ಗ್ರಾಮ ಲೆಕ್ಕಿಗ ಜಯಚಂದ್ರ ಮಂಡ್ಯದಲ್ಲಿ ಬಂಧನ, ಮಧ್ಯವರ್ತಿ ನಾಪತ್ತೆ!: ಕಂದಾಯ ಇಲಾಖೆ ದಾಖಲೆಗಳ ದುರುಪಯೋಗ ಆರೋಪ ಹಿನ್ನೆಲೆ ಕ್ರಮ: ಅಕ್ರಮ ಸಕ್ರಮ ಫೈಲ್ ಬ್ರೋಕರ್ ಕೈಗೆ, ಆಂತರಿಕ ‌ತನಿಖೆ ನಡೆಸಿ ತಹಶೀಲ್ದಾರ್ ರಿಂದ ಪೊಲೀಸರಿಗೆ ದೂರು

 

ಬೆಳ್ತಂಗಡಿ : ಕಂದಾಯ ಇಲಾಖೆಯ ಕಡತಗಳನ್ನು ದುರುಪಯೋಗ ಮಾಡಿದ ಆರೋಪದಲ್ಲಿ ಗ್ರಾಮ ಕರಣೀಕನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಘಟನೆ ವಿವರ : ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ 2018 ಜೂನ್ 01 ರಿಂದ 2022 ಆಗಸ್ಟ್ 16 ರ ತನಕ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹೋಬಳಿಯ ಅಕ್ರಮ ಸಕ್ರಮದ ಎನ್.ಸಿ.ಆರ್ ಫೈಲ್ ಗಳ ಕೇಸ್ ವರ್ಕರ್ ಅಗಿದ್ದ ಜಯಚಂದ್ರ(36) ಎಂಬಾತ ಶಿಬಾಜೆಯ ಬ್ರೋಕರ್ ಪಿ.ಎನ್.ರಾಜು (48) ಎಂಬಾತನ ಜೊತೆ ಸೇರಿ ಹಣ ಮಾಡುವ ಉದ್ದೇಶದಿಂದ ಸರಕಾರಿ ಕರ್ತವ್ಯವನ್ನು ಸರಿಯಾಗಿ ಮಾಡದೆ ಫೈಲ್ ಗಳನ್ನು ಬ್ರೋಕರ್ ಕೈಗೆ ನೀಡಿ ಬಚ್ಚಿಟ್ಟು ನಂತರ‌ ಬ್ರೋಕರ್ ಬೆಳ್ತಂಗಡಿ ತಾಲೂಕು ಕಚೇರಿಗೆ ನೀಡಿದ್ದಾನೆ‌. ಈ ವಿಚಾರ ತಿಳಿದ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅಂತರಿಕ ತನಿಖೆ ನಡೆಸಿದಾಗ ಇಬ್ಬರು ಸೇರಿ ಸರಕಾರಕ್ಕೆ ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ ತಕ್ಷಣ ಪುತ್ತೂರು ಎ.ಸಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದು ಅವರ ಅದೇಶದಂತೆ 2022 ನೇ ಆಗಸ್ಟ್ 17 ರಂದು ತಹಶೀಲ್ದಾರ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬುಧವಾರ ಆರೋಪಿ ಬೆಳ್ತಂಗಡಿ ಹೋಬಳಿ ಪುತ್ತಿಲ, ಬಾರ್ಯ, ತಣ್ಣಿರುಪಂಥ ಗ್ರಾಮದ ಗ್ರಾಮಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಯಚಂದ್ರ ಎಂಬಾತನನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿರುವ ತನ್ನ ಮನೆಯಿಂದ ವಶಕ್ಕೆ ಪಡೆದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಸಂಜೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ‌. ಇನ್ನೊರ್ವ ಆರೋಪಿ ಬ್ರೋಕರ್ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಪಡಂತಾಜೆ ನಿವಾಸಿ ಪಿ.ಎನ್‌.ರಾಜು ಕಳೆದ ನಾಲ್ಕು ದಿನದಿಂದ ಮೊಬೈಲ್ ಸ್ವೀಚ್ ಆಫ್ ಮಾಡಿ  ಪರಾರಿಯಾಗಿದ್ದು ಆತನ ಪತ್ತೆಗೆ ಬೆಳ್ತಂಗಡಿ ಪೊಲೀಸರು ಬಲೆ ಬೀಸಿದ್ದಾರೆ‌‌‌.

error: Content is protected !!