ಪಿಎಫ್ ಐ ಮುಖಂಡ ಹೈದರ್ ನೀರ್ಸಾಲ್ ಹೃದಯಾಘಾತದಿಂದ ನಿಧನ

 

 

ಬೆಳ್ತಂಗಡಿ:ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಜಿಲ್ಲಾ ಸಮಿತಿ ಸದಸ್ಯ, ಸಾಮಾಜಿಕ ಮುಂದಾಳು, ಸಂಘಟಕ ಹೈದರ್ ನೀರ್ಸಾಲ್ ಉಜಿರೆ ಅವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಸರಕಾರದ ಸಿಎಸ್‌ಸಿ ಆನ್ಲೈನ್ ಕೇಂದ್ರವನ್ನೂ ನಡೆಸುತ್ತಿದ್ದ ಅವರು ಸಿಎಸ್‌ಸಿ ವಿಎಲ್‌ಇ ಸೊಸೈಟಿ ಬೆಳ್ತಂಗಡಿ ಭಾಗದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

ನಿರಂತರ ಕಾರ್ಯತತ್ಪರರಾಗಿಯೇ ಇರುತ್ತಿದ್ದ ಅವರು ಮಂಗಳವಾರ “ಗ್ರಾಮ ಒನ್” ಇದರ ಸಭೆಗಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತವಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ನಿನ್ನೆಯಿಂದ ಸಹಸ್ರಾರು ಮಂದಿ ಅವರ ಅಭಿಮಾನಿಗಳು, ಹಿತೈಷಿಗಳು ಅವರಿಗಾಗಿ ಪ್ರಾರ್ಥಿಸಿದರೂ ಬುಧವಾರ ಬೆಳಿಗ್ಗೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಮಾಜಿ ಅಧ್ಯಕ್ಷರಾಗಿದ್ದ ಅವರು ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಶಿರ್ಲಾಲು ಮಸೀದಿ ಗೌರವಾಧ್ಯಕ್ಷರಾಗಿ, ತಾಲೂಕು ಮುಸ್ಲಿಂ‌ ಒಕ್ಕೂಟ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.‌

ಮೃತರು ತಾಯಿ, ಪತ್ಮಿ, ಓರ್ವ ಗಂಡು, ಮೂವರು ಹೆಣ್ಣು ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

error: Content is protected !!