ಬೆಳ್ತಂಗಡಿ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ನಿರ್ಮಿಸಲಾದ ಲಾಯಿಲ-ಕೋಟಿಕಟ್ಟೆ ರಸ್ತೆಯ ಕಾಮಗಾರಿಯನ್ನು ಮೂರು ತಿಂಗಳ ಒಳಗೆ ಪೂರ್ಣಗೊಳಿಸಿ, ಸರಿಪಡಿಸಿ, ಉತ್ತಮವಾಗಿ ಡಾಮರೀಕರಣ ಮಾಡಿಕೊಡುತ್ತೇವೆ ಎಂದು ಮಂಗಳೂರು ಯೋಜನಾ ವಿಭಾಗದ ಇಂಜಿನಿಯರ್ ಉದಯ ಕುಮಾರ್ ತಿಳಿಸಿದ್ದಾರೆ.
ಮಾಜಿ ಶಾಸಕ ವಸಂತ ಬಂಗೇರ ಅವರು ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಅವರು ಫೆ.25ರಂದು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ರಸ್ತೆ 7.45 ಕಿ.ಮೀ ಇದ್ದು, ರೂ. 7.93 ಕೋಟಿ ವೆಚ್ಚದ ಮಂಜೂರಾತಿಯಲ್ಲಿ ಕಾಮಗಾರಿ ಮುಗಿಯುವ ಹಂತದಲ್ಲಿದೆ. ರಸ್ತೆ ನಿರ್ಮಾಣ ಸಂದರ್ಭದಲ್ಲಿ ಲಾಯಿಲ ಜಂಕ್ಷನ್‌ನಿಂದ 750 ಮೀಟರ್ ಉತ್ತಮ ರಸ್ತೆ ಇದ್ದುದರಿಂದ ಡಾಂಬರು ಮಾತ್ರ ಹಾಕಲಾಗಿದೆ. 750 ಮೀಟರ್‌ನಿಂದ 2.250 ಕಿ.ಮೀ ರಸ್ತೆ ಹೊಸದಾಗಿ ನಿರ್ಮಿಸಿ, ಡಾಂಬರು ಮಾಡಲಾಗಿದೆ.2.250 ಕಿ.ಮೀ ನಿಂದ 3.750 ಕಿ.ಮೀ ಹಿಂದಿನ ರಸ್ತೆ ಒಳ್ಳೆಯದಾಗಿದ್ದು 3 ಮೀಟರ್ ಅಗಲ ಮಾತ್ರ ಇತ್ತು. ಇದನ್ನು ಎರಡೂ ಬದಿ ಅಗಲ ಮಾಡಿ 3.75 ಮೀಟರ್ ಹೊಸ ರಸ್ತೆ ನಿರ್ಮಾಣ ಮಾಡಲಾಗಿದೆ. 4 ಕಿ.ಮೀನಿಂದ 4.500 ಕಿ.ಮೀ. ವರೆಗಿನ ರಸ್ತೆ ತುಂಬಾ ಏರಿಕೆ ಇದ್ದುದರಿಂದ ಈ 500 ಮೀಟರ್ ರಸ್ತೆ ಕಾಂಕ್ರಿಟ್ ರಸ್ತೆ ಮಾಡಲಾಗಿದೆ. ಅಲ್ಲದೆ ಕಿರುಸೇತುವೆ ಹಾಗೂ ತಡೆಗೋಡೆ ನಿರ್ಮಾಣ ಮಾಡಲಾಗಿದೆ. 6 ಹಂತಗಳಲ್ಲಿ ಅಧಿಕಾರಿಗಳು ಬಂದು ಪರಿಶೀಲಿಸಿ ಧೃಢೀಕರಣ ನೀಡಿದ್ದಾರೆ. ಗುತ್ತಿಗೆದಾರರಿಗೆ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಉಸ್ತುವಾರಿ ಇದ್ದು ಸರಿ ಮಾಡುವ ಜವಾಬ್ದಾರಿ ಇದೆ ಎಂದರು.
ಸತ್ಯಪ್ರಮಾಣ ಮಾಡಲಿ:
ಬಂಗೇರ
ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಬಾಗಿಲು ಹಾಕಿ ಅಕ್ರಮ-ಸಕ್ರಮ ಮಾಡುತ್ತಿರುವ ವಿಚಾರ ತಿಳಿದು ಬಂದಿದ್ದು, ಇನ್ನೂ ಮುಂದೆ ಈ ರೀತಿ ಮಾಡಲು ಮಾಡಲು ಬಿಡುವುದಿಲ್ಲ ಎಂದು ಹೇಳಿದರು.
ತಾಲೂಕು ಕಚೇರಿ ಭ್ರಷ್ಟಾಚಾರದ ಕೂಪವಾಗಿದೆ. ಅಧಿಕಾರಿಗಳು ಇದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ ಶಾಸಕರು ತಾಲೂಕಿಗೆ ರೂ. 833 ಕೋಟಿ ಮಂಜೂರು ಮಾಡಿಸಿದ್ದೇನೆ ಎಂದು ಹೇಳಿದ್ದಾರೆ. ಕಳೆದ ಒಂದು ವರ್ಷದಿಂದ ಹೇಳುತ್ತಿದ್ದೇನೆ. ಈ ವಿಷಯ ಸತ್ಯಕ್ಕೆ ದೂರವಾಗಿದೆ. ನಾನು ಸುಮಾರು 300 ಕೋಟಿ ರೂ. ಮಂಜೂರು ಮಾಡಿ ತಂದದಕ್ಕೆ ಶಾಸಕರು ಎರಡನೇ ಬಾರಿ ಶಂಕುಸ್ಥಾಪನೆ ಮಾಡಿದ್ದಾರೆ. ನಾನು ಮಂಜೂರು ಮಾಡಿಸಿದ್ದನ್ನು ತಮ್ಮ ಲೆಕ್ಕಕ್ಕೆ ಸೇರಿಸಿಕೊಂಡು ನಾನು ತಂದಿದ್ದೇನೆ ಎಂದು ಹೇಳಿದ್ದಾರೆ. ಇದರ ಬಗ್ಗೆ ಯಾವುದೇ ದೇವಸ್ಥಾನಕ್ಕೂ ಪ್ರಮಾಣಕ್ಕೆ ಬರಲು ಸಿದ್ಧ ಎಂದು ಹೇಳಿದ್ದೇನೆ. ಇನ್ನು ಕೊನೆಯದಾಗಿ ಕುತ್ಯಾರು ದೇವಸ್ಥಾನಲ್ಲಿ ಸತ್ಯಪ್ರಮಾಣಕ್ಕೆ ದಿನ ನಿಗದಿ ಮಾಡುತ್ತೇನೆ. ಆ ದಿನ ನೀವು ಬನ್ನಿ ನಾನು ಬರುತ್ತೇನೆ ಪ್ರಮಾಣ ಮಾಡುವ ಎಂದು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಮಂಗಳೂರು ಯೋಜನಾ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಭಾಕರ್, ನ್ಯಾಯವಾದಿ ಮನೋಹರ ಇಳಂತಿಲ ಉಪಸ್ಥಿತರಿದ್ದರು.