ಇಲಿ ಪಾಷಾಣ ಪೇಸ್ಟ್ ಬಳಸಿ‌ ಹಲ್ಲುಜ್ಜಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು: ಟೂತ್ ಪೇಸ್ಟ್ ಎಂದುಕೊಂಡು‌ ಹಲ್ಲುಜ್ಜಿ‌ ಅಸ್ವಸ್ಥಗೊಂಡಿದ್ದ ಪಿ.ಯು. ವಿದ್ಯಾರ್ಥಿನಿ:

 

 

 

ಸುಳ್ಯ: ಟೂತ್ ಪೇಸ್ಟ್ ಎಂದು ತಪ್ಪಾಗಿ ಭಾವಿಸಿ ಇಲಿ ಪಾಷಾಣವನ್ನು ಟೂತ್​​ ಬ್ರೆಷ್‌​ಗೆ​​ ಹಾಕಿಕೊಂಡು ಹಲ್ಲುಜ್ಜಿದ್ದ ಪಿಯು ವಿದ್ಯಾರ್ಥಿನಿ ತೀವ್ರ ಅಸ್ವಸ್ಥಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.
ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಬೇರಿಕೆ ರಮೇಶ ಎಂಬುವರ ಮಗಳು ಶ್ರಾವ್ಯ (17) ಎಂಬುವಳೆ ಸಾವಿಗೀಡಾದ ವಿದ್ಯಾರ್ಥಿನಿ. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಶ್ರಾವ್ಯ, ವಾರದ ಹಿಂದೆ ಶಾಲೆಗೆ ರಜೆ ಇದ್ದ ಕಾರಣ ಮರ್ಕಂಜದಲ್ಲಿನ ತನ್ನ ಮನೆಗೆ ಬಂದಿದ್ದಳು.‌ ಮನೆಯಲ್ಲಿ ಬಾತ್ ರೂಮಿನ ಕಿಟಕಿಯಲ್ಲಿದ್ದ ಇಲಿ ಪಾಷಾಣವನ್ನು ತಪ್ಪಾಗಿ ಭಾವಿಸಿ ಟೂತ್ ಬ್ರೆಷ್‌​​ಗೆ ಹಾಕಿಕೊಂಡು, ಸ್ವಲ್ಪ ಹಲ್ಲುಜ್ಜಿದ್ದಾಳೆ. ಆದರೆ, ಕೆಲ ಕ್ಷಣದಲ್ಲೇ ತಾನು ಹಾಕಿರುವುದು ಪೇಸ್ಟ್​ ಅಲ್ಲ ಎಂದು ಅರಿವಾಗಿದೆ.
ಬಾಯಿಗೆ ನೀರು ಹಾಕಿಕೊಂಡು ಸ್ವಚ್ಛ ಮಾಡಿಕೊಂಡಿದ್ದಳು. ಬಾತ್​​ ರೂಮಿನಲ್ಲಿ ಸ್ವಲ್ಪ ಕತ್ತಲಿದ್ದಿದ್ದರಿಂದ ಶ್ರಾವ್ಯ, ಇಲಿ ಪಾಷಾಣವನ್ನೇ ತಪ್ಪಾಗಿ ಕೈಗೆತ್ತಿಕೊಂಡಿದ್ದಳು ಎಂದು ತಿಳಿದು ಬಂದಿದೆ. ಬಳಿಕ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಶ್ರಾವ್ಯ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!