ಬೆಳ್ತಂಗಡಿ: ತಾಲೂಕಿಗೆ ಸುಸಜ್ಜಿತವಾದ ಉದ್ಯಾನವನ ಬೇಕು ತಾಲೂಕಿನ ಜನರಲ್ಲದೇ ಇನ್ನಿತರ ಪ್ರವಾಸಿಗರನ್ನೂ ಆಕರ್ಷಿಸಿ ಇಡೀ ರಾಜ್ಯಕ್ಕೆ ಮಾದರಿಯಾಗುವಂತಹ ರೀತಿಯಲ್ಲಿ ನಿರ್ಮಾಣವಾಗಬೇಕು ಎಂಬ ನಿಟ್ಟಿನಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಅವರು ಯೋಜನೆಗಳನ್ನು ತಯಾರಿಸಿ ಅದಕ್ಕಾಗಿ ಸುಸಜ್ಜಿತ ಸ್ಥಳವನ್ನು ಬೆಳ್ತಂಗಡಿ ತಾಲೂಕಿನ ಪಟ್ಟಣ ಪಂಚಾಯತ್ ಹಾಗೂ ಲಾಯಿಲ ಗ್ರಾಮಕ್ಕೆ ತಾಗಿಕೊಂಡಿರುವ ಕಲ್ಲಗುಡ್ಡೆ ಎಂಬಲ್ಲಿ ಅರಣ್ಯ ಇಲಾಖೆಯ ಮೂಲಕ ಮೀಸಲಿರಿಸಿ ಅದಕ್ಕೆ ವಿವಿಧ ಸಚಿವರುಗಳ ಹಾಗೂ ಅರಣ್ಯ ಇಲಾಖೆಯ ಮೂಲಕ ಬೇಕಾದ ಅನುದಾನವನ್ನು ಮಂಜೂರುಗೊಳಿಸಿ ಸಾಲುಮರದ ತಿಮ್ಮಕ್ಕ ಎಂಬ ಹೆಸರಿನ ಮೂಲಕ ಕಳೆದ ಎರಡು ವರ್ಷಗಳಿಂದ ವಿವಿಧ ಕಾಮಗಾರಿಗಳು ನಡೆಯುತ್ತಿದೆ. ಕಾಮಗಾರಿಗಳು ಬಹುತೇಕ ಪೂರ್ತಿಗೊಳ್ಳುವ ಹಂತಕ್ಕೆ ಬರುತಿದ್ದು ತಾಲೂಕಿನ ಜನರಿಗಾಗಿ ಉತ್ತಮ ರೀತಿಯಲ್ಲಿ ಉಪಯೋಗ ಆಗಿ ಅದರ ಸದುಪಯೋಗ ಪಡೆದುಕೊಳ್ಳುವಂತ ರೀತಿಯಲ್ಲಿ ಅದನ್ನು ಸಿದ್ಧ ಪಡಿಸಲಾಗುತ್ತಿದೆ.
ವಾಕಿಂಗ್ ಟ್ರ್ಯಾಕ್, ಮಕ್ಕಳಿಗೆ ಆಟ ಆಡಲು ಬೇಕಾದ ವ್ಯವಸ್ಥೆ ಅಲ್ಲದೇ ಇತರ ಆನೇಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈಗಾಗಲೇ ತಾಲೂಕಿನಿಂದ ಹಾಗೂ ಇನ್ನಿತರ ಕಡೆಗಳಿಂದ ಉದ್ಯಾನವನ ವೀಕ್ಷಿಸಲು ಆನೇಕರು ಕುಟುಂಬಿಕರೊಂದಿಗೆ ಆಗಮಿಸುತ್ತಿದ್ದಾರೆ.
ಅದರೆ ಇಷ್ಟೆಲ್ಲ ಇದ್ದರೂ ಕೆಲವರು ಮಾತ್ರ ಇದನ್ನು ದುರುಪಯೋಗ ಪಡಿಸಿಕೊಳ್ಳುತಿದ್ದು, ಅನೈತಿಕ ಚಟುವಟಿಕೆಗಳ ತಾಣವನ್ನಾಗಿಸಿಕೊಳ್ಳುತ್ತಿರುವುದು ಬೇಸರದ ಸಂಗತಿ. ಶಾಲಾ ಕಾಲೇಜು ಮಕ್ಕಳು ಕದ್ದು ಮುಚ್ಚಿ ಪಾರ್ಕ್ ಗೆ ಆಗಮಿಸುತ್ತಿದ್ದಾರೆ. ಜೊತೆಗೆ ಇವರ ಕುಚೇಷ್ಟೆಯಿಂದ ಸ್ಥಳೀಯ ನಿವಾಸಿಗಳು ಮುಜುಗರ ಪಡುವಂತಾಗಿದೆ. ಈಗಾಗಲೇ ಸ್ಥಳೀಯ ಯುವಕರ ಕೈಗೆ ಹಲವಾರು ಜೋಡಿಗಳು ಸಿಕ್ಕಿಬಿದ್ದಿದ್ದು ಎಚ್ಚರಿಕೆ ನೀಡಿ ಬಿಟ್ಟುಬಿಟ್ಟಿದ್ದಾರೆ ಎನ್ನುವ ಮಾಹಿತಿಯೂ ಲಭಿಸುತ್ತಿದೆ.
ಇಂತಹ ಘಟನೆಗಳಿಂದ ಸ್ಥಳೀಯರೂ ಮುಜುಗರ ಪಡುವಂತಾಗಿದೆ. ಈ ರಸ್ತೆಯಲ್ಲಿ ಕಿರಿ ಕಿರಿಯಾಗುತ್ತಿರುವ ಬಗ್ಗೆ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದು, ತಾಲೂಕಿಗೆ ಹೆಮ್ಮೆಯ ಗರಿ ಈ ಉದ್ಯಾನವನ. ಶಾಸಕರು ಈ ಉದ್ಯಾನವನದ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಅತೀ ಸುಂದರವಾದ ಪಾರ್ಕ್ ನಿರ್ಮಿಸಬೇಕು ಎಂಬ ಕನಸನ್ನು ಹೊತ್ತು ಎಲ್ಲರನ್ನೂ ಆಕರ್ಷಿಸುವಂತಹ ರೀತಿಯಲ್ಲಿ ಪಾರ್ಕ್ ನಿರ್ಮಾಣವಾಗುತ್ತಿರುವುದು ನಮಗೆಲ್ಲರಿಗೂ ಸಂತಸದ ವಿಚಾರ. ಅದರೆ ಕೆಲವರು ಇದನ್ನು ದುರುಪಯೋಗ ಪಡಿಸುತ್ತಿರುವುದು ಮಾತ್ರ ಬೇಸರ ಮೂಡಿಸುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಶಾಲೆ- ಕಾಲೇಜ್ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಪಾರ್ಕ್ ಕೆಲಸ ಆಗುತ್ತಿರುವುದರಿಂದ ಒಳಗೆ ಹೋಗಲು ಕೆಲವೊಮ್ಮೆ ಅವಕಾಶ ನೀಡದಿದ್ದರೂ ಹೊರಗಡೆ ಸುತ್ತಮುತ್ತ ಅಲ್ಲಲ್ಲಿ ಕಾಣಸಿಗುತ್ತಾರೆ. ನಮ್ಮ ಮಕ್ಕಳು ಶಾಲೆಗೆ ಹೋಗುವಾಗ ಆನೇಕ ಬಾರಿ ಅಸಹ್ಯ ರೀತಿಯಲ್ಲಿ ಮಾತನಾಡುವುದು, ವರ್ತಿಸುವ ಬಗ್ಗೆಯೂ ಮಾಹಿತಿ ನೀಡುತಿದ್ದಾರೆ. ಅದಲ್ಲದೆ ಅನ್ಯಕೋಮಿನ ವಿದ್ಯಾರ್ಥಿಗಳು ಜೋಡಿಯಾಗಿ ಆಗಮಿಸುತ್ತಿರುವುದು ಮುಂದಿನ ದಿನಗಳಲ್ಲಿ ಸಂಘರ್ಷ ಏರ್ಪಡಬಹುದು ಎಂಬ ಅನುಮಾನವೂ ಮೂಡುತ್ತದೆ. ಇಂತವರಿಂದಾಗಿ ಇನ್ನಿತರರಿಗೂ ತುಂಬಾ ಸಮಸ್ಯೆ ಉಂಟಾಗಬಹುದು. ಅದ್ದರಿಂದ ದಯವಿಟ್ಟು ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಾಗಿ ನನ್ನ ಮನವಿಯಾಗಿದೆ ಎಂದಿದ್ದಾರೆ.
ಆದ್ದರಿಂದ ಸಧ್ಯ ಕೋಮು ಸೌಹಾರ್ದತೆ ರಾಜ್ಯಾದ್ಯಂತ ಕದಡುತ್ತಿರುವ ಈ ಸಂದರ್ಭದಲ್ಲಿ ಬೆಳ್ತಂಗಡಿ ಆರಕ್ಷಕ ಠಾಣೆ ಸಿಬ್ಬಂದಿ ಈ ಪ್ರದೇಶದಲ್ಲಿ ಗಸ್ತು ಹೆಚ್ಚಿಸಿಕೊಂಡು, ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಜೋಡಿ ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಸ್ಥಳೀಯರಿಗೆ ಸೂಚಿಸಬೇಕಿದೆ. ಅದಲ್ಲದೇ ಪೋಷಕರು ಕೂಡ ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಸ್ಥಳೀಯರ ಪ್ರಕಾರ ಸ್ಥಳೀಯ ಫ್ರೌಢ ಶಾಲೆ,ಕಾಲೇಜು ಮಕ್ಕಳೇ ಹೆಚ್ಚಾಗಿ ಕಾಣಸಿಗುತ್ತಾರೆ ಅನ್ನುವ ಮಾಹಿತಿಯನ್ನೂ ನೀಡುತಿದ್ದಾರೆ. ಅದೇ ರೀತಿ ಸಾಧ್ಯವಾದಲ್ಲಿ ಪಾರ್ಕ್ ಹೊರಭಾಗ ಹಾಗೂ ಒಳಭಾಗದ ಸೂಕ್ಷ್ಮ ಹಾಗೂ ನಿರ್ಜನ ಪ್ರದೇಶಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಕೆಗೆ ಸಂಬಂಧಿಸಿದ ಇಲಾಖೆಗಳು ಕ್ರಮಕೈಗೊಂಡಲ್ಲಿ ಕೊಂಚ ಮಟ್ಟಿಗೆ ಅವ್ಯವಹಾರ, ಅನೈತಿಕ ಚಟುವಟಿಕೆ ತಡೆಗಟ್ಟಿ, ‘ಸಾಲುಮರದ ತಿಮ್ಮಕ್ಕ’ ಹೆಸರಿಗೆ ಗೌರವ ಸೂಚಿಸಬಹುದಾಗಿದೆ.