ಲಡಖ್ ಸೇನಾ ಬಸ್ಸ್ ಉರುಳಿ 7 ಯೋಧರ ಸಾವು ಬಸ್ಸಿನಿಂದ ಜಿಗಿದು ಪಾರಾದ ಚಾಲಕನ ಪಾತ್ರದ ಬಗ್ಗೆ ತನಿಖೆ

 

 

ದೆಹಲಿ : ಜಮ್ಮು-ಕಾಶ್ಮೀರದ ಲಡಾಖ್‌ನಲ್ಲಿ ಸೇನಾ ಬಸ್​​ ನದಿಗೆ ಉರುಳಿ ಬಿದ್ದು ಏಳು ಯೋಧರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್​ ಚಾಲಕನ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ. ಬಸ್​ ನದಿಗೆ ಜಾರುವ ಮುನ್ನ ಬಸ್​ನಿಂದ ಜಿಗಿದು ಚಾಲಕ ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಶುಕ್ರವಾರ ಬೆಳಗ್ಗೆ ಲಡಾಖ್​ನ ಮಿಲಿಟರಿ ಏರ್‌ಫೀಲ್ಡ್ ಬೇಸ್​ ಬಳಿಯ ಥೋಯಿಸ್ ಸಮೀಪದ 50-60 ಅಡಿಗಳಷ್ಟು ಶಯೋಕ್ ನದಿಗೆ 26 ಸೈನಿಕರು ಪ್ರಯಾಣಿಸುತ್ತಿದ್ದ ಬಸ್​ ರಸ್ತೆಯಿಂದ ಸ್ಕಿಡ್ ಆಗಿ ಬಿದ್ದಿತು. ಈ ದುರಂತದಲ್ಲಿ ಏಳು ಸೈನಿಕರು ಸಾವನ್ನಪ್ಪಿದರೆ, ಉಳಿದ 19 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಕೆಲವರು ಪರಿಸ್ಥಿತಿ ಗಂಭೀರವಾಗಿದ್ದು, ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಅಪಘಾತದ ಸಂದರ್ಭದಲ್ಲಿ ಚಾಲಕ ಅಹ್ಮದ್ ಶಾ ಬಸ್‌ನಿಂದ ಹಾರಿ ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಈ ಬಸ್​ ದುರಂತದ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ. ಇದು ನಿರ್ಲಕ್ಷ್ಯದ ಚಾಲನೆ ಮತ್ತು ಉದ್ದೇಶಪೂರ್ವಕ ಅಪಘಾತವಲ್ಲ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದರ ತನಿಖೆ ವೇಳೆ ಚಾಲಕನ ಪಾತ್ರ ಬಗ್ಗೆಯೂ ತನಿಖೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತ, ಈ ಘಟನೆಯ ಸ್ಥಳವು ತುರ್ತುಕ್ ಸೆಕ್ಟರ್‌ನಲ್ಲಿ ಸುಮಾರು 12 ಸಾವಿರ ಅಡಿ ಎತ್ತರದಲ್ಲಿದೆ. ಇದರ ಮಾರ್ಗದಲ್ಲಿ ಒಂದು ಬದಿ ಶಯೋಕ್ ನದಿ ಹಾಗೂ ಇನ್ನೊಂದು ಕಡೆ ಕಡಿದಾದ ಬಂಡೆಯ ಗೋಡೆ ಇದೆ. ಇಲ್ಲಿ ವಾಹನ ಚಾಲನೆ ಮಾಡುವುದು ಸವಾಲಿನ ಕೆಲಸ ಎಂದೂ ಹೇಳಲಾಗುತ್ತಿದೆ.

error: Content is protected !!