ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ ಬಿ ಯಶೋವರ್ಮ ವಿಧಿವಶ

 

 

 

ಬೆಳ್ತಂಗಡಿ : ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಉಜಿರೆ ನಿವಾಸಿ ಡಾ. ಬಿ. ಯಶೋವರ್ಮ (67) ಭಾನುವಾರ ತಡರಾತ್ರಿ ಸಿಂಗಾಪುರದಲ್ಲಿ ನಿಧನರಾದರು.
ಅವರಿಗೆ ಪತ್ನಿ ಸೋನಿಯಾವರ್ಮ ಮತ್ತು ಇಬ್ಬರು ಪುತ್ರರು ಪೂರನ್‍ವರ್ಮ ಮತ್ತು ಕೆಯೂರ್‍ವರ್ಮ ಇದ್ದಾರೆ. ಅಲ್ಪಕಾಲದ ಅನಾರೋಗ್ಯ ಪೀಡಿತರಾದ ಅವರು ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಹೋಗಿದ್ದರು.
ಮೂಲತಃ ಮೂಡಬಿದ್ರೆ ತಾಲ್ಲೂಕಿನ ಪೆರಾಡಿ ಬೀಡು ನಿವಾಸಿಯಾದ ಅವರು ಮೂಡಬಿದ್ರೆ ಜೈನ ಹೈಸ್ಕೂಲಿನ ಕನ್ನಡ ಪಂಡಿತರೆಂದೇ ಚಿರಪರಿಚಿತರಾಗಿದ್ದ ದಿವಂಗತ ಟಿ. ರಘುಚಂದ್ರ ಶೆಟ್ಟಿ ಮತ್ತು ಪೆರಾಡಿ ಬೀಡು ಪುಷ್ಪಾವತಿ ದಂಪತಿಯ ಮಗ.
ಸಸ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾದ ಅವರು ಧಾರವಾಡದಲ್ಲಿ ಜೆ.ಎಸ್.ಎಸ್. ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಬಳಿಕ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದ ಬಳಿಕ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದರು.
ಉತ್ತಮ ವಾಗ್ಮಿ, ಶಿಸ್ತಿನ ಸಿಪಾಯಿ, ನೇರ ನಡೆ-ನುಡಿಯ ಅವರು ದಕ್ಷ ಆಡಳಿತಗಾರರಾಗಿದ್ದು, ಉಜಿರೆಯನ್ನು ಜಾಗತಿಕ ನಕಾಶೆಯಲ್ಲಿ ಗುರುತಿಸುವ ಭಗೀರಥ ಪ್ರಯತ್ನ ಮಾಡಿದ್ದಾರೆ.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾಗಿ, ಜೈನ್ ಮಿಲನ್ ಅಧ್ಯಕ್ಷರಾಗಿ, ಬೆಳ್ತಂಗಡಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷರಾಗಿ, ಧರ್ಮಸ್ಥಳದಲ್ಲಿ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನ ಸಮಿತಿಯ ಕಾರ್ಯದರ್ಶಿಯಾಗಿ, ಮಂಗಳೂರು ವಿ.ವಿ. ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ ಉತ್ತಮ ಸೇವೆ ಮಾಡಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಮೌನ ಪ್ರಾರ್ಥನೆ ಬಳಿಕ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಎಲ್ಲಾ ಶಾಲಾ-ಕಾಲೇಜುಗಳಿಗೆ ಸೋಮವಾರ ರಜೆ ನೀಡಲಾಯಿತು.
ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರುಗಳಾದ ಕೆ. ಹರೀಶ್ ಕುಮಾರ್ ಮತ್ತು ಕೆ. ಪ್ರತಾಪಸಿಂಹ ನಾಯಕ್, ಮೂಡಬಿದ್ರೆಯ ಡಾ. ಎಂ. ಮೋಹನ ಆಳ್ವ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಶ್ರೀನಾಥ್ ಎಂ.ಪಿ., ಮಾಜಿ ಶಾಸಕ ಕೆ. ವಸಂತ ಬಂಗೇರ, ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶರತ್‍ಕೃಷ್ಣ ಪಡ್ವೆಟ್ನಾಯ, ಮೊದಲಾದ ಗಣ್ಯರು, ಅಭಿಮಾನಿಗಳು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಗಾಢ ಸಂತಾಪ ವ್ಯಕ್ತ ಪಡಿಸಿದ್ದಾರೆ.

error: Content is protected !!