ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಮರ್ಥ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು:ಶ್ರೀ ಗುರುದೇವ ಪ.ಪೂ. ಕಾಲೇಜಿನ ಪ್ರತಿಭಾ ಪುರಸ್ಕಾರ ಹಾಗೂ ಬೀಳ್ಕೊಡುಗೆ ಸಮಾರಂಭ

 

 

 

ಬೆಳ್ತಂಗಡಿ : ‘ಜಗತ್ತಿನ ಶ್ರೇಷ್ಠ ಸಂಪತ್ತು ಮಾನವ ವ್ಯಕ್ತಿತ್ವವಾಗಿದೆ. ನಾವು ಮೌಲ್ಯಾಧಾರಿತ ಶಿಕ್ಷಣದ ಮೂಲಕ ಸಮರ್ಥ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಬದುಕಿನಲ್ಲಿ ಪುರಸ್ಕಾರ ತಿರಸ್ಕಾರ ಯಾವುದೇ ಇರಲಿ ಸಮಾನವಾಗಿ ಸ್ವೀಕರಿಸುವ ಮನಸ್ಸು ನಮ್ಮಲ್ಲಿರಬೇಕು’ ಎಂದು ಉಪ್ಪಿನಂಗಡಿ ಗಿರಿಜಾ ಕ್ಲಿನಿಕ್ ನ ದಂತ ವೈದ್ಯ ಡಾ. ರಾಜಾರಾಮ್ ಕೆ. ಬಿ. ಹೇಳಿದರು.

ಅವರು ಶನಿವಾರ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ 2021-22 ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

‘ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು. ಆದರೆ ಕನಸಿಲ್ಲದ ಹಾದಿಯಲ್ಲಿ ನಡೆಯಲು ಸಾಧ್ಯವಿಲ್ಲ. ಕ್ಲಿಷ್ಟಕರ ಸಂದರ್ಭದಲ್ಲಿ ಸಾಧಿಸುವುದೇ ಶ್ರೇಷ್ಟ ಸಾಧನೆಯಾಗಿದೆ. ಪ್ರತಿಯೊಬ್ಬರೂ ಸಾಹಸದ ಕಡೆಗೆ ಯೋಚಿಸಬೇಕು ಹೊರತು ದುಸ್ಸಾಹಸ ಮಾಡವ ಕಡೆಗಲ್ಲ’ ಎಂದರು.

ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ, ಮಾಜಿ ಶಾಸಕ ಕೆ.ವಸಂತ ಬಂಗೇರ ಮಾತನಾಡಿ, ‘ ವಿದ್ಯಾರ್ಥಿಗಳ ಬದುಕು ಶ್ರೇಷ್ಠವಾದುದು. ಆ ಸಂದರ್ಭದಲ್ಲಿ ಮೈಗೂಡಿಸಿಕೊಂಡ ಶಿಸ್ತು ಮತ್ತು ಉತ್ತಮ ವಿಚಾರಗಳು ಬದುಕಿನ ಉದ್ದಕ್ಕೂ ದಾರಿದೀಪವಾಗುವುದು ಎಂದರು.

ಸಮಾರಂಭದ ಅತಿಥಿ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಧರ್ಣಪ್ಪ ಪೂಜಾರಿ, ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಪೀತಾಂಬರ ಹೇರಾಜೆ, ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್. ಬಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಮಾತನಾಡಿದರು.

ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಅನನ್ಯ ಹಾಗೂ ವಿಜ್ಞಾನ ವಿಭಾಗದ ಆಯಿಷತುಲ್ ಆರಿಫಾ ಶುಭ ಹಾರೈಸಿದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಅಶ್ವಿತಾ ಮತ್ತು ಜ್ಯೋತಿ ಅನಿಸಿಕೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಪದ್ಮನಾಭ ಮಾಣಿಂಜ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಇದ್ದರು.

ಕನ್ನಡ ಭಾಷಾ ಉಪನ್ಯಾಸಕ ಗಣೇಶ್ ಬಿ ಶಿರ್ಲಾಲ್ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಡಾ. ಸವಿತಾ ವರದಿ ವಾಚಿಸಿದರು. ಶೈಕ್ಷಣಿಕ ವಿಭಾಗದ ಬಹುಮಾನಿತರ ಪಟ್ಟಿಯನ್ನು ವಾಣಿಜ್ಯ ವಿಭಾಗದ ಉಪನ್ಯಾಸಕಿ ನಂದಿನಿ ಶರ್ಮ, ಸಾಂಸ್ಕೃತಿಕ ವಿಭಾಗದ ಬಹುಮಾನದ ಪಟ್ಟಿಯನ್ನು ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕಿ ಮಾಯಾ ಭಟ್, ಕ್ರೀಡಾ ವಿಭಾಗದ ಬಹುಮಾನಿತರ ಪಟ್ಟಿಯನ್ನು ದೈಹಿಕ ಶಿಕ್ಷಣ ನಿರ್ದೇಶಕಿ ದೀಪಾ ಸುವರ್ಣ , ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಹೇಮಾವತಿ ಕೆ ಹಾಗೂ ಕನ್ನಡ ಭಾಷಾ ಉಪನ್ಯಾಸಕ ರಾಕೇಶ್ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ಭೌತಶಾಸ್ತ್ರ ಉಪನ್ಯಾಸಕಿ ಶ್ರುತಿ ಕಾರ್ಯಕ್ರಮ ನಿರೂಪಿಸಿ, ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ಶುಭಲಕ್ಷ್ಮೀ ವಂದಿಸಿದರು.

ಅವಳಿ ಜವಳಿ ವಿದ್ಯಾರ್ಥಿಗಳಿಗೆ  ಗೌರವ

ಪಿಯಸಿಯಲ್ಲಿ ಕಲಿಯುತ್ತಿರುವ 7 ಜೊತೆ ಅವಳಿ ಜವಳಿ ವಿದ್ಯಾರ್ಥಿಗಳಾದ ಕುಸುಮ – ಕುಮುದ, ಶ್ರದ್ಧಾ – ಶ್ರೇಯಸ್, ಹಫೀಪ – ಹಬೀಬ, ಯಕ್ಷಿಣಿ – ಯಶಸ್ವಿನಿ, ಜಲಜ – ಜಯಂತ, ಅನುಷಾ – ಅಮಿಷಾ , ಸಂಧ್ಯಾ – ಸಂದೀಪ್ ಇವರನ್ನು ಗೌರವಿಸಲಾಯಿತು.

error: Content is protected !!