ಬದುಕಿನಲ್ಲಿ ಆಸ್ತಿ, ಅಂತಸ್ತು ಮುಖ್ಯ ಅಲ್ಲ. ಪ್ರೀತಿ-ವಿಶ್ವಾಸವೇ ಮುಖ್ಯ : ಸಚಿವ ಆರ್. ಅಶೋಕ್ ಕಾರ್ಯಕ್ರಮಕ್ಕೆ ಮೆರುಗು ನೀಡಿದ ಚಲನ ಚಿತ್ರ ನಟ ಗೋಲ್ಡನ್ ಸ್ಟಾರ್ ಗಣೇಶ್ ಧರ್ಮಸ್ಥಳ 50ನೇ ಉಚಿತ ಸಾಮೂಹಿಕ ವಿವಾಹ ಸಮಾರಂಭ

 

 

 

ಬೆಳ್ತಂಗಡಿ : ಬದುಕಿನಲ್ಲಿ ಆಸ್ತಿ, ಅಂತಸ್ತು ಮುಖ್ಯ ಅಲ್ಲ. ಪ್ರೀತಿ-ವಿಶ್ವಾಸವೇ ಮುಖ್ಯ. ಬಡತನ – ಸಿರಿತನ ಶಾಶ್ವತವಲ್ಲ. ಪ್ರೀತಿ-ವಿಶ್ವಾಸವಿಲ್ಲ್ಲದಿದ್ದರೆ ಬದುಕಿಗೆ ಅರ್ಥವಿಲ್ಲ. ಗಂಡ-ಹೆಂಡತಿ ಸದಾ ಪರಸ್ಪರ ಅರ್ಥೈಸಿಕೊಂಡು ಪ್ರೀತಿ-ವಿಶ್ವಾಸದಿಂದ ಸಾರ್ಥಕ ಜೀವನ ನಡೆಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

 

 

ಅವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 50ನೇ ವರ್ಷದ ಸಾಮೂಹಿಕ ಉಚಿತ ವಿವಾಹ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

 

 

 

 

ಕಷ್ಟ ಬಂದಾಗ ಜೀವನದಲ್ಲಿ ಪಾಠ ಕಲಿಯುತ್ತೇವೆ. ಎಲ್ಲರೂ ಸತ್ಯ, ಧರ್ಮದ ಹಾದಿಯಲ್ಲಿ ನಡೆದು ಸುಖ-ಶಾಂತಿ ಮತ್ತು ನೆಮ್ಮದಿಯ ಜೀವನ ನಡೆಸಬೇಕು. ಕಷ್ಟ-ಸುಖದಲ್ಲಿ ಸಮಾನವಾಗಿ ಭಾಗಿಯಾದರೆ ಸುಖೀ ಸಂಸಾರ ನಡೆಸಲು ಸಾಧ್ಯ. ಧರ್ಮಾಧಿಕಾರಿ ಡಾ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರದ ಹಲವಾರು ಸಾಮಾಜಿಕ ಯೋಜನೆಗಳು ದೇಶಕ್ಕೆ ಮಾದರಿಯಾಗಿದೆ. ದುಂದುವೆಚ್ಚ ಕಡಿವಾಣಕ್ಕೆ ಸರಳ ಸಾಮೂಹಿಕ ವಿವಾಹ ಕುರಿತು ಡಾ.ಹೆಗ್ಗಡೆಯವರ ಕಲ್ಪನೆ ನಿಜಕ್ಕೂ ಶ್ಲಾಘನೀಯ ಎಂದು ಅವರು ಹಾರೈಸಿದರು.
ಸರಕಾರ ಹಲವಾರು ಜನಪರ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. 72 ಗಂಟೆಗಳೊಳಗೆ ಮನೆ ಬಾಗಿಲಿಗೆ ಸರ್ಕಾರದಿಂದ ದೂರವಾಣಿ ಮೂಲಕ ವೃದ್ಧಾಪ್ಯ ವೇತನ ನೀಡುವ ಕಾರ್ಯಕ್ರಮ ಸದ್ಯದಲ್ಲಿಯೇ ಜಾರಿಗೆ ಬರಲಿದೆ ಎಂದು ಸಚಿವರು ಪ್ರಕಟಿಸಿದರು. ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಈ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದರು.

 

 

ಚಲನಚಿತ್ರ ನಟ ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ, ಸತ್ಯ., ಧರ್ಮ, ನ್ಯಾಯ ಮತ್ತು ನೀತಿಗೆ ಪ್ರಸಿದ್ಧವಾದ ಕ್ಷೇತ್ರ ಧರ್ಮಸ್ಥಳ. ಈ ಪುಣ್ಯ ಭೂಮಿಯಲ್ಲಿ ಸಂಸಾರ ಜೀವನಕ್ಕೆ ಕಾಲಿಡುತ್ತಿದ್ದೀರಿ. ಸಂಸಾರ ಸಾಗರಕ್ಕೆ ಧುಮುಕಿದ ನವದಂಪತಿಗಳು ಶ್ರೀ ಸ್ವಾಮಿಯ ಅನುಗ್ರಹದಿಂದ ಸುಖ-ಶಾಂತಿ ಮತ್ತು ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಹಾರೈಸಿದರು. ಕ್ಷೇತ್ರದ ಭಕ್ತನಾದ ನಾನು ವರ್ಷಕ್ಕೊಮ್ಮೆ ಬಂದು ದೇವರ ದರ್ಶನ ಪಡೆದು ಸೇವೆ ಮಾಡಿ ಹೋಗುತ್ತಿದ್ದೇನೆ ಎಂದು ಹೇಳಿದರು.
ವರನಟ ರಾಜ್‌ಕುಮಾರ್ ಹಾಡಿದ ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ ಹಾಡಿನ ಚರಣವನ್ನು ಸುಶ್ರಾವ್ಯವಾಗಿ ಹಾಡಿ ನೂತನ ದಂಪತಿಗಳಿಗೆ ಶುಭ ಕೋರಿದರು.

 

 

ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಸಾಮೂಹಿಕ ವಿವಾಹ ಸರಳ ಜೀವನಕ್ಕೆ ನಾಂದಿಯಾಗಬೇಕು. ಮದುವೆಯ ಹೆಸರಿನಲ್ಲಿ ದುಂದು ವೆಚ್ಚ ಮಾಡಬಾರದು. ವಿವಾಹಕ್ಕಾಗಿ ಮಾಡುವ ದುಂದು ವೆಚ್ಚ, ವರದಕ್ಷಿಣೆ, ಜೀತಪದ್ಧತಿ ಮೊದಲಾದ ಸಮಸ್ಯೆಗಳನ್ನು ನಿವಾರಿಸಲಿಕ್ಕಾಗಿ1972ರಲ್ಲಿ ಸಾಮೂಹಿಕ ವಿವಾಹ ಯೋಜನೆಯನ್ನು ಧರ್ಮಸ್ಥಳದಲ್ಲಿ ಆರಂಭಿಸಲಾಯಿತು. ಇಂದು ಜಾತಿ-ಮತ, ಅಂತಸ್ತಿನ ಬೇಧ ಮರೆತು 60 ಜೊತೆ ಅಂತರ್ಜಾತೀಯ ವಿವಾಹವಾದ ಕುರಿತು ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.
ಸಾಮೂಹಿಕ ವಿವಾಹವಾದವರಿಗೆ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡಿ ಅದು ಮುಂದೆ ಉದ್ಯೋಗ, ಶಿಕ್ಷಣ ಹಾಗೂ ಸರ್ಕಾರದ ನೆರವು ಪಡೆಯಲು ಸಹಕಾರಿಯಾಗಿದೆ. ಧರ್ಮಸ್ಥಳದಲ್ಲಿ ಮದುವೆಯಾದವರು ಪರಸ್ಪರ ಅರಿತುಕೊಂಡು ಶಾಂತಿ-ಸಹನೆ ಮತ್ತು ಪ್ರೀತಿ-ವಿಶ್ವಾಸದಿಂದ ನೆಮ್ಮದಿಯ ಜೀವನ ನಡೆಸಬೇಕು. ಮದುವೆಯ ಪಾವಿತ್ರ್ಯ ಮತ್ತು ಗಂಭಿರತೆಯನ್ನು ಅರ್ಥಮಾಡಿಕೊಂಡು ಸಾರ್ಥಕ ಜೀವನ ನಡೆಸಿ ಎಂದು ಹಾರೈಸಿದರು.
ಹೇಮಾವತಿ ವೀ,ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಸುಪ್ರಿಯ ಹರ್ಷೇಂದ್ರ ಕುಮಾರ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬೆಂಗಳೂರು ದಕ್ಷಿಣ ಶಾಸಕ ಕೃಷ್ಣಪ್ಪ ಉಪಸ್ಥಿತರಿದ್ದರು.

ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ ಪ್ರಮಾಣವಚನ ಬೋಧಿಸಿದರು. ದಾಮೋದರ ಶರ್ಮ ಬಾರಕೂರು ಕಾರ್ಯಕ್ರಮ ನಿರ್ವಹಿಸಿದರು. ಗಣೇಶ್ ಕಾಮತ್ ವಂದಿಸಿದರು.

error: Content is protected !!