ನಮ್ಮ ಬೇಡಿಕೆಗೆ ಶಾಸಕ ಹರೀಶ್ ಪೂಂಜ ಸ್ಪಂದಿಸಿದ್ದಾರೆ: ಕಾಜೂರಿನ ಅನುದಾನದ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ: ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡುವುದು ಖಂಡನೀಯ :ಕಾಜೂರು ದರ್ಗಾ ಆಡಳಿತ ಸಮಿತಿ

 

 

ಬೆಳ್ತಂಗಡಿ: ನಾಡಿನ‌ ಸರ್ವಧರ್ಮೀಯರ ಆಧರಣೀಯ ಕ್ಷೇತ್ರ ಕಾಜೂರಿನ ಅಭಿವೃದ್ಧಿಗಾಗಿ ಸರಕಾರದಿಂದ 1.50 ಕೋಟಿ ಅನುದಾನ ಬಿಡುಗಡೆಗೊಳಿಸಿರುವುದಾಗಿ ಶಾಸಕರು ನೀಡಿರುವ ಹೇಳಿಕೆಗೆ ಪ್ರತಿಯಾಗಿ ಇನ್ನೊಂದು ರಾಜಕೀಯ ಪಕ್ಷ ಪತ್ರಿಕಾಗೋಷ್ಠಿ ನಡೆಸಿ, ಅನುದಾನದ ಬಗ್ಗೆ ವ್ಯಂಗ್ಯ ಮಾಡುವುದು ಹಾಗೂ ವ್ಯಥಾ ಚರ್ಚಿಸಿಕೊಳ್ಳುವುದು ಸರಿಯಲ್ಲ ಮತ್ತು ಖಂಡನೀಯ ಎಂದು ಕಾಜೂರು ದರ್ಗಾ ಆಡಳಿತ ಸಮಿತಿಯ ಅಧ್ಯಕ್ಷ ಕೆ.ಯು ಇಬ್ರಾಹಿಂ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

 

ರಾಜ್ಯದಲ್ಲಿ ಯಾವುದೇ ರಾಜಕೀಯ ಪಕ್ಷ ಅಧಿಕಾರದಲ್ಲಿದ್ದರೂ ‌ನಾವು ವರ್ಷಂಪ್ರತಿ ಸರಿಯಾದ ಲೆಕ್ಕಪತ್ರ ತೋರಿಸಿ ಸರಕಾರಕ್ಕೆ ಸೂಕ್ತ ತೆರಿಗೆ ಪಾವತಿಸುತ್ತಾ ಬಂದಿದ್ದೇವೆ. ಅಂತೆಯೇ ಯಾವುದೇ ಪಕ್ಷದ ಸರಕಾರವಾದರೂ ಮಸೀದಿಯ ಅಭಿವೃದ್ಧಿಯ ದೃಷ್ಟಿಯಿಂದ ಅನುದಾನಕ್ಕೆ ಅರ್ಜಿ ಸಲ್ಲಿಸಿ ಅನುದಾನ ಪಡೆಯುತ್ತೇವೆ. ಈ ಹಿಂದೆಯೂ ಪಡೆದಿದ್ದೇವೆ ಇನ್ನು ಮುಂದಕ್ಕೂ ಇದು ಮುಂದುವರಿಯುತ್ತಾ ಹೋಗುತ್ತದೆ.
ಕಾಜೂರು ದರ್ಗಾ ಸಮಿತಿಯ ಹಲವು ವರ್ಷಗಳ ಬೇಡಿಕೆಯಾದ, ಯಾತ್ರಾರ್ಥಿಗಳ ಅನುಕೂಲಕ್ಕಾಗಿ ‘ಮುಸಾಫಿರ್ ಖಾನ’ ಕಟ್ಟಡ ನಿರ್ಮಿಸಲು ಶಾಸಕ ಹರೀಶ್ ಪೂಂಜರ ಶಿಫಾರಸ್ಸಿನೊಂದಿಗೆ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಮೌಲಾನ ಶಾಫಿ ಸ‌ಅದಿ ಯವರ ಸತತ ಪ್ರಯತ್ನದಿಂದ ಇದೀಗ 1.50 ಕೋಟಿ ರೂ. ವಿಶೇಷ ಅನುದಾನ ದೊರಕಿರುವುದಾಗಿದೆ.
ಈ‌ ವಿಚಾರವನ್ನು ಪತ್ರಿಕಾಗೋಷ್ಠಿ ನಡೆಸಿ ವ್ಯಂಗ್ಯ ಮಾಡುವುದು ಹಾಗೂ ಅನುದಾನದ ವಿಚಾರದಲ್ಲಿ ಪರಸ್ಪರ ಕೆಸರೆರೆಚಿಕೊಳ್ಳುವುದು ಒಳ್ಳೆಯ ಬೆಳವಣಿಗೆಯಲ್ಲ. ಮುಂದಕ್ಕೂ ನಮ್ಮ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲಾ ರಾಜಕೀಯ ಪಕ್ಷಗಳ ಸಮಾನ ಸಹಕಾರ ಬೇಕಾಗಿದೆ ಎಂದು ಅವರು ಹೇಳಿಕೆಯಲ್ಲಿ ವಿನಂತಿಸಿದ್ದಾರೆ.

error: Content is protected !!