶ್ರಾಂತಿ ಮಾಡದಿರುವುದು ಮೊದಲಾದ ಹತ್ತು-ಹಲವು ಕಾರಣಗಳಿಂದ ಪಂಚೇಂದ್ರಿಯಗಳ ನಿಯಂತ್ರಣವಿಲ್ಲದೆ ಎಲ್ಲರೂ ಅನೇಕ ರೋಗಗಳಿಗೆ ಬಲಿಯಾಗುತ್ತಾರೆ.
ಪ್ರಧಾನಿ ನರೇಂದ್ರ ಮೋದಿಯವರ ದಕ್ಷ ನೇತೃತ್ವದಲ್ಲಿ ಪ್ರಕೃತಿ ಚಿಕಿತ್ಸಾ ವಿಧಾನ ಮತ್ತು ಯೋಗಾಭ್ಯಾಸ ಭಾರತಕ್ಕೆ ವಿಶ್ವಗುರುವಿನ ಮಾನ್ಯತೆ ದೊರಕಿದೆ.

 

 

 

ವಿಶ್ವದೆಲ್ಲೆಡೆ ಜೂನ್ 21 ವಿಶ್ವಯೋಗ ದಿನಾಚರಣೆ ಮಾಡುತ್ತಿದ್ದೇವೆ. ಮಹಾತ್ಮಾ ಗಾಂಧೀಜಿ ಕೂಡಾ ಪ್ರಕೃತಿ ಚಿಕಿತ್ಸಾ ವಿಧಾನ ಮತ್ತು ಯೋಗಾಭ್ಯಾಸ ಬಳಸುತ್ತಿದ್ದರು. ನಾವು ಎಷ್ಟು ವರ್ಷ ಬದುಕುತ್ತೇವೆ ಅನ್ನುವುದಕ್ಕಿಂತ ಎಷ್ಟು ಆರೋಗ್ಯವಂತರಾಗಿ ಬದುಕುತ್ತೇವೆ ಎಂಬುದು ಮುಖ್ಯವಾಗಿದೆ.
ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನದ ಬಗ್ಯೆ ಜನರಿಗೆ ವಿಶ್ವಾಸ ಮತ್ತು ಗೌರವ ಬರುವಂತೆ ನೂತನ ಪದವೀಧರರು ಪ್ರಯತ್ನಿಸಬೇಕು. ಸದಾ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು. ಉತ್ತಮ ಸಂವಹನ ಕಲೆಯನ್ನು ಬೆಳೆಸಿಕೊಂಡು ತಮ್ಮಲ್ಲಿ ಬಂದವರಿಗೆ ಆಪ್ತ ಸಮಾಲೋಚನೆ ಮತ್ತು ಆಪ್ತಸಲಹೆಯೊಂದಿಗೆ, ಈ ಪ್ರಾಚೀನ ಪದ್ಧತಿ ಬಗ್ಯೆ ವಿಶ್ವಾಸ, ನಂಬಿಕೆ ಮತ್ತು ಗೌರವ ಮೂಡಿ ಬರುವಂತೆ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಸದಾ ನಗುಮೊಗದೊಂದಿಗೆ ಮಾನವೀಯತೆಯಿಂದ ಸೇವೆ ನೀಡಬೇಕು ಎಂದು ಅವರು ತಿಳಿಸಿದರು.

 

 

ನೂತನ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ.ಕೆ. ರಮೇಶ್ ಮಾತನಾಡಿ, ಸಂಶೋಧನೆ ಮತ್ತು ದಾಖಲಾತಿಗೆ ಹೆಚ್ಚಿನ ಒತ್ತು ನೀಡಿ, ನೂತನ ಪದವೀಧರರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವೈದ್ಯ ವೃತ್ತಿ ಪವಿತ್ರವಾಗಿದ್ದು ರೋಗಿಗಳ ಸೇವೆ ಮಾಡಬೇಕು. ಅಲೋಪತಿಗೆ ಕೇವಲ 200 ವರ್ಷಗಳ ಇತಿಹಾಸವಿದ್ದರೆ ಪ್ರಕೃತಿ ಚಿಕಿತ್ಸೆಗೆ ಸಾವಿರಾರು ವರ್ಷಗಳ ಹಿನ್ನೆಲೆ ಇದ್ದು ಇಂದು ವಿಶ್ವದೆಲ್ಲೆಡೆ ಜನಪ್ರಯವಾಗಿದೆ ಎಂದರು. ವಿವಿಧ ವೈದ್ಯಕೀಯ ಪದ್ಧತಿಗಳು ಪರಸ್ಪರ ಪೂರಕವಾಗಿ ಸೇವೆ ನೀಡಬೇಕು. ಸ್ಪರ್ಧೆ ಸಲ್ಲದು ಎಂದು ಅವರು ಕಿವಿಮಾತು ಹೇಳಿದರು.
ಎಸ್. ಡಿ.ಎಂ. ಶಿಕ್ಷಣ ಸಂಸ್ಥೆಗಳು ಹಾಗೂ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳ ಗುಣಮಟ್ಟವನ್ನು ಶ್ಲಾಘಿಸಿ ಅವರು ಹೆಗ್ಗಡೆಯವರನ್ನು ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಸಕಾಲದಲ್ಲಿ ಹಿತ-ಮಿತ ಆಹಾರ ಸೇವನೆಯಿಂದ ಆರೋಗ್ಯಭಾಗ್ಯ ಹೊಂದಬಹುದು. ಧರ್ಮಸ್ಥಳದ ವತಿಯಿಂದ ಬೆಂಗಳೂರಿನ ನೆಲಮಂಗಲ, ಪರೀಕಾ ಮಣಿಪಾಲ, ಮತ್ತು ಧರ್ಮಸ್ಥಳದಲ್ಲಿ ಮೂರು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗಳಿದ್ದು ಸದಾ ಸಾಧಕರಿಂದ ತುಂಬಿರುತ್ತದೆ. ಹಾಸನ, ಉಡುಪಿ ಮತ್ತು ಬೆಂಗಳೂರಿನಲ್ಲಿರುವ ಆಯುರ್ವೇದ ಆಸ್ಪತ್ರೆಗಳಿಗೂ ಒಳ್ಳೆಯ ಪ್ರತಿಕ್ರಿಯೆ ದೊರಕುತ್ತಿದೆ. ಭಾರತದ ಪ್ರಾಚೀನ ಚಿಕಿತ್ಸಾ ಪದ್ಧತಿ ಬಗ್ಯೆ ಜನರಿಗಿರುವ ವಿಶ್ವಾಸ ಮತ್ತು ಗೌರವಕ್ಕೆ ಇದೇ ಸಾಕ್ಷಿಯಾಗಿದೆ ಎಂದರು. ಪ್ರತಿ ವರ್ಷವೂ ಹೆಚ್ಚಿನವರು ಇಲ್ಲಿ ಬಂದು ಸಾಧಕರಾಗಿ ಆರೋಗ್ಯವನ್ನು ಪುನಶ್ಚೇತನಗೊಳಿಸುತ್ತಾರೆ ಎಂದು ಅವರು ಶ್ಲಾಘಿಸಿದರು.
ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್,  ಉಪಸ್ಥಿತರಿದ್ದರು.
ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಜಲಚಿಕಿತ್ಸಾ ವಿಭಾಗದ ಡೀನ್ ಡಾ. ಸುಜಾತ ಧನ್ಯವಾದವಿತ್ತರು. ಡಾ. ಜೋಸ್ನಾ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!