ಬಿಲ್ಲವರು ರಾಜಕೀಯವನ್ನು ಹೊರಗಿಟ್ಟು ಸಂಘಟನೆಯನ್ನು ಗಟ್ಟಿಗೊಳಿಸಬೇಕು:ವಸಂತ ಬಂಗೇರ: ಅಳದಂಗಡಿ ಗುರುಪೂಜೆ ಹಾಗೂ ಸತ್ಯನಾರಾಯಣ ಪೂಜೆ:

 

ಬೆಳ್ತಂಗಡಿ : ಹಿಂದುಳಿದ ಸಮಾಜಕ್ಕೆ ನ್ಯಾಯ ನೀಡಿದವರು ನಾರಾಯಣ ಗುರುಗಳು. ಅವರನ್ನು ಆರಾಧಿಸುವರು ನಾವು ಬಿಲ್ಲವರು ಎಂದು ಸಂತೋಷದಿಂದ ಹೇಳಬೇಕು. ನಾರಾಯಣ ಗುರುಗಳ ತತ್ವ ಸಂದೇಶದ ಅಡಿಯಲ್ಲಿ ಸಂಘಟಿತವಾಗುವ ಬಿಲ್ಲವ ಸಂಘಟನೆ ರಾಜಕೀಯವನ್ನು ಹೊರಗಿಟ್ಟು ಸಂಘಟನೆಯನ್ನು ಗಟ್ಟಿಗೊಳಿಸಬೇಕು’ ಎಂದು ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಗೌರವಾಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.

ಅವರು ಅಳದಂಗಡಿ ನಮನ ಸಭಾ ಭವನದಲ್ಲಿ ನಡೆದ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಅಳದಂಗಡಿ ವಲಯ ವ್ಯಾಪ್ತಿಯ ಬಡಗಕಾರಂದೂರು, ಸುಳ್ಕೇರಿಮೊಗ್ರು, ಪಿಲ್ಯ, ಕುದ್ಯಾಡಿ, ನಾವರ, ಸುಳ್ಳೇರಿ ಗ್ರಾಮ ಸಮಿತಿಗಳ ಜಂಟಿ ಆಶ್ರಯದಲ್ಲಿ ನಡೆದ ಶ್ರೀ ಸತ್ಯ ನಾರಾಯಣ ಪೂಜೆ ಹಾಗೂ ಗುರು ಪೂಜೆ ಮತ್ತು ಸಮಾಜದ ಆಸಕ್ತ ಕುಟುಂಬಗಳಿಗೆ ಆರ್ಥಿಕ ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು .

ಗುರು ಸಂದೇಶ ನೀಡಿದ ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಮಾತನಾಡಿ,
‘ನಾರಾಯಣ ಗುರುಗಳ ಸಂದೇಶವನ್ನು ಸರಿಯಾಗಿ ಅರ್ಥೈಸಿಕೊಂಡಾಗ ಸರಿ – ತಪ್ಪುಗಳ ವಿವೇಚನಾ ಶಕ್ತಿ ಪ್ರಾಪ್ತವಾಗುವುದು. ಜಗತ್ತಿನ ಶ್ರೇಷ್ಠ ಸಂತರಾದ ನಾರಾಯಣ ಗುರುಗಳನ್ನು ಯಾವ ಕಾರಣಕ್ಕಾಗಿಯೂ ರಾಜಕೀಯದ ಸರಕಾಗಿಸಬಾರದು. ನಾವು ಓದಿ, ಕೇಳಿ ಜ್ಞಾನವನ್ನು ಹೊಂದಿಕೊಳ್ಳಬೇಕು ಹೊರತು ಸಾಮಾಜಿಕ ಜಾಲತಾಣವನ್ನು ನಂಬಿಕೊಂಡು ಅಲ್ಲ’ ಎಂದರು

ಸಂಘಟನಾ ಭಾಷಣ ಮಾಡಿದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್ ಮಾತನಾಡಿ, ‘ ಪ್ರೀತಿಯಿಂದ ಮಾತ್ರ ಜಗತ್ತನ್ನು ಗೆಲ್ಲಲು ಸಾಧ್ಯ. ರಾಜಕೀಯ ಕಾರಣಕ್ಕಾಗಿ ನಾವು ಬಲಿಪಶುವಾಗಬಾರದು. ನಾರಾಯಣ ಗುರುಗಳ ತತ್ವ ಸಂದೇಶಕ್ಕೆ ಪೆಟ್ಟು ಬಿದ್ದಾಗ ನಾವು ಒಗ್ಗಟ್ಟಾಗಿ ಪ್ರತಿರೋಧ ವ್ಯಕ್ತಪಡಿಸಬೇಕು. ಸಂಘಟನೆ ಒಡೆಯಲು ಬರುವವರಿಗೆ ತಕ್ಕ ಪಾಠ ಕಲಿಸುವ ಕೆಲಸ ಮಾಡಬೇಕು. ಹೆಚ್ಚು ಹೆಚ್ಚು ರಾಜಕೀಯ ಪ್ರಾತಿನಿಧ್ಯ ನೀಡಿ ಸಮಾಜವನ್ನು ಗಟ್ಟಿಗೊಳಿಸಬೇಕು. ನಾವು ಮೊದಲು ನಮ್ಮ ಮನೆಯನ್ನು ಬೆಳಗುವ ಕಾರ್ಯವನ್ನು ಮಾಡಿ ಆ ಬಳಿಕ ದೇಶ ಸೇವೆಯ ಕಡೆಗೆ ಸಾಗಬೇಕು. ಯಾವುದೇ ಸಂದರ್ಭದಲ್ಲಿ ಕಾನೂನು ಬಾಹಿರ ಕೆಲಸ ನಮ್ಮಿಂದಾಗದ ಹಾಗೆ ಜಾಗರೂಕರಾಗಿರಬೇಕು’ ಎಂದರು.

ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಮಾತನಾಡಿ, ‘ತಾಲ್ಲೂಕಿನಲ್ಲಿ ಅತಿ ಹೆಚ್ಚು ಬಿಲ್ಲವರು ಇದ್ದು, ಸಮುದಾಯಕ್ಕಾಗಿ ನಾವು ನಿರಂತರವಾಗಿ ಕಾರ್ಯೋನ್ಮುಖರಾಗಬೇಕಾಗಿದೆ. ನಮ್ಮದು ಎಂದು ಹೇಳಿಕೊಳ್ಳುವ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಕೇಂದ್ರಗಳ ಸ್ಥಾಪನೆ ಕಡೆಗೆ ಹೆಚ್ಚು ಗಮನ ನೀಡಬೇಕಾಗಿದೆ ‘ ಎಂದರು.

ಅಳದಂಗಡಿ ವಲಯ ಸಮಿತಿಯ ಅಧ್ಯಕ್ಷ ಸಂಜೀವ ಪೂಜಾರಿ ಗುರುದೇವ ಕೊಡಂಗೆ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮ ಉದ್ದೇಶಿಸಿ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ, ಅಳದಂಗಡಿ ಸುವರ್ಣ ಕ್ಲಿನಿಕ್ ನ ಡಾ. ಹರಿಪ್ರಸಾದ್ ಸುವರ್ಣ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೇಶ್ ಹೆಚ್ ಮಾತನಾಡಿದರು.

ವೇದಿಕೆಯಲ್ಲಿ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ಗಂಗಾಧರ ಮಿತ್ತಮಾರ್, ಕಾರ್ಯದರ್ಶಿ ಜಯ ವಿಕ್ರಮ್, ನಿರ್ದೇಶಕಿ ಪುಷ್ಪಾವತಿ ಎನ್ ನಾವರ, ವಸಂತಿ ಸಿ ಪೂಜಾರಿ, ಗ್ರಾಮ ಸಮಿತಿಗಳ ಅಧ್ಯಕ್ಷರುಗಳಾದ ಕೊರಗಪ್ಪ ಪೂಜಾರಿ ಪಿಲ್ಯ, ವಿಶ್ವನಾಥ ಪೂಜಾರಿ ಕುದ್ಯಾಡಿ, ಕೊರಗಪ್ಪ ಪೂಜಾರಿ ಸುಳ್ಕೇರಿ, ನವೀನ್ ಕುಮಾರ್ ನಾವರ, ನಾವರ ಬಿಲ್ಲವ ಸಂಘದ ಅಧ್ಯಕ್ಷೆ ಅರುಣ ಕೋಟ್ಯಾನ್ ಇದ್ದರು.

ವಲಯ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿಯವರನ್ನು ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಹಾಗೂ ಅಳದಂಗಡಿ ವಲಯದ ಗ್ರಾಮ ಸಮಿತಿಗಳ ಪರವಾಗಿ ಸನ್ಮಾನಿಸಲಾಯಿತು.
ಸಮಾಜದ ಅಸಕ್ತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಯಿತು.

ಸುಳ್ಕೇರಿಮೊಗ್ರು ಗ್ರಾಮ ಸಮಿತಿ ಅಧ್ಯಕ್ಷ ಸಂಕೇತ್ ಬಂಗೇರ ಸ್ವಾಗತಿಸಿದರು. ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಕೋಶಾಧಿಕಾರಿ ನಿತ್ಯಾನಂದ ನಾವರ ಪ್ರಸ್ತಾವಿಸಿದರು. ಸಮೀಕ್ಷಾ ಬಾರ್ಲೋಡಿ ಕಾರ್ಯಕ್ರಮ ನಿರೂಪಿಸಿ, ವಲಯ ಸಮಿತಿ ಕಾರ್ಯದರ್ಶಿ ಸಂದೀಪ್ ನೀರಲ್ಕೆ ವಂದಿಸಿದರು.

ನಿರಂಜನ ಶಾಂತಿ ಕೊಹಿನೂರು ತಂಡದಿಂದ ಪೂಜಾ ಕಾರ್ಯಕ್ರಮ, ಬಳಂಜ ಬ್ರಹ್ಮಶ್ರೀ ಮಹಿಳಾ ವೇದಿಕೆ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

error: Content is protected !!