ಬೆಳ್ತಂಗಡಿ: ಶಾಲಾ ಆರಂಭೋತ್ಸವದ ಪ್ರಯುಕ್ತ ಮರೋಡಿ ಗ್ರಾಮದ ಕೂಕ್ರಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳನ್ನೂ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಶಾಲಾ ಹೊರಾಂಗಣದಿಂದ ಚೆಂಡೆ, ವಾದ್ಯದ ಮೆರವಣಿಗೆಯಲ್ಲಿ ಮಕ್ಕಳನ್ನು ತರಗತಿಗಳಿಗೆ ಕರೆ ತರಲಾಯಿತು. ಶಾಲಾ ಶಿಕ್ಷಕರು, ಪೋಷಕರು, ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ಪುಷ್ಪಾರ್ಚಣೆ ಮಾಡಿದರು.
ನಿವೃತ್ತ ಶಿಕ್ಷಕರಾದ ಎಂ.ಕೆ.ಆರಿಗ, ಪದ್ಮರಾಜ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಕೂಕ್ರಬೆಟ್ಟು ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಅಧ್ಯಕ್ಷ ಜಯಂತ ಕೋಟ್ಯಾನ್, ಕಾರ್ಯದರ್ಶಿ ನಾರಾಯಣ ಪೂಜಾರಿ, ಪ್ರಗತಿಪರ ಕೃಷಿಕ ರವೀಂದ್ರ ಹೆಗ್ಡೆ, ಮರೋಡಿ ಗ್ರಾಮ ಪಂಚಾಯಿತಿ ಸದಸ್ಯರಾದ ರತ್ನಾಕರ ಬುಣ್ಣಾನ್, ಅಶೋಕ್ ಪೂಜಾರಿ, ಯಶೋದಾ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಯಶೋಧರ ಬಂಗೇರ, ಉಪಾಧ್ಯಕ್ಷ ಯೋಗೇಂದ್ರ ಆಚಾರ್ಯ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಹರಿಣಾಕ್ಷಿ, ವಿವಿಧ ಸಮಿತಿ ಪದಾಧಿಕಾರಿಗಳು, ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.
ಶಾಲೆಗೆ ಮುಖ್ಯಶಿಕ್ಷಕಿಯಾಗಿ ಪದೋನ್ನತಿಗೊಂಡ ಸುಫಲಾ ಅವರನ್ನು ಅಭಿನಂದಿಸಲಾಯಿತು. ಸಹಶಿಕ್ಷಕಿಯರಾದ ಹರ್ಷಲಾ, ಶುಭಶ್ರೀ ಇದ್ದರು.
ಶಾಲಾ ಆರಂಭೋತ್ಸವದ ಹಿನ್ನೆಲೆಯಲ್ಲಿ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
‘ಹೊಸ ಕಟ್ಟಡ ಶೀಘ್ರದಲ್ಲೇ ಲಭ್ಯ’
ಕೂಕ್ರಬೆಟ್ಟು ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಅಧ್ಯಕ್ಷ ಜಯಂತ ಕೋಟ್ಯಾನ್ ಮಾತನಾಡಿ, ‘ಕೂಕ್ರಬೆಟ್ಟು ಶಾಲೆಗೆ ಶಾಸಕ ಹರೀಶ್ ಪೂಂಜ ಅವರ ಪ್ರಯತ್ನದಿಂದಾಗಿ ಸುಮಾರು ₹92 ಲಕ್ಷ ವೆಚ್ಚದ ಸುಸಜ್ಜಿತ ಕಟ್ಟಡದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಿ, ಹೊಸ ಕಟ್ಟಡಕ್ಕೆ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗುತ್ತದೆ’ ಎಂದು ಹೇಳಿದರು.
‘ಮೂರು ವರ್ಷಗಳ ಹಿಂದೆ ಕೇವಲ 16 ಮಕ್ಕಳಿದ್ದು, ಮುಚ್ಚುವ ಹಂತದಲ್ಲಿದ್ದ ನಮ್ಮ ಶಾಲೆಯಲ್ಲಿ ಈಗ ಮಕ್ಕಳ ಸಂಖ್ಯೆ 150 ತಲುಪಿದೆ. ಈ ವರ್ಷ ಇನ್ನಷ್ಟು ಮಕ್ಕಳು ಬೇರೆ ಬೇರೆ ಶಾಲೆಗಳಿಂದ ದಾಖಲಾಗುವ ನಿರೀಕ್ಷೆ ಇದೆ’ ಎಂದು ಹೇಳಿದರು.