ಬೆಳ್ತಂಗಡಿ:ಹತ್ತನೇ ತರಗತಿಯ ಪಠ್ಯ ಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತಾದ ಪಠ್ಯವನ್ನು ಕೈಬಿಟ್ಟ ಸುದ್ದಿ ಕೇಳಿ ನನಗೆ ತುಂಬಾ ನೋವು ಮತ್ತು ಆಘಾತವಾಗಿದೆ ಎಂದು ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್
ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿನ ಅಸ್ಪೃಶ್ಯತೆ ವಿರುದ್ಧ ಹೋರಾಡಿದ ಈ ದೇಶ ಕಂಡ ಅತ್ಯಂತ ಶ್ರೇಷ್ಠ ದಾರ್ಶನಿಕ.
ಮೂಢನಂಬಿಕೆ, ಜಾತೀಯತೆ, ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಬೆತ್ತಲೆಸೇವೆ, ಬಾಲ್ಯವಿವಾಹ, ಗುಲಾಮಗಿರಿ, ಜೀತ ಪದ್ಧತಿ, ಜಮೀನ್ದಾರಿ ಪದ್ಧತಿ, ಮೇಲು ಕೀಳು ತೊಡೆದುಹಾಕಿ ಸಮಾನತೆಯ ಸಮಾಜಕ್ಕೆ ಪ್ರಯತ್ನಿಸಿದ ಸಾಮಾಜಿಕ ಹರಿಕಾರ.
ಓರ್ವ ಸಮಾಜ ಸುಧಾರಕರಾಗಿ ಅವರನ್ನು ಕಂಡಾಗ ಅವರು ಒಂದು ಜಾತಿ, ಧರ್ಮದ ಗುರುವಲ್ಲ. ಅವರು ಲೋಕ ಗುರು. ಅವರು ಹೇಳಿದ ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವುದು ಮನುಷ್ಯ ಧರ್ಮದ ಸಾರ.
ಸ್ವಾಮಿ ವಿವೇಕಾನಂದ, ಇಂದಿರಾ ಗಾಂಧಿ, ಡಾ. ಆರ್ .ಅಂಬೇಡ್ಕರ್, ರಂತಹ ಮೇರು ವ್ಯಕ್ತಿಗಳೇ ನಾರಾಯಣ ಗುರುಗಳ ಬಗ್ಗೆ ತಿಳಿದು ‘ಇದುವರೆಗೆ ಇಂತಹ ಮಹಾತ್ಮನನ್ನು ಲೋಕ ತಿಳಿಯದೆ ಹೋಯಿತಲ್ಲಾ’ ಎಂದಿರುವುದು ಗುರುಗಳ ವ್ಯಕ್ತಿತ್ವದ ಆಕರ್ಷಣೆಗೆ ನಿದರ್ಶನವಾಗಿದೆ.
ಪ್ರಸ್ತುತ ದೇಶ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಕಳೆದ ಗಣರಾಜ್ಯೋತ್ಸವ ಪೆರೇಡ್ ನಲ್ಲೂ ಕೂಡ ಗುರುಗಳ ಸ್ತಬ್ಧ ಚಿತ್ರವನ್ನು ಪ್ರದರ್ಶನ ಮಾಡುವುದಕ್ಕೆ ಅವಕಾಶ ನಿರಾಕರಿಸಿ ಸಮಸ್ತ ಬಿಲ್ಲವ ಸಮಾಜ ಮತ್ತು ನಾರಾಯಣ ಗುರುಗಳ ಅಭಿಮಾನಿಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದು ನಾವ್ಯಾರು ಮರೆತಿಲ್ಲ.
2012ರ ಏ.4ರಂದು ಶಿವಗಿರಿ ಯಾತ್ರೆಯ 40ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ದೇಶದ ಪ್ರಧಾನಿ ಮಾನ್ಯ ನರೇಂದ್ರ ಮೋದಿಯವರು ‘ಮನುಜಕುಲ ಒಂದೇ ಎನ್ನುವ ನಾರಾಯಣಗುರುಗಳ ಬೋಧನೆಯ ಸಂದೇಶಗಳನ್ನು ಜನರು ಅನುಸರಿಸಿದರೆ ಜಗತ್ತಿನ ಯಾವುದೇ ಶಕ್ತಿಯೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. ಹಾಗಿದ್ದರೂ ಅವರದೇ ಆಡಳಿತ ನಡೆಸುವ ರಾಜ್ಯ ಬಿಜೆಪಿ ಸರಕಾರ ನಾರಾಯಣಗುರುಳ ಪಠ್ಯವನ್ನು ಕೈಬಿಟ್ಟಿದೆ. ಹಾಗಿರುವಾಗ ಮೋದಿ ಭಾಷಣ ಹೇಳಿಕೆ ಕೇವಲ ನಾಟಕೀಯ ಹೇಳಿಕೆಯೇ?
ರಾಜಕೀಯ ಹಿತಾಸಕ್ತಿಗಾಗಿ, ಹಿಂದುಳಿದ ವರ್ಗದ ಯುವಕರನ್ನು ಪ್ರಚೋದಿಸಿ, ಬೇರೆಯವರ ವಿರುದ್ಧ ಅವರನ್ನು ಎತ್ತಿಕಟ್ಟಿ ಬೇಳೆ ಬೇಯಿಸಿಕೊಳ್ಳುವುದರಲ್ಲಿ ನಿಸ್ಸೀಮವಾಗಿರುವ ಬಿಜೆಪಿ ಪಕ್ಷ ಯಾರ ಅಣತಿಯಂತೆ, ಮತ್ತು ಯಾರನ್ನು ಮೆಚ್ಚಿಸಲು, ತನ್ನ ಈ ಹಿಡನ್ ಅಜೇಂಡಾಗಳನ್ನು ಒಂದೊಂದಾಗಿ ಜಾರಿಗೊಳಿಸುತ್ತಿದೆ ಎಂದು ರಾಜ್ಯದ ಜನತೆಗೆ ಚೆನ್ನಾಗಿ ಮನವರಿಕೆಯಾಗಿದೆ ಎನ್ನುವುದನ್ನು ಕೇಂದ್ರ ಮತ್ತು ರಾಜ್ಯ ಸರಕಾರ ತಿಳಿಯಬೇಕಾಗಿದೆ.
ಇದೊಂದು ಗಂಭೀರ ವಿಚಾರವಾಗಿದ್ದು, ಈ ಕೂಡಲೇ ರಾಜ್ಯ ಸರಕಾರ ಎಚ್ಚೆತ್ತುಕೊಳ್ಳಬೇಕು ಮತ್ತು ಕೂಡಲೇ ಶಿಕ್ಷಣ ಸಚಿವರು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಬೇಕು. ಒಂದು ವೇಳೆ ಮಹಾನ್ ಸಂತರ ಕುರಿತಾದ ಪಠ್ಯ ಕೈಬಿಟ್ಟಿದ್ದರೆ ಕೂಡಲೇ ಸೇರ್ಪಡೆ ಮಾಡಬೇಕು. ಇಲ್ಲದಿದ್ದರ ರಾಜ್ಯದ ಬಿಜೆಪಿ ಸರಕಾರ ಮುಂದಿನ ದಿನಗಳಲ್ಲಿ, ತಕ್ಕ ಪ್ರತಿರೋಧವನ್ನು ಎದುರಿಸಬೇಕಾದೀತು.