ಈಜುಕೊಳ ಸಹಿತ ಬೆಳ್ತಂಗಡಿಯಲ್ಲಿ ಜಿಲ್ಲೆಯಲ್ಲೇ ಮಾದರಿ ಸುಸಜ್ಜಿತ ಕ್ರೀಡಾಂಗಣ: ಸಾವಿರಾರು ಕೋಟಿ ಅನುದಾನದ ಮೂಲಕ ನವ ಬೆಳ್ತಂಗಡಿಯ ಕನಸು ಸಕಾರ: ಶಾಸಕ ಹರೀಶ್ ಪೂಂಜ: ಬೆಳ್ತಂಗಡಿ ಸಾಧಕರ ಸನ್ಮಾನ ಹಾಗೂ ಅಂತ್ಯೋದಯ ಆಹಾರ ಕಿಟ್ ವಿತರಣೆ ಕಾರ್ಯಕ್ರಮ

 

 

 

ಬೆಳ್ತಂಗಡಿ :ಕಳೆದ ನಾಲ್ಕು ವರ್ಷಗಳಲ್ಲಿ ತಾಲೂಕಿನ ಸಮಗ್ರ ಬದಲಾವಣೆಗೆ ಶ್ರಮಿಸಿ ಗ್ರಾಮ ಗ್ರಾಮದ ರಸ್ತೆಗಳನ್ನು ಅಭಿವೃದ್ಧಿಗೊಳಿಸಿದ್ದಲ್ಲದೆ ನೀರಾವರಿ ಸೌಕರ್ಯಕ್ಕಾಗಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ಕೃಷಿಕರಿಗೆ ಉಪಯೋಗವಾಗುವುದರ ಜೊತೆಗೆ ಅಂತರ್ಜಲ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಇದೀಗ ಶ್ರೀಕ್ಷೇತ್ರ ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರವಿರುವುದರಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ನಗರದಲ್ಲಿ 18 ಕೋಟಿ. ರೂ. ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.

 

ಅವರು ಮಂಗಳವಾರ ಮಂಜುನಾಥ ಕಲಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ಆಡಳಿತದ 8 ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಅಂತ್ಯೋದಯ ಪರಿಕಲ್ಪನೆಯಲ್ಲಿ ಫಲಾನುಭವಿಗಳ ಸಮಾವೇಶ ಮತ್ತು 127 ವಿವಿಧ ಸಾಧಕರಿಗೆ ಗೌರವಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕಂದಾಯ ಇಲಾಖೆ, ಅರಣ್ಯ ಇಲಾಖೆ, ಸಾರಿಗೆ ಇಲಾಖೆ, ಪೌರಾಡಳಿತ ಇಲಾಖೆಯೊಂದಿಗೆ ಸಭೆ ನಡೆಸಿ ನಗರ ಬಸ್ ನಿಲ್ದಾಣಕ್ಕೆ ಬೇಕಾದಂತಹ 1.20 ಎಕ್ರೆ ನಿವೇಶನವನ್ನು ಸಾರಿಗೆ ಇಲಾಖೆಗೆ ಹಸ್ತಾಂತರಿಸುವ ಕಾರ್ಯ ನಡೆದಿದ್ದು ಕೆಲವೇ ದಿನಗಳಲ್ಲಿ ನೂತನ ಬಸ್ ನಿಲ್ದಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗುವುದು ಅಲ್ಲದೆ ನಗರದ ರೆಂಕೆದಗುತ್ತುವಿನಲ್ಲಿ ಸುಸಜ್ಜಿತ ಕ್ರೀಡಾಂಗಣ ಮಾಡಲು ಈಗಾಗಲೇ 12 ಎಕರೆ ಜಾಗವನ್ನು ಗುರುತಿಸಿದ್ದು ಇಲ್ಲಿಯೂ ಈಜುಕೊಳ ಸಹಿತ ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು. ಹಳೆಯ ಕ್ರೀಡಾಂಗಣದಲ್ಲಿ ಸುಸಜ್ಜಿತ ಅಂಬೆಡ್ಕರ್ ಭವನವನ್ನು ನಿರ್ಮಿಸಲು ಉದ್ದೇಶಿಸಿದ್ದು ಈಗಾಗಲೇ 3 ಕೋಟಿ ರೂ. ಮಂಜೂರಾಗಿದ್ದು ಇನ್ನು ಹೆಚ್ಚುವರಿಯಾಗಿ 3 ಕೋಟಿ ರೂ. ಮಂಜೂರಾತಿ ಹಂತದಲ್ಲಿದ್ದು 6 ಕೋಟಿ ರೂ. ವೆಚ್ಚದಲ್ಲಿ ಅಂಬೆಡ್ಕರ್ ಭವನ ನಿರ್ಮಾಣವಾಗಲಿದೆ. ನಗರದ ಜನರಿಗೆ ಗೇರುಕಟ್ಟೆ, ಉಪ್ಪಿನಂಗಡಿ ಹತ್ತಿರದ ಸಂಪರ್ಕವಾಗುವ ಉದ್ದೇಶದಿಂದ ಕೆಂಬರ್ಜೆ, ಮಲ್ಲೊಟ್ಟು, ಗೇರುಕಟ್ಟೆ ಸಂಪರ್ಕ ರಸ್ತೆಗೆ 5 ಕೋಟಿ ರೂ. ಮಂಜೂರಾಗಿದ್ದು ಇದರ ಶಿಲಾನ್ಯಾಸ ಕಾರ್ಯವು ಶೀಘ್ರ ನಡೆಯಲಿದೆ. ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಗಿಂತ ದುಪ್ಪಟ್ಟು ಕಾರ್ಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ತಾಲೂಕಿನ ಜನತೆಗೆ ನೆಮ್ಮದಿಯ ವಾತಾವರಣವನ್ನು ಸೃಷ್ಠಿಸಲಾಗುವುದು ಎಂದರು.

 

 

ವಿಧಾನಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ 8 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಅದ್ಭುತ ಬದಲಾವಣೆ ಕಂಡಿದ್ದು ಗ್ರಾಮ ಗ್ರಾಮಗಳಿಗೆ ಕೇಂದ್ರದ ಅನುದಾನವು ತಲುಪಿದೆ. ಅದೇ ರೀತಿ ಶಾಸಕ ಹರೀಶ್ ಪೂಂಜಾರವರು ಶಾಸಕರಾಗಿ 4 ವರ್ಷ ಅವಧಿಯಲ್ಲಿ ತಾಲೂಕಿನಲ್ಲಿ ಸಾವಿರಾರು ಕೋಟಿ ವೆಚ್ಚದ ಅನುದಾನಗಳು ಬಂದು ನವ ಬೆಳ್ತಂಗಡಿ ನಿರ್ಮಾಣವಾಗಿದೆ ಎಂದರು.

 

 

ಪ.ಪಂ ಉಪಾಧ್ಯಕ್ಷ ಜಯಾನಂದ ಗೌಡ ಪ್ರಸ್ತಾವನೆಗೈದು ಬೆಳ್ತಂಗಡಿ ನಗರವು ಶಾಸಕ ಹರೀಶ್ ಪೂಂಜಾರವರು ಶಾಸಕರಾದ ಬಳಿಕ ಪ್ರಪ್ರಥಮ ಬಾರಿಗೆ ಬಿಜೆಪಿ ಆಡಳಿತಕ್ಕೆ ಬಂದಿದ್ದು ನಗರದಲ್ಲಿ ನೂರಾರು ಕೋಟಿ ಅನುದಾನಗಳ ಕಾಮಗಾರಿ ನಡೆದಿದ್ದು ನಗರದ ಚಿತ್ರಣವೇ ಬದಲಾಗಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಪ.ಪಂ ಅಧ್ಯಕ್ಷೆ ರಜನಿ ಕುಡ್ವ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್ ಧರ್ಮಸ್ಥಳ, ಗಣೇಶ್ ಗೌಡ ನಾವೂರು,  ಉಪಸ್ಥಿತರಿದ್ದರು.
ನಗರ ಶಕ್ತಿ ಕೇಂದ್ರದ ಪ್ರಮುಖ್ ರಾಜೇಶ್ ಪ್ರಭು ಸ್ವಾಗತಿಸಿ, ಸಹಕಾರಿ ಭಾರತಿ ಅಧ್ಯಕ್ಷ ರಾಜೇಶ್ ಪೆರ್ಮುಡ ಮತ್ತು ವೀಣಾ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ 67 ಮಂದಿಗೆ ಅಂತ್ಯೋದಯ ಆಹಾರ ಕಿಟ್ ವಿತರಿಸಲಾಯಿತು.

error: Content is protected !!