ಪ್ರವೀಣ್ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ನೀಡಬೇಕು: ಕೋಮು ಗಲಭೆ ಸೃಷ್ಟಿಸುವವರಿಗೆ ಕಠಿನ ಶಿಕ್ಷೆ ನೀಡಬೇಕು: ಒತ್ತಡಕ್ಕೆ ಮಣಿಯದ ಭ್ರಷ್ಟಾಚಾರ ರಹಿತ ಪೊಲೀಸ್ ಅಧಿಕಾರಿಗಳನ್ನು ಜಿಲ್ಲೆಯಲ್ಲಿ ನೇಮಿಸಿ: ಮಾಜಿ ಶಾಸಕ ಬಂಗೇರ

 

 

ಬೆಳ್ತಂಗಡಿ : ‘ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆಗೈದ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸುವ ಜೊತೆಗೆ ಕೋಮಗಲಬೆಗೆ ಪ್ರಚೊಧನೆ ನೀಡುವವರನ್ನು ಮತ್ತು ಪ್ರಚೋದನಕಾರಿ ಹೇಳಿಕೆ ನೀಡುವವರನ್ನು ಕಠಿಣ ಶಿಕ್ಷೆಗೊಳಪಡಿಸಬೇಕು. ಜಿಲ್ಲೆಯಲ್ಲಿ ಎದೆಗಾರಿಕೆಯುಳ್ಳ, ಯಾವುದೇ ಒತ್ತಡಕ್ಕೆ ಮಣಿಯದ, ಭ್ರಷ್ಟಾಚಾರ ರಹಿತ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಬೇಕು’ ಎಂದು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಗೌರವಾಧ್ಯಕ್ಷ, ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.

ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಪದೇ ಪದೇ ಕೋಮು ಗಲಬೆಗೆ ಪ್ರಚೋದನೆ ನೀಡಿ ಅಮಾಯಕರ ಹತ್ಯೆಯಾಗುತ್ತಿದೆ. ಜಿಲ್ಲೆಯ ಜನರಿಗೆ ರಕ್ಷಣೆ ಕೊಡುವ ಕೆಲಸವನ್ನು ಸರ್ಕಾರ ಮಾಡಬೇಕು. ಮುಂದೆಯೂ ಇಂತಹ ಪ್ರಕರಣಗಳು ಆದರೆ ಅದಕ್ಜೆ ಸರ್ಕಾರವೇ ನೇರ ಹೊಣೆಯಾಗುತ್ತದೆ. ಬಡ ಬಿಲ್ಲವ ಕುಟುಂಬದ ಪ್ರವೀಣ್ ನೆಟ್ಟಾರು ಹತ್ಯೆ ಬಡವರಿಗೆ ರಕ್ಷಣೆ ಇಲ್ಲ ಎಂಬುದನ್ನು ಎತ್ತಿ ತೋರಿಸುತ್ತದೆ. ಈ ಬಗ್ಗೆ ಅಮೂಲಾಗ್ರ ತನಿಖೆಯಾಗಬೇಕು. ತಪ್ಪಿತಸ್ಥರನ್ನು ಯಾವುದೇ ಜಾತಿ ಮತ ನೋಡದೆ ಕಠಿಣ ಶಿಕ್ಷಗೆ ಗುರಿಪಡಿಸಬೇಕು. ಅವರ ಕುಟುಂಬದ ರಕ್ಷಣೆಯನ್ನು ಸರ್ಕಾರವೇ ನೋಡಿಕೊಳ್ಳಬೇಕು. ಪ್ರವೀಣ್ ಕುಟುಂಬಕ್ಕೆ ಕನಿಷ್ಠ 1 ಕೋಟಿ ಪರಿಹಾರವನ್ನು ಸರ್ಕಾರ ನೀಡಬೇಕು’ ಎಂದರು.

ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ ಮಾತನಾಡಿ, ‘ ನಾರಾಯಣ ಗುರುಗಳ ತತ್ವಾದರ್ಶಗಳನ್ನು ತನ್ನ ಜೀವನದುದ್ದಕ್ಕೂ ಅಳವಡಿಸಿಕೊಂಡ ಬಿಲ್ಲವ ಸಮಾಜದ ಯುವ ಮುಖಂಡ, ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ಸಮಸ್ತ ಬಿಲ್ಲವರೂ ತೀವ್ರವಾಗಿ ಖಂಡಿಸುತ್ತೇವೆ. ಪ್ರತಿ ಬಾರಿಯೂ ಕೋಮು ಸಂಬಂಧಿ ಕೊಲೆಗಳಲ್ಲಿ ಬಿಲ್ಲವ ಯುವಕರೇ ಬಲಿಯಾಗುತ್ತಿರುವುದು ಆತಂಕದ ವಿಚಾರ. ಜಿಲ್ಲೆಯಲ್ಲಿ ಬಿಲ್ಲವ ಯುವಕರನ್ನು ಪ್ರಚೋದನೆಗೆ ಒಳಪಡಿಸಿ ಪ್ರಕರಣಗಳಲ್ಲಿ ಸಿಲುಕುವಂತೆ ಮಾಡುವ ಕೆಲಸಗಳು ಕೂಡ ವ್ಯವಸ್ಥಿತವಾಗಿ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ದುಷ್ಟ ಶಕ್ತಿಗಳ ಹೆಡೆಮುರಿ ಕಟ್ಟುವ ಕೆಲಸವನ್ನು ಗೃಹ ಇಲಾಖೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಜಯ ವಿಕ್ರಮ್ ಕಲ್ಲಾಪು, ನಿರ್ದೇಶಕರಾದ ಜಗದೀಶ್ ಡಿ, ಸೂರ್ಯನಾರಾಯಣ ಡಿ.ಕೆ, ಮಾಜಿ ಉಪಾಧ್ಯಕ್ಷ ಮನೋಹರ್ ಕುಮಾರ್ ಇಳಂತಿಲ, ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಸುಜಿತಾ ವಿ ಬಂಗೇರ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಕೋಟ್ಯಾನ್, ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷೆ ಸುಜಾತಾ ಅಣ್ಣಿ ಪೂಜಾರಿ ಇದ್ದರು.

error: Content is protected !!