ಉಜಿರೆ ವೈದ್ಯರ ಟ್ವಿಟರ್ ಖಾತೆ ಹ್ಯಾಕ್ ಹಿಜಾಬ್ ವಿರೋಧಿಸಿ ಸಾಲು ಸಾಲು ಕಮೆಂಟ್; ಆಸ್ಪತ್ರೆ ವಿರುದ್ಧ ಅಪಪ್ರಚಾರ ಪೊಲೀಸ್ ಠಾಣೆಗೆ ದೂರು

 

 

 

ಬೆಳ್ತಂಗಡಿ; ಉಜಿರೆಯ ಬೆನಕ ಆಸ್ಪತ್ರೆಯ ಮಕ್ಕಳ ವೈದ್ಯ ಡಾ. ಶಂತನು ಆರ್ ಪ್ರಭು ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ ಕಿಡಿಗೇಡಿಗಳು ಹಿಜಾಬ್ ವಿರುದ್ಧ ಟ್ವೀಟ್ ಮಾಡಿದ ಘಟನೆ ನಡೆದಿದ್ದು, ಈ‌ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಲಾಗಿದೆ.

ಶಂತನು ಪ್ರಭು ಅವರು ಯೆನಪೋಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪೂರೈಸಿ ಬಳಿಕ ಮಕ್ಕಳ ತಜ್ಞ ವಿಭಾಗದಲ್ಲಿ ಅಧ್ಯಯನ ನಡೆಸಿ ಪ್ರಸ್ತುತ ಒಂದು ವರ್ಷದಿಂದ ಮುಂಡಾಜೆಯ ಅವರ ತಂದೆ, ಹಿರಿಯ ವೈದ್ಯ ಡಾ.‌ರವೀಂದ್ರನಾಥ ಪ್ರಭು ಅವರ ಕ್ಲಿನಿಕ್‌ನಲ್ಲಿ ಮತ್ತು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಕರ್ತವ್ಯದಲ್ಲಿದ್ದಾರೆ.

 

 

 

ಅವರ ಟ್ವಿಟರ್ ನಲ್ಲಿ ಮೆಸೇಜ್ ಹಾಕಿರುವ ಹ್ಯಾಕರ್‌ಗಳು, ಹಿಜಾಬು ನಾವು ಬಯಸುವುದಿಲ್ಲ. ಹಿಜಾಬ್ ಹಾಕಲು ಇದು ತಾಲಿಬಾನ್ ಅಥವಾ ಸೌದಿ ಅರೆಬಿಯಾ ಅಲ್ಲ. ಮದರಸವೂ ಅಲ್ಲ. ಇದು ಶಿಕ್ಷಣ ಸಂಸ್ಥೆ. ನಿಮಗೆ ಹಿಜಾಬ್ ಬೇಕಾದರೆ ಮದರಸಕ್ಕೆ ಹೋಗಿ ಎಂಬಿತ್ಯಾಧಿಯಾಗಿ ಸಂದೇಶ ರವಾನಿಸಿದ್ದಾರೆ. ಇದಕ್ಕೆ ಅಲಿಫಾ ಶೈಖ್ ಎಂಬವರು ವಿರೋಧಿಸಿ ಪ್ರತ್ಯುತ್ತರ ನೀಡಿದ್ದು ಇದರ ಸ್ಕ್ರೀನ್ ಶಾರ್ಟ್ ಮತ್ತು ವೈದ್ಯರು ಮಗುವೊಂದನ್ನು ಎತ್ತಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದೆ.

 

 

 

ಬೆನಕ ಆಸ್ಪತ್ರೆಯ ವಿರುದ್ಧವೂ ಅಪಪ್ರಚಾರ;
ಅದಲ್ಲದೇ ಅವರು ಕರ್ತವ್ಯ ನಿರ್ವಹಿಸುತ್ತಿರುವ ಬೆನಕ ಆಸ್ಪತ್ರೆಯ ಬಗ್ಗೆಯೂ ಅಪಪ್ರಚಾರ ಮಾಡಲಾಗುತ್ತಿದೆ. ಇಂತಹಾ ಮುಸ್ಲಿಂ ವಿರೋಧಿಯಾಗಿರುವ ಬೆನಕ ಆಸ್ಪತ್ರೆಗೆ ಯಾರೂ ಹೋಗಬೇಡಿ. ಅಂತಹಾ ಮುಸ್ಲಿಂ ವಿರೋಧಿ ನಿಲುವು ಇರುವ ಮಕ್ಕಳ ವೈದ್ಯನ ಕೈಯಲ್ಲಿ ಯಾವ ಧೈರ್ಯದಿಂದ ನಿಮ್ಮ ಮಕ್ಕಳನ್ನು ಚಿಕಿತ್ಸೆಗೆಂದು ಕಳಿಸಿಕೊಡುತ್ತೀರಿ ಎಂದು ಪ್ರಶ್ನಿಸಿ ಪ್ರಚಾರ ಮಾಡಲಾಗುತ್ತಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಡಾ.‌ಶಂತನು ಪ್ರಭು ಅವರು ನಾನು ಯೆನಪೋಯ ವೈದ್ಯಕೀಯ ಕಾಲೇಜಿನಲ್ಲಿ ಕಲಿತಿದ್ದು ನನಗೆ ಹಿಜಾಬ್ ಬಗ್ಗೆ ಗೊತ್ತಿದೆ. ಮುಸ್ಲಿಮರ ರೀತಿ ನೀತಿ ಪದ್ಧತಿ ನನಗೆ ಗೊತ್ತಿದೆ. ನನಗೆ ಮುಸ್ಲಿಮರು ಮಿತ್ರರೂ ಇದ್ದಾರೆ. ನನ್ನ ಟ್ವಿಟರ್ ಖಾತೆ ಹ್ಯಾಕ್ ಮಾಡಿ ನನ್ನ ಹೆಸರು ಕೆಡಿಸಲು ಯಾರೋ ಪ್ರಯತ್ನ‌ ಮಾಡಿದ್ದಾರೆ. ಈ ಬಗ್ಗೆ ನಾನು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದೇನೆ ಎಂದಿದ್ದಾರೆ.

error: Content is protected !!