ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಪುರ ಪ್ರವೇಶ: ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ಥಾಪನೆ: ಸ್ಮಾರಕ ಉಸ್ತುವಾರಿ ಸಮಿತಿಯಿಂದ ಅದ್ದೂರಿ ಸ್ವಾಗತ: ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹರೀಶ್ ಪೂಂಜ ಮಾಹಿತಿ:

 

 

 

ಬೆಳ್ತಂಗಡಿ;  ಸ್ವಾತಂತ್ರ್ಯ ಸಮರವೀರ ತುಳುನಾಡಿನ ಕೆಚ್ಚೆದೆಯ ವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಬೆಳ್ತಂಗಡಿ ಮಂಜುನಾಥ ಕಲಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಕರೆಯಲ್ಪಡುವ ಸಿಪಾಯಿದಂಗೆಗಿಂತಲೂ 20 ವರ್ಷ ಮೊದಲು ಅಂದರೆ 1837 ರಲ್ಲಿ ಬ್ರಿಟಿಷರ ದೌರ್ಜನ್ಯ ಹಾಗೂ ದಬ್ಬಾಳಿಕೆಯ ವಿರುದ್ಧ ಶಸ್ತ್ರಸಜ್ಜಿತವಾಗಿ ಹೋರಾಡಲು ಸಾವಿರಾರು ಬೇರೆ ಬೇರೆ ಜನಾಂಗಕ್ಕೆ ಸೇರಿದ ರೈತಾ ಮಹಾ ಸೈನಿಕರನ್ನು ತನ್ನ ಮದುವೆಗದ್ದೆ ಜಮೀನಿನಲ್ಲಿ ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿ ರಕ್ತಸಿಕ್ತ ಹೋರಾಟದಲ್ಲಿ ಬ್ರಿಟಿಷರನ್ನು ಸದೆಬಡಿದು ಬ್ರಿಟಿಷರ ಇಂಗ್ಲೆಂಡ್ ಬಾವುಟವನ್ನು ಕಿತ್ತೆಸೆದು ನಮ್ಮ ನೆಲದ ಬಾವುಟವನ್ನು ಈಗಿನ ಬಾವುಟ ಗುಡ್ಡೆಯಲ್ಲಿ ಹಾರಿಸಿ 13 ದಿವಸಗಳ ಕಾಲ ಮಂಗಳೂರನ್ನು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿಗೊಳಿಸಿದ ಸಂಘಟನೆಕಾರ ಸ್ವಾತಂತ್ರ್ಯ ಸಮರವೀರ ತುಳುನಾಡಿನ ಕೆಚ್ಚೆದೆಯ ವೀರ ಕೆದಂಬಾಡಿ ರಾಮಯ್ಯ ಗೌಡರು. ಭರತ ಖಂಡದ 1837ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಮೊದಲ ದಂಡನಾಯಕನ ಜೀವನದ ಐತಿಹ್ಯ ಇಂದಿನ ಮುಂದಿನ ಪೀಳಿಗೆಯ ಅರಿವು ಉಳಿವಿಗಾಗಿ ಹಾಗೂ ಚರಿತ್ರೆಯ ಮಹಾಪುರುಷನ ಹೆಸರು ಶಾಶ್ವತವಾಗಿ ನೆಲೆವೂರಲು ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕರ್ನಾಟಕ ಸರ್ಕಾರ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಅನುದಾನದ ಸಹಕಾರದೊಂದಿಗೆ ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ವಾತಂತ್ರ್ಯ ವೀರ ಕಂಚಿನ ಪ್ರತಿಮೆ ನಿರ್ಮಾಣ ಮಾಡುವುದರೊಂದಿಗೆ ಗತಿಸಿದ ವೀರರಿಗೆ ಗೌರವ ಅರ್ಪಣೆ ನಡೆಯಲಿದೆ.ಆಗಸ್ಟ್ 28 ರಂದು ಆಂದ್ರಪ್ರದೇಶದ ವಿಜಯವಾಡದಿಂದ ಆದಿ ಚುಂಚನಗಿರಿ ಮಹಾಸಂಸ್ಥಾನಕ್ಕೆ ಆಗಮಿಸಲಿರುವ ಪ್ರತಿಮೆಯನ್ನು ಶ್ರೀ ಶ್ರೀ ಡಾ. ನಿರ್ಮಲಾನಂದ ಸ್ವಾಮಿಜಿ ಸ್ವಾಗತಿಸಲಿದ್ದಾರೆ.ಆಗಸ್ಟ್ 29 ರಂದು ಮಂಗಳೂರಿಗೆ ಆಗಮಿಸಲಿರುವ ಪ್ರತಿಮೆಯನ್ನು ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಕಡಬ, ವಿಟ್ಲದ ಜನತೆ ಅದ್ದೂರಿಯಾಗಿ ಸ್ವಾಗತಿಸುವ ಕಾರ್ಯಕ್ರಮವಿದ್ದು ಬೆಳ್ತಂಗಡಿ ವಾಣಿ ಶಾಲೆ ವಠಾರದಿಂದ ಬಂಟ್ವಾಳಕ್ಕೆ ಬೃಹತ್ ವಾಹನ ಜಾಥದ ಮೂಲಕ ಸಾಗಿ ಅಲ್ಲಿ ಪ್ರತಿಮೆಯನ್ನು ಸ್ವಾಗತಿಸುವ ಕಾರ್ಯಕ್ರಮ ಇದೆ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಹೇಳಿದರು.‌ ಈ ಸಂದರ್ಭದಲ್ಲಿ ಪತ್ರಿಕಾಗೋಷ್ಟಿಯಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಕುಶಾಲಪ್ಪ ಗೌಡ, ಪದ್ಮಗೌಡ ಬೆಳಾಲು,ಜಯಾನಂದ ಗೌಡ ಉಪಸ್ಥಿತರಿದ್ದರು.

error: Content is protected !!