ಅಂಬೇಡ್ಕರ್ ಭವನ ಧ್ವಂಸದ ವಿರುದ್ಧ ಕೊಟ್ಟ ದೂರಿಗೆ ಬೆಲೆ ಇಲ್ಲವೇ? ಬೆಳ್ತಂಗಡಿ ದಲಿತರ ಕುಂದು ಕೊರತೆ ಸಭೆಯಲ್ಲಿ ಆಕ್ರೋಶ ಹೊರಹಾಕಿದ ಮುಖಂಡರು

 

 

ಬೆಳ್ತಂಗಡಿ : ವೇಣೂರು ಠಾಣಾ ವ್ಯಾಪ್ತಿಯ ಅಳದಂಗಡಿಯಲ್ಲಿ ಸರಕಾರಿ ಅನುದಾನದಿಂದ ನಿರ್ಮಿಸಲಾದ ಅಂಬೇಡ್ಕರ್ ಭವನ ಕಟ್ಟಡವನ್ನು ಸ್ಥಳೀಯ ಖಾಸಗಿ ವ್ಯಕ್ತಿಗಳು
ರಾತ್ರೋ ರಾತ್ರಿ ದಿಡೀರ್ ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ದೂರು ನೀಡಿ 3 ದಿನಗಳಾದರೂ ಇನ್ನೂ ಎಫ್ ಐ ಆರ್ ದಾಖಲಾಗಿಲ್ಲ ಯಾಕೆ?ದೂರಿಗೆ ಸಂಬಂಧಿಸಿ ಏನು ಕ್ರಮ ಆಗಿದೆ ತಿಳಿಸಿ ಎಂದು ತಾಲೂಕು ದ ಸಂ ಸ ಪ್ರಧಾನ ಸಂಚಾಲಕ ಕೆ ನೇಮಿರಾಜ್ ಪೊಲೀಸರನ್ನು ಪ್ರಶ್ನಿಸಿದರು.

ಬೆಳ್ತಂಗಡಿ , ಧರ್ಮಸ್ಥಳ, ವೇಣೂರು, ಪುಂಜಾಲಕಟ್ಟೆ ಠಾಣೆಗಳ ವ್ಯಾಪ್ತಿಗೊಳಪಟ್ಟ ಗ್ರಾಮಗಳ ದಲಿತರ ಕುಂದು ಕೊರತೆ ಸಭೆಯು ಬೆಳ್ತಂಗಡಿ ಠಾಣೆಯಲ್ಲಿ ನಡೆಯಿತು.
ಅಂಬೇಡ್ಕರ್ ಭವನ ಧ್ವಂಸ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ವೇಣೂರು ಠಾಣಾ ಎಸ್ ಐ ಸೌಮ್ಯಾ ಅವರು ಸರಕಾರಿ ಕಟ್ಟಡಕ್ಕೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಲಿಖಿತ ದೂರು ನೀಡಿದಲ್ಲಿ ಮೇಲಧಿಕಾರಿಗಳ ಮಾರ್ಗದರ್ಶನ ಪಡೆದುಕೊಂಡು ಎಫ್ ಐ ಆರ್ ಅಥವಾ ಸೂಕ್ತ ಕ್ರಮಕೈಗೊಳ್ಳಬಹುದು ಎಂದು ಉತ್ತರಿಸಿದರು.
ಈ ಸಂದರ್ಭ
ಹಾಗಾದರೆ ಅಂಬೇಡ್ಕರ್ ಧ್ವಂಸ ಮಾಡಿರುವ ಬಗ್ಗೆ ದಲಿತ ಸಂಘಟನೆ ಕೊಟ್ಟ ದೂರಿಗೆ ಬೆಲೆ ಇಲ್ಲವೇ? ಒಬ್ಬ ರಾಷ್ಟ್ರ ನಾಯಕನ ಹೆಸರಿನ ಭವನವನ್ನು ಕೆಡವಿದಾಗ ಸಾರ್ವಜನಿಕರು ಅಥವಾ ದಲಿತರು ದೂರು ಕೊಡುವಂತಿಲ್ಲ ಸಂಬಂಧಪಟ್ಟ ಇಲಾಖಾಧಿಕಾರಿಗಳೇ ಕೊಡಬೇಕೆಂದು
ಯಾವ ಕಾನೂನಿನಲ್ಲಿದೆ ಎಂದು ದಲಿತ ಮುಖಂಡರು ಮರು ಪ್ರಶ್ನೆ ಹಾಕಿದರು.

ದಲಿತರು ದೂರು ಕೊಟ್ಟಲ್ಲಿ ಎಷ್ಟೇ ಗಂಭೀರ ಪ್ರಕರಣವಾಗಿದ್ದರೂ
ಎಫ್ ಐ ಆರ್ ದಾಖಲಾಗುವುದೇ ಇಲ್ಲ ಅಥವಾ ವಿಳಂಬವಾಗಿ ಆಗುತ್ತದೆ ದಲಿತರ ವಿರುದ್ಧ ಕೊಟ್ಟ ದೂರುಗಳಿಗೆ ತರಾತುರಿಯಲ್ಲಿ
ಎಫ್ ಐ ಆರ್ ದಾಖಲಾಗುತ್ತದೆ ದಲಿತರು ಮತ್ತು ಇತರರ ಮಧ್ಯೆ ಉಂಟಾದ ವಿವಾದಗಳಲ್ಲಿ ದಲಿತರ ಮೇಲೆ ದಾಖಲಾದ ಕೇಸುಗಳಲ್ಲಿ ಅವಸರವಾಗಿ ಆರೋಪ ಪಟ್ಟಿ ಸಲ್ಲಿಕೆಯಾಗಿ ದಲಿತರು ಕೋರ್ಟಿಗೆ ಅಲೆಯಬೇಕಾಗುತ್ತದೆ ಇದೇ ಪ್ರಕರಣದಲ್ಲಿ ದಲಿತೇತರರ ಮೇಲೆ ಕೇಸುಗಳಾದರೆ ಅಷ್ಟೇ ಬೇಗ ಬಿ.ರಿಪೋರ್ಟ್ ಆಗುವುದನ್ನು ಕಾಣುತ್ತೇವೆ ಎಂದು ಮುಖಂಡ ವಸಂತ್ ಬಿಕೆ ಅಭಿಪ್ರಾಯಪಟ್ಟರು.
ಈ ಬಗ್ಗೆ ಧ್ವನಿಗೂಡಿಸಿದ ದಲಿತ ಮುಖಂಡರು
ಕೆಲವು ಪ್ರಕರಣಗಳ ಉದಾಹಣೆಯನ್ನು ಎತ್ತಿ ತೋರಿಸುತ್ತಾ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ಅಂಬೇಡ್ಕರ್ ಭವನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಕೊಟ್ಟ ದೂರಿಗೆ ಕ್ರಮ ಕೈಗೊಳ್ಳಲು ವಿಳಂಬವಾಗಿರುವ ಬಗ್ಗೆ ಎಫ್ ಐ ಆರ್ ದಾಖಲಿಸದಿರುವ ಬಗ್ಗೆ ಕೂಡಲೇ ಹಿಂಬರಹ ಕೊಡಿ ಎಂದು ಮುಖಂಡ ಶೇಖರ್ ಲಾಯಿಲಾ ಒತ್ತಾಯಿಸಿದಾಗ ಪ್ರತಿಕ್ರಿಯಿಸಿದ ಎಸ್ ಐ ಸೌಮ್ಯಾ ಅವರು ಸರಕಾರಿ ಅನುದಾನದ ಕಟ್ಟಡ ಕೆಡವಿದ ಬಗ್ಗೆ ಸಂಬಂಧಪಟ್ಟಸಮಾಜ ಕಲ್ಯಾಣ ಇಲಾಖೆ ಯಾವುದೇ ದೂರು ನೀಡಿರುವುದಿಲ್ಲ ,
ದೂರು ನೀಡಿದಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದಾಗ, ನೀವು ಹೇಳುವ ಕಾನೂನು ಯಾವ ಸೆಕ್ಷನ್ ನಲ್ಲಿದೆ ಎಂದು ನಮೂದಿಸಿಯೇ ಹಿಂಬರಹ ಕೊಡಿ ಎಂದು ಶೇಖರ್ ಮತ್ತಿತರ ದಲಿತ ಮುಖಂಡರು ಹೇಳಿದಾಗ ವೇದಿಕೆಯಲ್ಲಿದ್ದ ಪೊಲೀಸ್ ಅಧಿಕಾರಿಗಳು ಯಾವುದೇ ಮರುತ್ತರ ನೀಡಲು ವಿಫಲವಾದರು.
ಉಜಿರೆ ದಲಿತ ಯುವತಿಯ ಅತ್ಯಾಚಾರ ಯತ್ನ ಪ್ರಕರಣದ ಆರೋಪಿ ಆತ್ಮಹತ್ಯೆಗೈದಿದ್ದು ಸಂತ್ರಸ್ತೆಯ ಕುಟುಂಬ ಕೇಸು ಮುಂದೇನಾಗುವುದೋ ಎಂಬ ಬಗ್ಗೆ ಆತಂಕ ಮತ್ತು ಗೊಂದಲದಲ್ಲಿದ್ದಾರೆ ಈ ಬಗ್ಗೆ ಮಾಹಿತಿ ಕೊಡಿ ಎಂದು ಮಾಜಿ ಜಿ ಪಂ ಸದಸ್ಯೆ ಸಿ ಕೆ ಚಂದ್ರಕಲಾ ಕೇಳಿದಾಗ ಪ್ರತಿಕ್ರಿಯಿಸಿದ ವೃತ್ತನಿರೀಕ್ಷಕ ಶಿವಕುಮಾರ್ ಆರೋಪಿ ಮೃತಪಟ್ಟರೆ ಸಂಬಂಧಪಟ್ಟವರು ಮರಣ ಪ್ರಮಾಣ ಪತ್ರ ಸಲ್ಲಿಸಿದರೆ ಕೇಸು ಮುಗಿಯುತ್ತದೆ ಆತಂಕಪಡಬೇಕಾಗಿಲ್ಲ ಎಂದರು.
ಬೆಳ್ತಂಗಡಿ -ಉಜಿರೆ ಪೇಟೆಯ ಕೆಲವು ಲಾಡ್ಜ್ ಗಳಲ್ಲಿ ಅಕ್ರಮ ವೇಶ್ಯಾವಾಟಿಕೆ ನಡೆಯುತ್ತಿದೆ ಪೊಲೀಸರಿಗೆ ಗೊತ್ತಿದೆ ಆದರೂ ಯಾಕೆ ನಿರ್ಭೀತವಾಗಿ ದಂಧೆ ನಡೆಯುತ್ತಿದೆ ಇದರ ಹಿಂದೆ ಪೊಲೀಸರೇ ಇದ್ದಾರೆ ಎಂಬ ಆರೋಪ ಬಂದರೆ ನಮಗೆ ನೋವಾಗುತ್ತದೆ ಪೊಲೀಸರಿಗೆ ‘ವ್ಯವಸ್ಥೆ’ ಮಾಡಿಯೇ ಇಂಥ ಕೃತ್ಯ ನಡೆಯುತ್ತಿದೆ ಎಂಬ ಆರೋಪದಿಂದ ಪೊಲೀಸರು ಹೊರಬರಬೇಕು ಎಂದು ದಲಿತ ಮುಖಂಡ ಅನಂತ್ ಮುಂಡಾಜೆ ಹೇಳಿದಾಗ ಪೊಲೀಸರು ಸ್ಪಷ್ಟ ಉತ್ತರ ನೀಡಲಿಲ್ಲ.
ದಲಿತರ ಮೇಲಿನ ಬಹುತೇಕ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಪರಿಣಾಮಕಾರಿ ಕಾನೂನು ‌ಕ್ರಮಗಳನ್ನು ಕೈಗೊಳ್ಳದೆ ಠಾಣೆಯಲ್ಲಿ ರಾಜಿ ಸಂಧಾನ ನಡೆಯುತ್ತವೆ ಪೊಲೀಸ್ ಠಾಣೆ ಎಂದರೆ ಪಂಚಾಯಿತಿ ಕಟ್ಟೆಯೇ ? ಎಂಬ ಪ್ರಶ್ನೆಯನ್ನು ಮುಖಂಡರಾದ ಸಂಜೀವ ಆರ್ ಮುಂತಾದವರು ಕೇಳಿದರು.
ಬಸ್ ನಿಲ್ದಾಣದಲ್ಲಿ ಹೊಡೆದಾಟ, ನಗದು , ಹಾಡುಹಗಲೇ ಮೊಬೈಲ್ ಕಳವು ಮತ್ತಿತರ ಪ್ರಕರಣಗಳು ನಡೆಯುತ್ತಲೇ ಇರುತ್ತದೆ ಇಂಥ ಕೃತ್ಯಗಳ ದೃಶ್ಯಗಳನ್ನು ಸೆರೆ ಹಿಡಿಯಬಲ್ಲ ಯಾವುದೇ ಸರಕಾರಿ ಸಿಸಿ ಟಿವಿಗಳು ಬಸ್ ನಿಲ್ದಾಣ ವಠಾರದಲ್ಲಿಲ್ಲ
ಕಳ್ಳರ ಯಾವುದೇ ಸುಳಿವೂ ಸಿಗದೆ ಪತ್ತೆಯಾಗದ ಪ್ರಕರಣಗಳಾಗುವ ಸಾಧ್ಯತೆ ಇದೆ
ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವಂತೆ ದಲಿತ ಮುಖಂಡ ವಸಂತ್ ಬಿಕೆ ಒತ್ತಾಯಿಸಿದರು.
ಕುತ್ಲೂರು ಸೇರಿದಂತೆ ಆಯಾ ಠಾಣಾ ವ್ಯಾಪ್ತಿಯ ಗ್ರಾಮಗಳ ಪರಿಶಿಷ್ಟರ ಕಾಲೋನಿ ಪ್ರದೇಶಗಳಲ್ಲಿ ಕುಂದು ಕೊರತೆ ಸಭೆಗಳು ನಡೆಯಲಿ, ಸರಕಾರಕ್ಕೆ ವರದಿ ಒಪ್ಪಿಸುವ ಏಕೈಕ ಉದ್ದೇಶದಿಂದ ದಲಿತರ ಕುಂದು ಕೊರತೆ ಸಭೆಗಳು ನಡೆಯುತ್ತಿದೆ ಸಭೆಯಲ್ಲಿ ಪ್ರಸ್ತಾಪವಾಗುವ ಯಾವುದೇ ಸಮಸ್ಯೆಗಳು ಬಗೆಹರಿಯುತ್ತಿಲ್ಲ, ಅನ್ಯಾಯಕ್ಕೊಳಗಾದ ದಲಿತರಿಗೆ ನ್ಯಾಯ, ರಕ್ಷಣೆ ಸಿಗದಿದ್ದಲ್ಲಿ ಇಂಥ ಸಭೆಗಳಿಗೆ ಯಾವ ಅರ್ಥವಿದೆ ಎಂಬಿತ್ಯಾದಿ ವಿಷಾದದ ಮಾತುಗಳು ಪೊಲೀಸ್ ವ್ಯವಸ್ಥೆಗೆ ನಯವಾಗಿ ಸಡ್ಡು ಹೊಡೆದಂತಿತ್ತು.
ದಲಿತ ಮುಖಂಡರಿಂದ ಸಭೆಯಲ್ಲಿ ವ್ಯಕ್ತವಾದ ಆರೋಪ, ಟೀಕೆ,ಪ್ರಶ್ನೆಗಳಿಗೆ ಮತ್ತು ಕೆಲವೇ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯ ಪರಿಣಾಮಕ್ಕೆ ದಲಿತರ ಕುಂದು ಕೊರತೆ ಸಭೆಯಲ್ಲಿ ವೇದಿಕೆಯಲ್ಲಿದ್ದ ಎಲ್ಲಾ ಪೊಲೀಸ್ ಅಧಿಕಾರಿಗಳೂ ಉತ್ತರಿಸಲಾಗದ ಪರಿಸ್ಥಿತಿ ಎದುರಿಸುವಂತಾಯಿತು.
ಲಾಯಿಲಾದಲ್ಲಿ ಬಡ ದಲಿತ ಕುಟುಂಬವೊಂದಕ್ಕೆ ನಿರಂತರ ದೌರ್ಜನ್ಯ, ಜಾತಿನಿಂದನೆ ನಡೆಯುತ್ತಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪದೇ ಪದೇ ದೂರು ನೀಡಿದರೂ ಠಾಣೆಯಲ್ಲಿ ರಾಜಿ ಮಾತುಕತೆಗೆ ಒಪ್ಪಿಕೊಂಡು ಮುಚ್ಚಳಿಕೆಗೆ ಸಹಿ ಹಾಕಿ ಹೋಗುವ ಖಾಸಗಿ ವ್ಯಕ್ತಿ ಮನೆಗೆ ಹೋದ ಕೂಡಲೇ ಮತ್ತದೇ ದರ್ಪ, ಅಮಾನವೀಯತೆ ಮೆರೆಯುತ್ತಾನೆ ದಲಿತ ಕುಟುಂಬಕ್ಕೆ ನೆಮ್ಮದಿ ಇಲ್ಲದಂತಾಗಿದೆ ಎಂದು ದಲಿತ ಮುಖಂಡರು ಪೊಲೀಸರ ಗಮನ ಸೆಳೆದಾಗ ಸಂಬಂಧಪಟ್ಟ ಪ್ರಕರಣದ ನೊಂದ ದಲಿತ “ನಾವು ದಲಿತರಾಗಿ ಹುಟ್ಟಿದ್ದೇ ತಪ್ಪಾ?” ಎಂದು ಕುಂದು ಕೊರತೆ ಸಭೆಯಲ್ಲಿ ಅಳುತ್ತಲೇ ನೋವು ತೋಡಿಕೊಂಡಿದ್ದು ಪೊಲೀಸರು ಮುಂದಿನ ಕ್ರಮದ ಭರವಸೆ ನೀಡಿದರು.

error: Content is protected !!