ಮಂಗಳೂರು: ಬೆಳೆಬಾಳುವ ದುಬಾರಿ ವಾಚ್ ಮಾರಾಟಕ್ಕೆ ಬಂದಿದ್ದ ವ್ಯಕ್ತಿಯನ್ನು ವಿಚಾರಿಸಲು ಹೋಗಿದ್ದ ಪೊಲೀಸ್ ಸಿಬ್ಬಂದಿಗೆ ಕಳ್ಳನೊಬ್ಬ ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ನಗರದ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾಸರಗೋಡು ಮೂಲದವನೆಂದು ಪರಿಚಯ ಮಾಡಿಕೊಂಡ ವ್ಯಕ್ತಿ ನಗರದ ವಾಚ್ ಅಂಗಡಿಯೊಂದಕ್ಕೆ ಸೋಮವಾರ ಸಂಜೆ 6 ಆಗಮಿಸಿದ್ದು. ಈತ ತನ್ನ ಬಳಿಯಿದ್ದ ದುಬಾರಿ ವಾಚ್ವೊಂದನ್ನು ಮಾರಾಟಕ್ಕೆ ಯತ್ನಿಸಿದ್ದಾನೆ. ಆತ ಅನುಮಾನಾಸ್ಪದವಾಗಿ ಕಂಡು ಬಂದಿದ್ದ ಕಾರಣ ಅಂಗಡಿಯವರು ಬಂದರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.ಈ ಹಿನ್ನೆಲೆಯಲ್ಲಿ ಬಂದರು ಪೊಲೀಸ್ ಠಾಣೆಯ ಸಿಬ್ಬಂದಿ ಆತನನ್ನು ವಶಕ್ಕೆ ಪಡೆಯಲು ಬಂದಿದ್ದಾರೆ. ಆಗ ಆರೋಪಿ ಹೆಡ್ ಕಾನ್ಸ್ಟೇಬಲ್ ವಿನೋದ್ ಎಂಬುವರಿಗೆ ಚೂಪಾದ ಆಯುಧದಿಂದ ಇರಿದು ಪರಾರಿಯಾಗಿದ್ದಾನೆ.
ತಕ್ಷಣ ಗಾಯಾಳು ವಿನೋದ್ ಅವರನ್ನು ಯೆನಪೋಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ವಾಟ್ಸಪ್ ಗ್ರೂಪ್ಗಳಲ್ಲಿ ಗೊಂದಲದ ಹೇಳಿಕೆಗಳು ಹರಿದಾಡುತಿದ್ದು. ಈ ಪ್ರಕರಣದ ಬಗ್ಗೆ ಯಾವುದೇ ಅಪಪ್ರಚಾರಗಳನ್ನು ಹರಡದಂತೆ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮನವಿ ಮಾಡಿದ್ದಾರೆ.ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.