ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ತಾಕತ್ತಿಲ್ಲ, ದಾಖಲೆಗಳಿದ್ದರೆ ಕೇಸ್ ಹಾಕಲಿ: ಆಣೆ ಪ್ರಮಾಣ‌‌ ಬಳಿಕ ಶಾಸಕ ಹರತಾಳು ಹಾಲಪ್ಪ ಸವಾಲು:

 

 

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಸತ್ಯ, ನ್ಯಾಯ, ನೀತಿಗೆ ಹೆಸರಾಗಿದ್ದು, ಶ್ರೀ ಮಂಜುನಾಥ ಸ್ವಾಮಿಯ ಸಮ್ಮುಖದಲ್ಲಿ ನನ್ನ ಆತ್ಮಶುದ್ಧಿ ಹಾಗೂ ಪ್ರಾಮಾಣಿಕತೆಯನ್ನು ಪ್ರದರ್ಶಿಸುವ ಸಲುವಾಗಿ ಮರಳು ಸಾಗಾಣಿಕೆ ಲಾರೀ‌ಮಾಲೀಕರಿಂದ ಹಣ ಪಡೆದಿಲ್ಲ ಎಂದು‌ ಪ್ರಮಾಣ ಮಾಡಿದ್ದೇನೆ‌ ಎಂದು‌ ಶಾಸಕ ಹರತಾಳು ಹಾಲಪ್ಪ ಮಾಧ್ಯಮಗಳಿಗೆ ತಿಳಿಸಿದರು.
ಸಾಗರದ ಹೊಸನಗರ ತಾಲೂಕು ಮರಳು ಸಾಗಾಟ ಮಾಲಿಕರಿಂದ ಕಮಿಷನ್ ಪಡೆದಿದ್ದಾರೆ, ಪಡೆದಿಲ್ಲವಾಗಿದ್ದಲ್ಲಿ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ ಎಂವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಆರೋಪ ಹಾಗೂ ಆಹ್ವಾನದ ಹಿನ್ನೆಲೆ ಸವಾಲು ಸ್ವೀಕರಿಸಿ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿ ಮಾತನಾಡಿದರು.
ಮಾಜಿ ಶಾಸಕರ ಆಹ್ವಾನದಂತೆ‌ ಆರು ದಿನಗಳ‌ ಮೊದಲೇ ಅವರಿಗೆ ತಿಳುವಳಿಕೆ ಪತ್ರದ ಮೂಲಕ ನೋಟೀಸು ನೀಡಿ ಇಂದಿಗೆ ದಿನ ನಿಗದಿಪಡಿಸಲಾಗಿತ್ತು. ಅವರು ದಿನಾಂಕ ಹಾಗೂ ಸಮಯ ಬದಲಾವಣೆ ಪ್ರಯತ್ನದ ಮೂಲಕ ಜಾರಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಆದರೂ ಇಂದು ಅವರು ಧರ್ಮಸ್ಥಳಕ್ಕೆ ಆಗಮಿಸುವ ಮಾಹಿತಿ ಲಭಿಸಿದೆ. ನಾನು ಹಣ ಪಡೆಯದಿರುವ ಕುರಿತು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದೇನೆ. ಆದರೆ ಅವರಿಗೆ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ತಾಕತ್ತಿಲ್ಲ. ನಾನು‌ ಹಣ ಪಡೆದ ಕುರಿತು ಯಾವುದೇ ದಾಖಲೆಗಳಿದ್ದರೆ ನನ್ನ ವಿರುದ್ಧ ಕೇಸ್ ಹಾಕಲಿ‌‌ ಎಂದು ಸವಾಲು ಹಾಕಿದರು. ‌
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಆಪಾದನೆ ಮಾಡಿದ ಹಿನ್ನೆಲೆ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದ ಸಂದರ್ಭದಲ್ಲಿ 40 ವರ್ಷಗಳಿಂದ ಸ್ನೇಹಿತರಾಗಿರುವ ವಿನಾಯಕ ರಾವ್ ಅವರ ಹೆಸರು ಉಲ್ಲೇಖಿಸಿ ಆರೋಪ ಮಾಡಿದರು. ಬಳಿಕ ಅವರ ಮಗ ರವೀಂದ್ರ ಅವರ ಹೆಸರು ಹೇಳಿದರು, ಅವರನ್ನೂ ಜೊತೆಗೆ ಕರೆದುಕೊಂಡು ಬಂದು ಪ್ರಮಾಣ ಮಾಡಿಸುವ ಮೂಲಕ ದೇವರ ಸಮ್ಮುಖದಲ್ಲಿ ಪ್ರಾಮಾಣಿಕತೆಯನ್ನು ತಿಳಿಸಿದ್ದೇನೆ ಎಂದರು‌.

error: Content is protected !!