ನಾಡಿನ ಜನತೆಗೆ ಸರ್ವಸ್ಪರ್ಶಿ ಬಜೆಟ್: ಸಂತಸ ವ್ಯಕ್ತ ಪಡಿಸಿದ ಶಾಸಕ ಹರೀಶ್ ಪೂಂಜ

 

 

ಬೆಂಗಳೂರು:ಕೊರೋನಾದಿಂದ 2 ವರ್ಷ ನಲುಗಿ ಸಂಕಷ್ಟದಿಂದ ಚೇತರಿಸಿ ಕಾಣುತ್ತಿರುವ ಕಾಲಘಟ್ಟದಲ್ಲಿ ನಾಡಿಗೆ ಸರ್ವಸ್ಪರ್ಶಿಯಾಗುವ ಬಜೆಟ್‍ನ್ನು ಕರ್ನಾಟಕದ ಮುಖ್ಯಮಂತ್ರಿ ಶ್ರಿ ಬಸವರಾಜ್ ಬೊಮ್ಮಾಯಿ ಜನತೆಗೆ ನೀಡಿದ್ದಾರೆಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಸಂತಸ ವ್ಯಕ್ತಪಡಿಸಿದ್ದಾರೆ.
ತೆರಿಗೆ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿರಿಸಿ ನಾಡಿನ ಜನತೆಗೆ ಹೊರೆಯಾಗದಂತೆ ಬಜೆಟ್‍ನ್ನು ನೀಡಿದ ಮುಖ್ಯಮಂತ್ರಿಗಳ ಕ್ರಮ ಶ್ಲಾಘನೀಯ. ದೇವಾಲಯಗಳಿಗೆ ವಿಶೇಷ ಸ್ವಾಯತ್ತತೆ ನೀಡುವ ಮೂಲಕ ಬಹಳಷ್ಟು ದೇವಾಲಯಗಳು ವಿವೇಚನಯುಕ್ತವಾಗಿ ಅಭಿವೃದ್ಧಿ ಕಾಣಲಿವೆ. ಗೋವುಗಳ ದತ್ತು ಸ್ವೀಕಾರದ ‘ಪುಣ್ಯಕೋಟಿ’ ಯೋಜನೆ ಈ ನಾಡಿನ ಜನತೆಯ ಭಾವನೆಗೆ ಸಂದ ಗೌರವವಾಗಿದೆ.
ಪಡಿತರದಲ್ಲಿ ಅಕ್ಕಿಯ ಜೊತೆ 1 ಕೆ.ಜಿ. ರಾಗಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರ, ಬಿಸಿಯೂಟ ತಯಾರಿಕೆಯ ಕಾರ್ಯಕರ್ತೆಯರ ಗೌರವದ ಧನ ಏರಿಕೆ ಬಹುಕಾಲದ ನಿರೀಕ್ಷೆಯ ಬೇಡಿಕೆಯು ಈಡೇರಿದಂತಾಗಿದೆ. 15ಸಾವಿರ ಶಿಕ್ಷಕರ ನೇಮಕ, ತಾಲೂಕು ಮಟ್ಟದಲ್ಲಿ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತರಬೇತಿ ವ್ಯವಸ್ಥೆ, ನಾರಾಯಣಗುರು ಸ್ಮರಾಣಾರ್ಥ ವಸತಿ ಶಾಲೆ ನಿರ್ಮಾಣ ನಿಶ್ಚಿತವಾಗಿಯೂ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸುಧಾರಣೆ ಕಾಣಲಿವೆ.
ಯಶಸ್ವಿನಿ ಯೋಜನೆ ಮರಳಿ ಜಾರಿಗೆ ತರುವ ಪ್ರಸ್ತಾಪ, ರೈತರಿಗೆ ಡೀಸೆಲ್ ಮೇಲೆ ಸಬ್ಸಿಡಿ, ಸಣ್ಣ – ಅತೀ ಸಣ್ಣ ರೈತರಿಗೆ ಕೃಷಿ ಯಂತ್ರೋಪಕರಣ ನೀಡಿಕೆ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಕ್ರಮ, ನೀರಾವರಿ ಯೋಜನೆಗೆ ಹೆಚ್ಚಿನ ಪ್ರಾಧನ್ಯತೆ, ಮೂಲಭೂತ ಸೌಕರ್ಯಗಳ ಸುಧಾರಣೆ, ರಸ್ತೆ- ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಮೊಬಲಗು ಮೀಸಲಿರಿಸಿ ಆರ್ಥಿಕ ಶಿಸ್ತು ಕಾಪಾಡಿಕೊಂಡ ಈ ಮುಂಗಡ ಪತ್ರದಿಂದ ರಾಜ್ಯ ಸರ್ವಾಂಗೀಣದ ಪ್ರಗತಿ ಕಾಣಲಿದೆಯೆಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: Content is protected !!