ಕಡಲನಗರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ 3,800 ಕೋಟಿ ರೂ ಯೋಜನೆಗಳ ಲೋಕಾರ್ಪಣೆ, ಶಿಲಾನ್ಯಾಸ ಕಾರ್ಯಕ್ರಮ: ಪ್ರಧಾನಿಯವರ ಕಾರ್ಯಕ್ರಮಗಳ ವಿವರ ಹೀಗಿದೆ:

 

 

 

 

ಮಂಗಳೂರು:  ಪ್ರಧಾನಿ ನರೇಂದ್ರ ಮೋದಿ ಅವರು  ಮಂಗಳೂರಿಗೆ ಇಂದು   ಭೇಟಿ ನೀಡಲಿದ್ದು ವಿವಿಧ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಮಧ್ಯಾಹ್ನ 1.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು, ಎನ್​ಎಂಪಿಎ ಮತ್ತು ಎಮ್​ಆರ್​ಪಿಎಲ್​ಗೆ ಸೇರಿದ 3,800 ಕೋಟಿ ರೂ. ಮೊತ್ತದ ಎಂಟು ಯೋಜನೆಗಳ ಲೋಕಾರ್ಪಣೆ, ಶಿಲಾನ್ಯಾಸ ನೆರವೇರಿಸುವರು.

ಪ್ರಧಾನಿ ಲೋಕಾರ್ಪಣೆ ಹಾಗೂ ಶಿಲಾನ್ಯಾಸ  ಮಾಡುವ ಯೋಜನೆಗಳು

ಕಂಟೈನರ್​ಗಳು ಹಾಗೂ ಇತರೆ ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14ರ ಯಾಂತ್ರೀಕರಣ (ರೂ.281 ಕೋಟಿ),

ಬಿಎಸ್ VI ಉನ್ನತೀಕರಣ ಯೋಜನೆ (ರೂ.1829 ಕೋಟಿ),

ಸಮುದ್ರ ನೀರಿನ ನಿಲವರ್ಣೀಕರಣ ಘಟಕ (ರೂ.677 ಕೋಟಿ) ಹಾಗೂ

ಎನ್ಎಂಪಿಟಿಯಲ್ಲಿ ಸಮಗ್ರ ಎಲ್ಪಿಜಿ ಹಾಗೂ ಬೃಹತ್ ಪಿಓಎಲ್ ಸೌಲಭ್ಯ (ಅಂದಾಜು ವೆಚ್ಚ ರೂ.500 ಕೋಟಿ),

ಶೇಖರಣಾ ಟ್ಯಾಂಕ್​ಗಳು ಹಾಗೂ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಾಣ (ರೂ.100 ಕೋಟಿ),

ಬಿಟುಮಿನ್ ಶೇಖರಣಾ ಟ್ಯಾಂಕ್ ಘಟಕಗಳ ನಿರ್ಮಾಣ (ರೂ.100 ಕೋಟಿ)

ಹಾಗೂ ಬಿಟುಮಿನ್, ಖಾದ್ಯ ತೈಲ ಶೇಖರಣಾ ಟ್ಯಾಂಕ್​​ಗಳು ಹಾಗೂ ಸಂಬಂಧಿತ ಸೌಲಭ್ಯಗಳ ನಿರ್ಮಾಣ (ರೂ.100ಕೋಟಿ) ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಜೊತೆಗೆ, ಕುಳಾಯಿಯಲ್ಲಿ ಇಪಿಸಿ ಮಾದರಿಯಲ್ಲಿ ಮೀನುಗಾರಿಕಾ ಬಂದರು ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆಯನ್ನು ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ, ಬಂದರು, ಹಡಗು ಮತ್ತು ಜಲಸಾರಿಗೆ ಹಾಗೂ ಆಯುಷ್ ಸಚಿವ ಸರ್ಬಾನಂದ್ ಸೋನೊವಾಲ್, ಇಂಧನ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಬಂದರು, ಹಡಗು ಮತ್ತು ಜಲಸಾರಿಗೆ ರಾಜ್ಯ ಸಚಿವರಾದ ಶ್ರೀಪಾದ್ ಯೆಸ್ಸೋ ನಾಯಕ್ ಹಾಗೂ ಶಂತನು ಠಾಕೂರ್ ಭಾಗವಹಿಸುವರು.

ಹೀಗಿದೆ ಇಂದಿನ ಮೋದಿ ಕಾರ್ಯಕ್ರಮ:

ಕೊಚ್ಚಿನ್​ನಿಂದ ವಿಶೇಷ ವಿಮಾನದ ಮೂಲಕ ಆಗಮಿಸುವ ಪ್ರಧಾನಿ ಮೋದಿ ಮಧ್ಯಾಹ್ನ12.55ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ, ಕೇಂದ್ರದ ಸಚಿವರುಗಳು, ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ದ.ಕ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಸೇರಿದಂತೆ ಜಿಲ್ಲೆಯ ಶಾಸಕರುಗಳು ಇತರೆ ಜನಪ್ರತಿನಿಧಿಗಳು ಪ್ರಧಾನಿ ಮೋದಿಯವರನ್ನು ಸ್ವಾಗತಿಸಲಿದ್ದಾರೆ.

ಮಧ್ಯಾಹ್ನ 1.20ಕ್ಕೆ ಮಂಗಳೂರು ಏರ್ಪೋರ್ಟ್​ನಿಂದ ಸೇನಾ ಹೆಲಿಕಾಪ್ಟರ್‌ ಮೂಲಕ ಆಗಮಿಸುವ ಮೋದಿ ಅವರು ಪಣಂಬೂರಿನ ಎನ್ಎಂಪಿಎ ಹೆಲಿಪ್ಯಾಡ್​ನಲ್ಲಿ ಬಂದಿಳಿಯಲಿದ್ದಾರೆ. ಮಧ್ಯಾಹ್ನ 1.30ರ ಸುಮಾರಿಗೆ ಎನ್ಎಂಪಿಎ ಹೆಲಿಪ್ಯಾಡ್​ನಿಂದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನಕ್ಕೆ ವಾಹನದ ಮೂಲಕ ಆಗಮಿಸಲಿದ್ದಾರೆ. ಅಲ್ಲಿ ಎನ್ಎಂಪಿಎ, ಎಂಆರ್ ಪಿಎಲ್ ನ ವಿವಿಧ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ಮತ್ತು ಕಾಮಗಾರಿಯ ಲೋಕಾರ್ಪಣೆ ನೆರವೇರಿಸಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಜನರನ್ನು, ಫಲಾನುಭವಿಗಳನ್ನು, ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮಧ್ಯಾಹ್ನ 2.55ರವರೆಗೆ ನಡೆಯಲಿದೆ. ಬಳಿಕ ಅವರು ರಸ್ತೆ ಮಾರ್ಗದ ಮೂಲಕ ಎನ್ಎಂಪಿಎಗೆ ತೆರಳಲಿದ್ದಾರೆ. ಅಲ್ಲಿ ಬಿಜೆಪಿ ಪಕ್ಷದ ಪ್ರಮುಖರೊಂದಿಗೆ ಆಂತರಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. 4 ಗಂಟೆಗೆ ಎನ್ಎಂಪಿಎ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್‌ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ವಿಶೇಷ ವಿಮಾನದ ಮೂಲಕ ಪ್ರಧಾನಿ ಮೋದಿಯವರು ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.

error: Content is protected !!