ಸಾಂದರ್ಭಿಕ ಚಿತ್ರ
ಬೆಳ್ತಂಗಡಿ: ನಗರಕ್ಕೆ ತಾಗಿಕೊಂಡಿರುವ ಲಾಯಿಲ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರಿಗೆ ಸಾಕು ಪ್ರಾಣಿಗಳ ರಕ್ಷಣೆಯೇ ಸವಾಲಾಗಿ ಪರಿಣಮಿಸಿದೆ. ಕಳೆದ ಕೆಲವು ದಿನಗಳಿಂದ ಲಾಯಿಲ ಗ್ರಾಮದ ಹಂದೆವೂರು ಬೈಲು ಹಾಗೂ ಲಾಯಿಲ ಬೈಲು, ಗಾಣದ ಕೊಟ್ಟಿಗೆ ಎಂಬಲ್ಲಿಂದ ಕಟ್ಟಿ ಹಾಕಿದ ನಾಯಿಗಳನ್ನು ರಾತ್ರಿ ಸಮಯದಲ್ಲಿ ಚಿರತೆ ದಾಳಿ ನಡೆಸಿ ಕೊಂಡೊಯ್ಯುತಿದ್ದು ಸ್ಥಳೀಯರು ತಮ್ಮ ಸಾಕು ಪ್ರಾಣಿಗಳನ್ನು ಯಾವ ರೀತಿ ರಕ್ಷಿಸಿಕೊಳ್ಳಬಹುದು ಎಂಬ ಚಿಂತೆಯಲ್ಲಿದ್ದಾರೆ. ಸಾಕು ನಾಯಿಗಳನ್ನು ಹೊರಬಿಡದಂತಾಗಿದೆ ರಾತ್ರಿ ಮನೆಯೊಳಗೆ ಕೂಡಿ ಹಾಕುವ ಸ್ಥಿತಿ ನಿರ್ಮಾಣವಾಗಿದೆ.ಅದ್ದರಿಂದ ಸಂಬಂಧಪಟ್ಟ ಇಲಾಖೆ ತಕ್ಷಣ ಕಾರ್ಯಾಚರಣೆ ನಡೆಸಿ ಚಿರತೆ ಹಾವಳಿಯಿಂದ ಸಾಕು ಪ್ರಾಣಿಗಳನ್ನು ರಕ್ಷಿಸಬೇಕು ಎಂದು ತಮ್ಮ ನೋವನ್ನು ತೋಡಿಕೊಳ್ಳುತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ತಕ್ಷಣ ಏನಾದರೂ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.