ಬೆಳ್ತಂಗಡಿ: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯ ಧ್ಯೇಯ ದೊಂದಿಗೆ ಗ್ರಾಮಗಳ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಶಿಕ್ಷಣ ರಂಗಕ್ಕೆ ಇನ್ನಷ್ಟು ಒತ್ತು ನೀಡುವ ನಿಟ್ಟಿನಲ್ಲಿ ಕಳಿಯ ಗ್ರಾಮದ ರೇಷ್ಮೆ ರೋಡ್ ನಲ್ಲಿ ವಿಶ್ವೇಶ್ವರಯ್ಯ ವಿಶ್ವವಿದ್ಯಾನಿಲಯದ ವತಿಯಿಂದ ಡಿಪ್ಲೋಮಾ ಕಾಲೇಜು ಆರಂಭಗೊಳ್ಳಲಿದೆ. ಇದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳು ನಡೆಯುತ್ತಿದ್ದು,ಇದು ತಾಲೂಕಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಮೋದಿಯವರ ಆಡಳಿತದ ಕೇಂದ್ರ ಸರಕಾರಕ್ಕೆ 8 ವರ್ಷ ತುಂಬಿದ ಹಿನ್ನೆಲೆಯಲ್ಲಿ
ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ,ಬಿಜೆಪಿ ಹಿಂದುಳಿದ ವರ್ಗಗಳ ಸಹಯೋಗದಲ್ಲಿ ಧರ್ಮಸ್ಥಳದ ಅಟಲ್ ಜೀ ಸಭಾ ಭವನದಲ್ಲಿ ಬುಧವಾರ ಜರಗಿದ ಹಿಂದುಳಿದ ವರ್ಗಗಳ ಸಮಾವೇಶ ಮತ್ತು ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಂದ್ರ ಸರಕಾರವು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಗುಡಿಕೈಗಾರಿಕೆ ಹೈನುಗಾರಿಕೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ. ದೇಶದ ಹಲವು ಭಾಗಗಳಲ್ಲಿ ರೈತರು ಬಿತ್ತನೆ ಬೀಜ ಖರೀದಿಗೆ ಬಡ್ಡಿಗೆ ದುಡ್ಡು ತೆಗೆದುಕೊಳ್ಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಆರಂಭಿಸಿದ್ದು ಇದು ರೈತರಿಗೆ ಅನುಕೂಲ ನೀಡಿದೆ. ಕೇಂದ್ರ ರೂಪಿಸಿರುವ ವ್ಯಕ್ತಿ ಆಧಾರಿತ ಯೋಜನೆಯು ಕಟ್ಟಕಡೆಯ ವ್ಯಕ್ತಿಯನ್ನು ತಲುಪುವಲ್ಲಿ ಸಫಲವಾಗಿದೆ ಎಂದು ಹೇಳಿದರು.
ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಆರ್.ಸಿ.ನಾರಾಯಣ ಮಾತನಾಡಿ ಸ್ವಾಭಿಮಾನದ ಬದುಕಿನ ಮೂಲಕ ತುಳುನಾಡಿನ ಪರಂಪರೆಯನ್ನು ಹಿಂದುಳಿದ ವರ್ಗಗಳ ಸಮಾಜ ಎತ್ತಿಹಿಡಿದಿದೆ. ಮೋದಿ ಸರಕಾರದ ಭ್ರಷ್ಟಾಚಾರ ಮುಕ್ತ ಆಡಳಿತದಿಂದ ಜನರಲ್ಲಿ ವಿಶ್ವಾಸದ ನಗು ಮೂಡಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ,ಕಸ್ತೂರಿ ಪಂಜ, ಮೋನಪ್ಪ ದೇವಸ್ಯ, ಜಿಲ್ಲಾ ಸಂಚಾಲಕ ರಾಮದಾಸ್ ಬಂಟ್ವಾಳ,ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮಿ ಜನಾರ್ದನ್,ಜಿಪಂ ಮಾಜಿ ಅಧ್ಯಕ್ಷ ಕೊರಗಪ್ಪ ನಾಯ್ಕ್,ಎಸ್.ಟಿ. ಬಿಜೆಪಿ ಜಿಲ್ಲಾ ಮೋರ್ಚಾ ಅಧ್ಯಕ್ಷ ಚನ್ನಕೇಶವ ನಾಯ್ಕ್, ಹಿಂದುಳಿದ ಮೋರ್ಚಾ ತಾಲೂಕು ಅಧ್ಯಕ್ಷ ಪ್ರಭಾಕರ ಆಚಾರ್ಯ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್, ಧರ್ಮಸ್ಥಳ ಪ್ಯಾಕ್ಸ್ ಅಧ್ಯಕ್ಷ ಹರಿದಾಸ್ ಗಾಂಭೀರ್,ಮತ್ತಿತರರು ಉಪಸ್ಥಿತರಿದ್ದರು.
ಕೊಕ್ಕಡ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಯೋಗೀಶ್ ಆಲಂಬಿಲ ಸ್ವಾಗತಿಸಿದರು.ಒಬಿಸಿ ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ್ ಬಂಗೇರ ಹಾಗೂ ಸಹಕಾರ ಭಾರತಿ ತಾಲೂಕು ಅಧ್ಯಕ್ಷ ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರೂಪಿಸಿದರು.ದಿನಕರ್ ಕುಲಾಲ್ ವಂದಿಸಿದರು. ಸೀತಾರಾಮ ಬೆಳಾಲು ಸನ್ಮಾನಿತರ ಪಟ್ಟಿ ವಾಚಿಸಿದರು.
374 ಮಂದಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ವಾದ್ಯ,ಸ್ಯಾಕ್ಸೋಫೋನ್,ಕೊಂಬು ವಾದಕರು,ಮರದ ಕೆತ್ತನೆ,ಕಬ್ಬಿಣದ ಕೆಲಸ, ಗುತ್ತು ಮನೆತನ, ದೀವಟಿಗೆ,ಸವಿತಾ ಸಮಾಜ,ಶಿಕ್ಷಣ, ಕಲೆ, ಕ್ರೀಡೆ,ನಾಟಿವೈದ್ಯರು ಮೂರ್ತೆದಾರರು ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 374 ಮಂದಿಯನ್ನು ಸನ್ಮಾನಿಸಲಾಯಿತು. ದೀವಟಿಗೆ ಹಚ್ಚಿ,ತಾಸೆ ಬಡಿಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೀಳ್ಯದೆಲೆ,ಅಡಕೆ,ಬೆಲ್ಲ, ನೀರು ನೀಡುವ ಮೂಲಕ ಅತಿಥಿ, ಅಭ್ಯಾಗತರನ್ನು ಸ್ವಾಗತಿಸಲಾಯಿತು.