ಯುದ್ಧಭೂಮಿಯಲ್ಲಿ ಭಾರತದ ರಾಷ್ಟ್ರಧ್ವಜದ ಚಿತ್ರ ಕೈಯಲ್ಲಿ ಹಿಡಿದು ಹತ್ತು ಕಿ.ಮೀ. ಕಾಲ್ನಡಿಯಲ್ಲಿ ಕ್ರಮಿಸಿದೆವು, ಉಕ್ರೇನ್ ಸ್ಥಳೀಯರು, ಸೈನಿಕರು ಭಾರತೀಯರಿಗೆ ವಿಶೇಷ ಗೌರವ ನೀಡಿದರು”: “ದಾರಿ ಮಧ್ಯೆ ಬಾಂಬ್ ಸ್ಫೋಟಗೊಂಡು ಒಂದೂವರೆ ತಾಸು ರೈಲು ನಿಂತಿತ್ತು, ಒಳಗಡೆ ಭೂಕಂಪನದ ಅನುಭವೂ ಆಗಿತ್ತು!”: “ಫ್ಲಾಟ್ ಪಕ್ಕವೇ ಬೀಳುತ್ತಿತ್ತು ಕ್ಷಿಪಣಿಗಳು, ಜೀವ ರಕ್ಷಿಸಿಕೊಂಡ ಕ್ಷಣ ಮರೆಯಲು ಅಸಾಧ್ಯ”: ಉಕ್ರೇನ್ ನಿಂದ ಉಜಿರೆಗೆ ಮರಳಿದ ‘ಹೀನಾ ಫಾತಿಮಾ‌’ ಎದುರಿಸಿದ ಸವಾಲುಗಳ ಚಿತ್ರಣ:

 

 

 

 

 

 

ಉಜಿರೆ:  ಸ್ಕೆಚ್ ಪೆನ್ ಮೂಲಕ ರಚಿಸಿದ ನಮ್ಮ ರಾಷ್ಟ್ರ ಧ್ವಜದ ಚಿತ್ರವನ್ನು ಕೈಯಲ್ಲಿ ಎತ್ತಿ ಹಿಡಿದು ಹತ್ತು ಕಿಮೀ. ದೂರವನ್ನು ಕಾಲ್ನಡಿಗೆ ಮೂಲಕವೇ ಕ್ರಮಿಸಿ ಬಂದೆವು. ಈ ವೇಳೆ ಉಕ್ರೇನ್ ಸೈನಿಕರು ನಮಗೆ ಉತ್ತಮ ರೀತಿಯ ಬೆಂಬಲ ನೀಡಿದರು. ನಮ್ಮ ರಾಷ್ಟ್ರಧ್ವಜ ನಮ್ಮ ಜೀವವನ್ನು ಕಾಪಾಡಿದ ಕಾರಣ ಹುಟ್ಟೂರು ತಲುಪಲು ಸಾಧ್ಯವಾಯಿತು ಎಂದು ಉಕ್ರೇನ್ ನಲ್ಲಿ ಆತಂಕದ ಕ್ಷಣಗಳ ಜತೆ ಹರಸಾಹಸ ನಡೆಸಿ ಮನೆಯನ್ನು ಸೇರಿದ ಉಜಿರೆಯ ಟಿಬಿ ಕ್ರಾಸ್ ಸಮೀಪದ ಹೀನಾ ಫಾತಿಮಾ ಅವರು ತಾವು ಉಕ್ರೇನ್ ನಲ್ಲಿ ಎದುರಿಸಿದ ಸವಾಲುಗಳನ್ನು ‌ಮಾಧ್ಯಮದ ಮುಂದೆ ತೆರೆದಿಟ್ಟರು.
ಯುದ್ಧಪೀಡಿತ ಉಕ್ರೇನಿನ ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಇವರು ಪೋಲೆಂಡ್ ನಿಂದ ಹೊರಟು ಶನಿವಾರ ದೆಹಲಿಗೆ ಆಗಮಿಸಿ ಬೆಂಗಳೂರು ವಿಮಾನ ನಿಲ್ದಾಣ ಮೂಲಕ ಭಾನುವಾರ ಬೆಳಿಗ್ಗೆ 8ಗಂಟೆಗೆ ಮಂಗಳೂರು ವಿಮಾನ ನಿಲ್ದಾಣವನ್ನು ತಲುಪಿ 11ರ ಸುಮಾರಿಗೆ ಉಜಿರೆಯ ಮನೆಯನ್ನು ತಲುಪಿದರು.
ಭಾರತೀಯ ರಾಯಭಾರ ಕಚೇರಿ ನಮ್ಮನ್ನು ಸ್ವಂತ ಮಕ್ಕಳಂತೆ ನೋಡಿಕೊಂಡು ಉತ್ತಮ ವ್ಯವಸ್ಥೆಗಳನ್ನು ಮಾಡಿಕೊಟ್ಟಿದೆ. ಅಧಿಕಾರಿಗಳ ಸ್ಪಂದನೆ ಅಭೂತಪೂರ್ವವಾಗಿತ್ತು. ಏಳು ದಿನ ಬಂಕರಿನಲ್ಲಿ ಕಾಲ ಕಳೆದಿದ್ದ ಏಳು ಜನ ಭಾರತೀಯರಾದ ಭೂಮಿಕಾ,ಅಕ್ಷಿತಾ ಅಭಿಷೇಕ್,ಆಕಾಶ್, ವೈಭವ ನಾಡಿಗ್, ಪ್ರಜ್ವಲ್ ಹಿಪ್ಪರಗಿ, ಮಂಜುನಾಥ ನಾನು ಸೇರಿಕೊಂಡು ಧೈರ್ಯದಿಂದ ಬಂಕರ್ ನಿಂದ ಬುಧವಾರ ಹೊರ ಬಂದೆವು. ಕಾಲ್ನಡಿಗೆ, ವ್ಯಾನ್, ರೈಲು ಮೂಲಕ ಪ್ರಯಾಣಿಸಿ ಪೋಲೆಂಡ್ ಗಡಿ ತಲುಪಿದೆವು. ಈ ವೇಳೆ ದಾರಿ ಮಧ್ಯೆ ಬಾಂಬ್ ಸ್ಫೋಟಗೊಂಡು ಒಂದೂವರೆ ತಾಸು ರೈಲು ನಿಂತಿದೆ.ಒಳಗಡೆ ಭೂಕಂಪನದ ಅನುಭವಾಯಿತು. ರೈಲಿನ ಜನಜಂಗುಳಿ, ನೂಕುನುಗ್ಗಲು ಸರಿಯಾದ ಆಹಾರ ವ್ಯವಸ್ಥೆ ಇಲ್ಲದೆ ಕಷ್ಟ ಪಡುವಂತಾಯಿತು. ನಮ್ಮ ಫ್ಲಾಟ್ ಪಕ್ಕವೇ ಕ್ಷಿಪಣಿಗಳು ಆಗಾಗ ಬೀಳುತ್ತಿದ್ದು ಜೀವವನ್ನು ರಕ್ಷಿಸಿಕೊಂಡ ಕ್ಷಣಗಳನ್ನು ಮರೆಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.
2020 ಡಿಸೆಂಬರ್ ನಲ್ಲಿ ಖಾರ್ಕಿವ್ ನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸೇರ್ಪಡೆಗೊಂಡಿದ್ದ ಹೀನಾ ತನ್ನ ಫ್ಲಾಟ್ ನಿಂದ ಎರಡು ಮೆಟ್ರೋ ಸ್ಟೇಷನ್ ದೂರದ ಸರ್ಫ್ನೀಯಾ ಪ್ರದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಯುದ್ಧದ ಕುರಿತು ಕಾಲೇಜಿನಲ್ಲೂ ಯಾವುದೇ ಮುನ್ಸೂಚನೆ ಇಲ್ಲದ ಕಾರಣ ತರಗತಿಗಳಿಗೆ ಹಾಜರಾಗುವುದು ಅನಿವಾರ್ಯವಾಗಿತ್ತು. ಆದರೆ ಏಕಾಏಕಿ ಯುದ್ಧ ಆರಂಭಗೊಂಡು ಬಂಕರ್ ನಲ್ಲಿ ಕಾಲ ಕಳೆಯುವಂತಾಯಿತು.
ಯುದ್ಧದ ಬಳಿಕ ರೈಲುಗಳಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಅವಕಾಶವಿದ್ದು, ಇವರ ಗುಂಪಿನ ನಾಲ್ಕು ಮಂದಿ ಹುಡುಗರು ಭಾನುವಾರವಷ್ಟೇ ಪೋಲೆಂಡ್ ತಲುಪಿದ್ದಾರೆ. ಯುದ್ಧದ ಕಾರಣದಿಂದ ಹೆಚ್ಚಿನ ಸಮಯ ವಿದ್ಯುತ್, ನೆಟ್ ವರ್ಕ್ ಸಮಸ್ಯೆ ಇರಲಿಲ್ಲ. ಆದರೂ ಉಕ್ರೇನಿನ ಪ್ರಜೆಗಳು ಹಾಗೂ ಸೈನಿಕರು ಭಾರತೀಯರ ಬಗ್ಗೆ ವಿಶೇಷ ಅಭಿಮಾನ ಹೊಂದಿರುವುದು ಹೆಚ್ಚಿನ ಭರವಸೆಯನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಹೀನಾ ಫಾತಿಮಾ ಅವರ ತಾಯಿ ಶಹನಾ ಉಜಿರೆ ಮಾಧ್ಯಮದ ಜೊತೆ ಮಾತನಾಡಿ, ದೇವರ ದಯೆ ಭಾರತೀಯ ರಾಯಭಾರ ಕಚೇರಿ ಹಾಗೂ ಸರಕಾರದ ಇಲಾಖೆಗಳ ಸ್ಪಂದನೆ ಯಿಂದ ಮಗಳು ಕ್ಷೇಮವಾಗಿ ಮನೆ ಸೇರುವಂತಾಗಿದೆ. ಜಿಲ್ಲಾಧಿಕಾರಿಗಳು ಹಲವು ಬಾರಿ ದೂರವಾಣಿ ಮೂಲಕ ಧೈರ್ಯ ತುಂಬಿದ್ದಾರೆ. ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಶಿಕ್ಷಣ ಯುದ್ಧದಕಾರಣ ಮೊಟಕುಗೊಂಡಿದೆ. ಸರಕಾರ ಈ ಬಗ್ಗೆ ಯೋಜನೆ ರೂಪಿಸಿ ಅವರು ಶಿಕ್ಷಣದಿಂದ ವಂಚಿತರಾಗದಂತೆ ವ್ಯವಸ್ಥೆ ಮಾಡುವುದೆಂಬ ಭರವಸೆ ಇದೆ ಎಂದರು.

ಹೀನಾ ಫಾತೀಮಾ ಅವರ ಮಾವ  ಅಬೀದ್ ಆಲಿ ಮಾತನಾಡಿ ನಮ್ಮ ಕುಟುಂಬಕ್ಕೆ  ಎಲ್ಲರೂ ಎಲ್ಲ ರೀತಿಯಲ್ಲೂ  ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರು ಪಿಡಿಒ ಗ್ರಾಮ ಸಹಾಯಕರು ಮನೆಗೆ ಬಂದ್ದು ಧೈರ್ಯ ತುಂಬುವಂತಹ ಕೆಲಸವನ್ನು ಮಾಡಿದ್ದಾರೆ ನಮಗೆ ಧೈರ್ಯ ತುಂಬಿದ ಎಲ್ಲರಿಗೂ  ಧನ್ಯವಾದಗಳು ಎಂದರು.

ಹೀನಾ ಅವರ ಮನೆಗೆ ಮಾಜಿ ಶಾಸಕ ವಸಂತ ಬಂಗೇರ, ಕಾಂಗ್ರೆಸ್ ನಾಯಕ ರಂಜನ್ ಗೌಡ ಆಗಮಿಸಿ ಮಾತುಕತೆ ನಡೆಸಿದರು.ತಾಯಿ ಶಾಹೀನಾ,ಅಜ್ಜ ಉಸ್ಮಾನ್,ಮಾವ ಆಬೀದ್ ಆಲಿ ಇದ್ದರು.

error: Content is protected !!