ಬೆಳ್ತಂಗಡಿ: ಜಾಗದ ತಕರಾರಿನ ಹಿನ್ನೆಲೆ ಸ್ಥಳೀಯ ಪ್ರಭಾವಿ ವ್ಯಕ್ತಿಯೊಬ್ಬರ ಕಿರುಕುಳಕ್ಕೆ ತುತ್ತಾಗಿರುವ ವೃದ್ಧೆಯೊಬ್ಬರು ದಿನನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿರುವ ಘಟನೆ ತಾಲೂಕಿನ ಕಲ್ಮಂಜ ಗ್ರಾಮದಲ್ಲಿ ನಡೆಯುತ್ತಿದೆ.
ಗ್ರಾಮದ ಹುಕ್ರೊಟ್ಟು ಎಂಬಲ್ಲಿ ಸುಮಾರು 80 ವರ್ಷ ಪ್ರಾಯದ ಚಿನ್ನಮ್ಮ ಎಂಬವರು 20 ಸೆಂಟ್ಸ್ ಜಾಗದಲ್ಲಿ ಒಂದು ಶೀಟ್ ಹಾಕಿದ ಹಳೆಯ ಕಾಲದ ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇವರ ಜಾಗಕ್ಕೆ ತಾಗಿಕೊಂಡು ರಾಘವೇಂದ್ರ ಎಂಬವರಿಗೆ ವರ್ಗ ಸರ್ಕಾರಿ ಜಾಗ ಸೇರಿ, ಸುಮಾರು 15 ಎಕರೆಗೂ ಅಧಿಕ ಜಾಗವಿದೆ. ಆದರೂ ಅನಕ್ಷರಸ್ಥರಾದ ಚಿನ್ನಮ್ಮ ಅವರ ಕುಟುಂಬವನ್ನು ಬೆದರಿಸಿ ಆ ಜಾಗವನ್ನೂ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಚಿನ್ನಮ್ಮ ಆರೋಪಿಸಿದ್ದಾರೆ. ಮನೆಯ ಬೇಲಿ ಕಿತ್ತೆಸೆದು ಮನೆ ಖಾಲಿ ಮಾಡುವಂತೆ ಬೆದರಿಸುತಿದ್ದಾರೆ ಎಂದು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು, ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.
“ಕೆಲವು ವರುಷಗಳಿಂದ ಇದು ನನ್ನ ಪಟ್ಟ ಜಾಗ ಎಂದು ಹೇಳಿ, ಮನೆ ಬಿಟ್ಟು ಹೋಗಬೇಕು ಎಂದು ಬೆದರಿಸುತ್ತಿದ್ದಾರೆ. ಕಳೆದ ವರ್ಷ ಮನೆಯ ಸುತ್ತ ನೆಟ್ಟ ಅಡಿಕೆ ಗಿಡಗಳನ್ನು ಕಿತ್ತು ಬಿಸಾಡಿ ಮನೆಯೊಳಗೆ ನುಗ್ಗಲು ಯತ್ನಿಸಿದ್ದಾರೆ. ಮನೆಯ ಬಾಗಿಲಿಗೆ ತುಳಿದು ಬಾಗಿಲು ಒಡೆಯಲು ಪ್ರಯತ್ನಿಸಿ, ಜೀವ ಬೆದರಿಕೆಯನ್ನೂ ಹಾಕಿದ್ದಾರೆ. ಜೀವ ಭಯದಲ್ಲೇ ಜೀವನ ಸಾಗಿಸುವಂತಾಗಿದೆ” ಎಂದು ಚಿನ್ನಮ್ಮ ಆರೋಪಿಸಿದ್ದಾರೆ.
“ನಾನು ಹುಟ್ಟಿದ್ದು ಇದೇ ಜಾಗದಲ್ಲಿ. ನನಗೆ ಮಗಳಿದ್ದು ಅವಳನ್ನು ರಿಕ್ಷಾ ಚಾಲಕರೊಬ್ಬರಿಗೆ ಮದುವೆ ಮಾಡಿ ಕೊಡಲಾಗಿದೆ. ಅದರೆ ರಾಘವೇಂದ್ರ ಅವರು ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದರಿಂದ, ಅವರು ದೌರ್ಜನ್ಯ ತಾಳಲಾರದೆ ಪುತ್ತೂರಿನಲ್ಲಿ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಾ ಇಬ್ಬರೂ ಅಲ್ಲೇ ನೆಲೆಸಿದ್ದಾರೆ.ಮಗ ಇತ್ತ ಕಡೆ ಬರುವುದಿಲ್ಲ ಕಳೆದ ಕೆಲವು ವರ್ಷಗಳಿಂದ ಈ ಜಾಗವನ್ನು ತನ್ನ ಪಟ್ಟ ಜಾಗ ಎಂದು ಹೇಳಿ ವಿವಿಧ ರೀತಿಯಲ್ಲಿ ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಜಾಗದ ದಾಖಲೆಗಾಗಿ ಅದೆಷ್ಟೋ ವರ್ಷದಿಂದ ಕಚೇರಿಗೆ ಅಲೆದಾಡಿದರೂ ಇನ್ನೂ ಮನೆ ದಾಖಲೆ ನಮ್ಮ ಹೆಸರಿಗೆ ಆಗಿಲ್ಲ.
ನಾವು ಬಡವರು ಲಂಚ ಕೊಡಲು ದುಡ್ಡಿಲ್ಲ. ಆತನಲ್ಲಿ ದುಡ್ಡಿದೆ. ಅವನು ಹೇಳಿದಂತೆ ಎಲ್ಲರೂ ಕೇಳುತ್ತಾರೆ. 50 ವರ್ಷಗಳಿಂದ ಮನೆ ತೆರಿಗೆ ಕಟ್ಟಿಕೊಂಡು ಬರುತಿದ್ದೇವೆ. ಅದರೂ ಬೆದರಿಕೆ ಒಡ್ಡುತ್ತಿದ್ದಾರೆ. ನಮ್ಮಲ್ಲಿ ದುಡ್ಡಿಲ್ಲ, ದುಡ್ಡು ಕೊಟ್ಟು ದಾಖಲೆಗಳನ್ನು ಸರಿಪಡಿಸುವಷ್ಟು ಶಕ್ತರು ನಾವಲ್ಲ ಈ ಪ್ರಾಯದಲ್ಲಿ ನಾನೆಲ್ಲಿಗೆ ಹೋಗಲಿ” ಎಂದು ಚಿನ್ನಮ್ಮ ತಮ್ಮ ಕಷ್ಟವನ್ನು ಹೇಳಿಕೊಂಡು ಕಣ್ಣೀರು ಸುರಿಸುತ್ತಿದ್ದಾರೆ.
ಈ ಬಗ್ಗೆ ಅಧಿಕಾರಿಗಳು ತಕ್ಷಣ ಪರಿಶೀಲಿಸಿ ಕ್ರಮಕೈಗೊಳ್ಳುವ ಮೂಲಕ ಬಡ ಕುಟುಂಬಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕೊನೆಯಾಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.