ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಗಳು ಮಾ 28 ಸೋಮವಾರದಿಂದ ಪ್ರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿ.ಶ್ರೀನಿವಾಸ್ ಮೂರ್ತಿ ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಹಿಜಾಬ್ ವಿವಾದ ಮುಂದುವರೆದಿದ್ದು, ಹೈಕೋರ್ಟ್ ಸಮವಸ್ತ್ರ ಕಡ್ಡಾಯಗೊಳಿಸಿ ತೀರ್ಪು ನೀಡಿದೆ. ಆದರೂ ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡು ಬರುತ್ತಿದ್ದಾರೆ. ಇದೀಗ ಎಸ್ಎಸ್ಎಲ್ಸಿ ಪರೀಕ್ಷೆಗಳಿಗೂ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ.ಹಿಜಾಬ್ ಧರಿಸಿಕೊಂಡು ಬಂದರೆ ಪರೀಕ್ಷಗೆ ಪ್ರವೇಶ ನಿರಾಕರಿಸಲಾಗಿದ್ದು, ನಿಯಮ 1995ರ ನಿಯಮ 11ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಸಮವಸ್ತ್ರ ಜಾರಿ ಮಾಡಿದೆ. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಶಾಲಾ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ಇನ್ನು ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸಿರುವ ಸಮವಸ್ತ್ರ ಕಡ್ಡಾಯವಾಗಿ ಇರಲಿದೆ ಎಂದು ತಿಳಿಸಿದ್ದಾರೆ.