ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ನೇತೃತ್ವ ಶ್ರೀ ಗುರುದೇವ ಕಾಲೇಜಿನಲ್ಲಿ ಸಿಇಟಿ, ನೀಟ್ ಉಚಿತ ತರಬೇತಿ

 

 

 

ಬೆಳ್ತಂಗಡಿ: ಇಂದು ಉತ್ತಮ ತರಬೇತಿಯಿಲ್ಲದೆ ಯಾವುದೇ ಸ್ಪರ್ಧೆಯನ್ನು ಎದುರಿಸುವುದು ವ್ಯರ್ಥ. ಅದರಲ್ಲೂ ಸಿಇಟಿ ಮತ್ತು ನೀಟ್ ಪರೀಕ್ಷೆಗೆ ತರಬೇತಿ ಅತ್ಯಂತ ಅಗತ್ಯವಾಗಿದ್ದು, ಶ್ರೀ ಗುರುದೇವ ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಈ ತರಬೇತಿ ಉಚಿತವಾಗಿ ಆರಂಭವಾಗಿರುವುದು ಸಂತೋಷದ ವಿಚಾರ’ ಎಂದು ಮಾಜಿ ಶಾಸಕ, ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಕೆ.ವಸಂತ ಬಂಗೇರ ಹೇಳಿದರು.

ಅವರು ಶುಕ್ರವಾರ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ಬ್ರಹ್ಮ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ನೇತತ್ವದಲ್ಲಿ, ಬಿಲ್ಲವ ಮಹಿಳಾ ವೇದಿಕೆ ಮತ್ತು ತಾಲ್ಲೂಕು ಯುವ ಬಿಲ್ಲವ ವೇದಿಕೆ ಇವುಗಳ ಸಹಭಾಗಿತ್ವದಲ್ಲಿ ಸಿಇಟಿ ಮತ್ತು ನೀಟ್ ಪರೀಕ್ಷೆಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಈ ಸಮಾಜದಲ್ಲಿ ದುಡ್ಡು ಮತ್ತು ಲಂಚಕ್ಕೆ ಮಾತ್ರ ಬೆಲೆ ಎಂಬಂತಾಗಿದೆ. ಸೇವಾ ಕಾರ್ಯಕ್ಕೆ, ಉಚಿತವಾಗಿ ಸಿಗುವ ಶಿಕ್ಷಣಕ್ಕೆ ಬೆಲೆ ಇಲ್ಲದಂತಾಗಿದೆ. ಆದರೂ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ವಿದ್ಯಾರ್ಥಿಗಳಿಗಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಇಂತಹ ತರಬೇತಿಯನ್ನು ಉಚಿತವಾಗಿ ಅನುಭವಿ ಉಪನ್ಯಾಸಕರಿಂದ ನೀಡುತ್ತಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಪರೀಕ್ಷೆಯನ್ನು ದೈರ್ಯದಿಂದ ಎದುರಿಸಬೇಕು’ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ ವಹಿಸಿದ್ದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಶೇಖರ ಬಂಗೇರ, ಶೈಕ್ಷಣಿಕ ಸಮಿತಿ ಸಂಚಾಲಕ ಲಕ್ಷ್ಮಣ ಪೂಜಾರಿ, ಸಂಘದ ನಿರ್ದೇಶಕ ಅರುಣೇಂದ್ರ, ತರಬೇತುದಾರರಾದ ಸುಧೀರ್, ಶ್ರೀ ಗುರುದೇವ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಸವಿತಾ ಇದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಜಯ ವಿಕ್ರಮ್ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಗುಣಪ್ರಸಾದ್ ಪ್ರಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಶ್ರುತಿ ಕಾರ್ಯಕ್ರಮ ನಿರೂಪಿಸಿ, ಪ್ರಾಂಶುಪಾಲ ಸುಕೇಶ್ ಕುಮಾರ್ ವಂದಿಸಿದರು.

error: Content is protected !!