ಪ್ರಧಾನಿಯಿಂದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಲೋಕಾರ್ಪಣೆ ಮೇಲ್ದರ್ಜೆಗೇರಿದ ಬೆಳ್ತಂಗಡಿಯ ಮಾಲಾಡಿ ಸರ್ಕಾರಿ ಐಟಿಐ ಸೇರಿದಂತೆ ಜಿಲ್ಲೆಯ 5 ಕೇಂದ್ರಗಳು ಲೋಕಾರ್ಪಣೆ

 

 

 

ಬೆಳ್ತಂಗಡಿ:ಕರ್ನಾಟಕ ಸರಕಾರ ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಹಾಗೂ 28 ಪಾಲುದಾರರ ಸಹಯೋಗದೊಂದಿಗೆ ರಾಜ್ಯದ 150 ಸರಕಾರಿ ತರಬೇತಿ ಕೇಂದ್ರಗಳನ್ನು ತಾಂತ್ರಿಕ ಕೇಂದ್ರಗಳನ್ನಾಗಿ ಪರಿವರ್ತಿಸಿದೆ. ದ.ಕ. ಜಿಲ್ಲೆಯ ಐದು ಕಡೆಗಳಲ್ಲಿ ಸೇರಿದಂತೆ ಇವುಗಳ ಲೋಕಾರ್ಪಣೆ ಕಾರ್ಯಕ್ರಮವು ಇಂದು ಮಧ್ಯಾಹ್ನ 2.30ಕ್ಕೆ ಗಂಟೆಗೆ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ಲೋಕಾರ್ಪಣೆ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ. ರಾಜ್ಯಪಾಲರು, ಮುಖ್ಯಮಂತ್ರಿ,ಉನ್ನತ ಶಿಕ್ಷಣ ಸಚಿವರು ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

 

ದ.ಕ.ಜಿಲ್ಲೆಯ ಪುತ್ತೂರು,ವಿಟ್ಲ, ಮಂಗಳೂರಿನ ಪುರುಷರ ಹಾಗೂ ಮಹಿಳಾ ,ಬೆಳ್ತಂಗಡಿ ತಾಲೂಕಿನ ಮಾಲಾಡಿ ಸೇರಿದಂತೆ ಐದು ಕಾಲೇಜುಗಳು ಇಂದು ಲೋಕಾರ್ಪಣೆಗೊಳ್ಳಲಿವೆ.

ಗ್ರಾಮೀಣ ಪ್ರದೇಶದ ನಿರುದ್ಯೋಗ ನಿವಾರಣೆ ಬ್ಯಾಟರಿ ವಾಹನ, ರೋಬೋ ಟೆಕ್ನಾಲಜಿ ಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಭವಿಷ್ಯದ ಯೋಚನೆಗಾಗಿ ರೂಪಿಸಿರುವ ಯೋಜನೆ 4,636 ಕೋಟಿ ರೂ. ವೆಚ್ಚದಲ್ಲಿ ನಡೆದಿದೆ. ಇದರಲ್ಲಿ 657 ಕೋಟಿ ರೂ.ಗಳನ್ನು ಸರಕಾರ ಭರಿಸಲಿದೆ.

 

ಈ ಯೋಜನೆಯಲ್ಲಿ ಈಗಿರುವ ಕೋರ್ಸುಗಳ ಜತೆ ಎರಡು ವರ್ಷ,ಒಂದು ವರ್ಷ ಹಾಗೂ ಅಲ್ಪಾವಧಿಯ ಕೋರ್ಸ್ ಗಳಿವೆ. ಎರಡು ವರ್ಷದ ಕೋರ್ಸ್ ಗಳನ್ನು ಪೂರ್ಣಗೊಳಿಸುವ ವಿದ್ಯಾರ್ಥಿಗಳಿಗೆ ಅವರ ಅಂಕ ಹಾಗೂ ಇನ್ನಿತರ ನಿರ್ವಹಣೆ ಆಧಾರದಲ್ಲಿ ಟಾಟಾ ಹಾಗೂ ಇತರ ಪಾಲುದಾರ ಕಂಪೆನಿಗಳು ಉದ್ಯೋಗ ನೀಡಲಿವೆ.

 

 

ಆಯ್ಕೆಯಾಗಿರುವ ಪ್ರತಿ ಕಾಲೇಜುಗಳಲ್ಲಿ ಸುಮಾರು 32 ಕೋಟಿ ರೂ.ವೆಚ್ಚದಲ್ಲಿ ಅಗತ್ಯ ಯಂತ್ರೋಪಕರಣ ವರ್ಕ್ ಶಾಪ್, ಸುಸಜ್ಜಿತ ಲ್ಯಾಬ್, ಕಂಪ್ಯೂಟರೀಕರಣ, ಅಂತರ್ಜಾಲ ಸಹಿತ ಅನೇಕ ಸೌಲಭ್ಯಗಳನ್ನು ಪೂರ್ಣಪ್ರಮಾಣದಲ್ಲಿ ನಿರ್ಮಿಸಲಾಗಿದೆ.

ಗ್ರಾಮೀಣ ಜನರ ಆಶಾಕಿರಣ

ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಹಿಂದುಳಿದ ಯುವಕರಲ್ಲಿ ಆಶಾಭಾವನೆ ಮೂಡಿದೆ. ಕೇವಲ ರೂ. 1200 ಶುಲ್ಕದೊಂದಿಗೆ ಹತ್ತನೇ ತರಗತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಸೀಟು ಲಭಿಸುತ್ತದೆ. ಹಲವಾರು ಸ್ಕಾಲರ್ ಶಿಪ್ ಗಳನ್ನು ಕೂಡ ಪಡೆಯಬಹುದು. ಸುಸಜ್ಜಿತ ವ್ಯವಸ್ಥೆಗಳನ್ನು ಒಳಗೊಂಡಿರುವ ಈ ಕಾಲೇಜುಗಳು ಗ್ರಾಮೀಣ ಭಾಗದ ಜನರಿಗೆ ವರದಾನವಾಗಿವೆ.

ಬೆಳ್ತಂಗಡಿಯ ಮಾಲಾಡಿಯಲ್ಲಿರುವ ಸರಕಾರಿ ಐಟಿಐ ಕೇಂದ್ರ ಈ ಯೋಜನೆಯಿಂದ ಮೇಲ್ದರ್ಜೆಗೇರಿದ್ದು ಇಂದು ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ಏರುತ್ತಿರುವ ತೈಲದರ, ಪರಿಸರ ಸಂರಕ್ಷಣೆ ಗ್ರಾಮೀಣ ನಿರುದ್ಯೋಗ ನಿವಾರಣೆಯ ದೃಷ್ಟಿಯಲ್ಲಿಟ್ಟುಕೊಂಡು ನೂತನ ಯೋಜನೆ ಆರಂಭಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಿದ್ದು ದುರಸ್ತಿ ನಿರ್ವಹಣೆಗಳನ್ನು ಸರಳಗೊಳಿಸಲು ಅನುಕೂಲ ನೀಡಲಿದೆ. ಟಾಟಾ ಸಹಿತ ಸಹಭಾಗಿತ್ವದ ಕಂಪನಿಗಳ ಹಿರಿಯ ಅಧಿಕಾರಿಗಳು ಕೂಡ ಕಾಲೇಜುಗಳಲ್ಲಿ ತರಬೇತಿ ನೀಡಲಿದ್ದಾರೆ. ಎರಡು ವರ್ಷದ 5 ಕೋರ್ಸ್ ಒಂದು ವರ್ಷದ 6 ಕೋರ್ಸ್ ಹಾಗೂ ಮೂರು ತಿಂಗಳು ಅವಧಿಯ 23 ಕೋರ್ಸ್ ಗಳು ಇದರಲ್ಲಿ ಒಳಗೊಂಡಿವೆ.

ಸರ್ಕಾರಿ ಐಟಿಐ ಮಾಲಾಡಿ ಇದರ ಪ್ರಭಾರ ಪ್ರಾಂಶುಪಾಲ ಬಾಲಕೃಷ್ಣ ಪ್ರತಿಕ್ರಿಯೆ ನೀಡಿ
ಈ ಕೋರ್ಸ್ ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ನಮ್ಮಲ್ಲಿ ಸೀಟುಗಳು ಭರ್ತಿಯಾಗಿದೆ.ಉಳಿದ ಕೆಲವು ಕಾಲೇಜುಗಳಲ್ಲಿ ಬೆರಳೆಣಿಕೆಯ ಸೀಟುಗಳು ಲಭ್ಯ ಇವೆ ಎಂದು ತಿಳಿದುಬಂದಿದೆ. ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರುವ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕೋರ್ಸ್ ಗಳು ವರದಾನವಾಗಿದೆ. ಕೋರ್ಸ್ ಗಳನ್ನು ಪೂರೈಸಿದವರಿಗೆ
ಉತ್ತಮ ಉದ್ಯೋಗವನ್ನು ಆರಿಸಿಕೊಳ್ಳುವ ಅವಕಾಶವಿದೆ ಎಂದರು.

error: Content is protected !!