ರಾಜಕೀಯವಿಲ್ಲದೆ ದೇಶ ಸೇವೆ ಮಾಡಲು ಅವಕಾಶ ಲಭಿಸಿದೆ”: ಡಾ.ಹೆಗ್ಗಡೆ: “ಗ್ರಾಮೀಣಾಭಿವೃದ್ಧಿಯಂತಹ ಜನಸೇವೆಯನ್ನು ದೇಶಾದ್ಯಂತ ವಿಸ್ತರಿಸುವ ಆಕಾಂಕ್ಷೆ”: “ಅವಕಾಶ ನೀಡಿದ ಪ್ರಧಾನಮಂತ್ರಿ ಮೋದಿಯವರಿಗೆ ಧನ್ಯವಾದ”: ರಾಜ್ಯ ಸಭೆಗೆ ನಾಮನಿರ್ದೇಶನಗೊಂಡ ಕುರಿತು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ

 

 

 

 

ಬೆಳ್ತಂಗಡಿ: “ರಾಜ್ಯ ಸಭೆಗೆ ನಾಮನಿರ್ದೇಶನ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ‌ ಅವರು ದೇಶ ಸೇವೆ ಮಾಡುವ ಅವಕಾಶ ಮಾಡಿಕೊಟ್ಟಿದ್ದಾರೆ. ನಾಮನಿರ್ದೇಶನ ಆಗಿರುವುದರಿಂದ ಯಾವುದೇ ರೀತಿಯ ರಾಜಕೀಯ ಇರುವುದಿಲ್ಲ” ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ‌ರಾಜ್ಯ ಸಭೆಗೆ ನಾಮನಿರ್ದೇಶನಗೊಂಡಿರುವ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

 

 

ಈ ಕುರಿತು ಮಾತನಾಡಿ “ನನ್ನ ಜೊತೆಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಪ್ರಖ್ಯಾತರಾದ ಇತರ ಮೂರು ಮಂದಿಯನ್ನೂ ಗುರುತಿಸಿದ್ದಾರೆ. ‘ರಾಜ್ಯ ಸಭೆ’ ಎಂದರೆ ಹಿರಿಯರ ವೇದಿಕೆ ಎಂದರ್ಥ. ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆಗಳನ್ನು ಮಾಡಿದವರು ಅದರ ಅನುಭವವನ್ನು ಹಂಚಿಕೊಳ್ಳಬೇಕು. ನಾವು ರಾಜ್ಯ,  ಜಿಲ್ಲೆ, ತಾಲೂಕುಗಳ ಸೀಮಿತ ಪ್ರದೇಶಗಳಲ್ಲಿ ‌ಮಾಡುತ್ತಿದ್ದ ವಿವಿಧ ರೀತಿಯ ಅಭಿವೃದ್ಧಿ ಕಾರ್ಯವನ್ನು ದೇಶದ ಇತರ ರಾಜ್ಯಗಳಿಗೂ ವಿಸ್ತರಿಸುವ ಅವಕಾಶ ಲಭಿಸಿದೆ.

 

 

ಉದಾಹರಣೆಗೆ ‌ಗ್ರಾಮೀಣಾಭಿವೃದ್ಧಿ‌ ಯೋಜನೆ ರಾಜ್ಯಾದ್ಯಂತ ಇದ್ದು, ಇದು ಜನ ಸಾಮಾನ್ಯರ ಅಭಿವೃದ್ಧಿಗೆ ದೇಶಾದ್ಯಂತ ವಿಸ್ತರಣೆಗೊಳ್ಳಬೇಕಾದ ಅವಶ್ಯಕತೆ ಇದೆ. ಅದೇ ರೀತಿ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರ, ಅಲ್ಲಿನ ಸ್ವಚ್ಛತೆ, ಪಾವಿತ್ರ್ಯ ರಕ್ಷಣೆಗೆ ಬೇಕಾದ ಅನೇಕ ಕಾರ್ಯಕ್ರಮಗಳನ್ನು ದೇಶಾದ್ಯಂತ ವಿಸ್ತರಿಸಲು ಅವಕಾಶ ಲಭಿಸಿದ್ದು ಇದನ್ನು ಬಳಸಿಕೊಳ್ಳುತ್ತೇನೆ‌. ಈ ಅವಕಾಶ ನೀಡಿದ ಪ್ರಧಾನಿ ಮೋದಿಯವರಿಗೆ ಧನ್ಯವಾದ ತಿಳಿಸುತ್ತೇನೆ” ಎಂದರು.

error: Content is protected !!