ಮನಸ್ಸಿನ ಹತೋಟಿ ಸಾಧಿಸಲು ಪ್ರಕೃತಿ ಚಿಕಿತ್ಸಾ ವಿಧಾನ ಅನುಕೂಲಕಾರಿ: ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಭಿಮತ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಪಂಚದಶ ವರ್ಷಾಚರಣೆ ಅಂಗವಾಗಿ ‘ಪ್ರಕೃತಿಯ ಮಡಿಲಲ್ಲಿ’ ವಿಶೇಷ ಶಿಬಿರ

 

 

 

ಬೆಳ್ತಂಗಡಿ: ನಮ್ಮನ್ನು ನಾವು ಅರಿತುಕೊಳ್ಳಲು ಮತ್ತು ಮನಸ್ಸಿನ ಮೇಲೆ ಹತೋಟಿ ಸಾಧಿಸಲು ಪ್ರಕೃತಿ ಚಿಕಿತ್ಸಾ ವಿಧಾನ ಅತ್ಯಂತ ಅನುಕೂಲಕಾರಿ ಎಂದು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ನುಡಿದರು.‌
ಅವರು ಧರ್ಮಸ್ಥಳ ಶಾಂತಿವನದಲ್ಲಿರುವ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃ ತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಪಂಚದಶ ವರ್ಷಾಚರಣೆಯ ಅಂಗವಾಗಿ ಸದಸ್ಯರಿಗಾಗಿ ಶನಿವಾರ ನಡೆದ ಪ್ರಕೃತಿಯ ಮಡಿಲಲ್ಲಿ ಎಂಬ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

 

 

ದೇವರು ನಮಗೆ ಸುಂದರವಾದ ದೇಹವನ್ನು ನೀಡಿದ್ದಾನೆ. ಅದನ್ನು ಯಾವ ರೀತಿ ಇಟ್ಟುಕೊಳ್ಳಬೇಕು ಎಂಬ ಬಗ್ಗೆಯೂ ನಮಗೆ ಮಾಹಿತಿ, ಮಾರ್ಗದರ್ಶನ ಇರಬೇಕಾಗುತ್ತದೆ. ಪರಿವರ್ತನಾ ಶೀಲವಾಗಿರುವ ನಮ್ಮ ದೇಹವನ್ನು ಅದರೊಳಗಿನ ಚೈತನ್ಯದ ಜಾಗೃತಿಗಾಗಿ ಪ್ರಕೃತಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.ಔಷಧಿಗಳಿಲ್ಲದೆ ಅಂತರಂಗ ದರ್ಶನ ಮಾಡಿಕೊಳ್ಳುವುದೇ ಪ್ರಕೃತಿ ಚಿಕಿತ್ಸೆಯ ನಿಯಮ. ಜಿವ್ಹಾ ಚಾಪಲ್ಯಕ್ಕೆ ಕಡಿವಾಣ ಹಾಕಿ ಅದಕ್ಕೆ ನಿಯಂತ್ರಣ ಶಕ್ತಿಯನ್ನು ಪಡೆದುಕೊಂಡಾಗ ಈ ಚಿಕಿತ್ಸೆ ಸಾರ್ಥಕವಾಗುತ್ತದೆ. ಸದಾ ಒತ್ತಡದ ಚಟುವಟಿಕೆಗಳಲ್ಲಿರುವ ಪತ್ರಕರ್ತರು ರೋಗ ರಹಿತ ಜೀವನವನ್ನು ನಡೆಸಲು ಇಲ್ಲಿನ ಚಿಕಿತ್ಸೆಯ ಅನುಸರಣ ಮಾಡಬೇಕು. ನಮ್ಮನ್ನು ನಾವೇ ಪರಿಚಯ ಮಾಡಿಕೊಳ್ಳಲೂ ಇದು ಉಪಯೋಗಕಾರಿ ಎಂದರು.

 

 

ಅತಿಥಿಗಳಾಗಿದ್ದ ದ.ಕ.ಜಿ.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅವರು, ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ಜಾಗೃತಿ ಕಾರ್ಯಕ್ರಮ ನಡೆಸುವ ಕುರಿತು ಮಾಹಿತಿ ನೀಡಿದರು.

 

 

ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಧನಕೀರ್ತಿ ಆರಿಗ ಮಾತನಾಡಿ, ಮುಂದಿನ ಒಂದು ವರ್ಷದಲ್ಲಿ ಪತ್ರಕರ್ತರ ಸಂಘದಿಂದ ನಡೆಸುವ15 ವಿಶೇಷ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು.
ಮುಂಜಾನೆಯಿಂದ ಸಂಜೆಯವರೆಗೆ ನಡೆದ ಶಿಬಿರದಲ್ಲಿ ಪತ್ರಕರ್ತರಿಗೆ ಮಸಾಜ್, ಫಸಿಯೋತೆರಪಿ ಮೊದಲಾದ ನ್ಯಾಚುರೋಪತಿ ಚಿಕಿತ್ಸೆಗಳನ್ನು ನೀಡಲಾಯಿತಲ್ಲದೆ, ಆಸ್ಪತ್ರೆಯ ವಿವಿಧ ವಿಭಾಗಗಳ ವೀಕ್ಷಣೆ, ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ, ಧ್ಯಾನ, ಯೋಗವನ್ನು ಪರಿಚಯಿಸಲಾಯಿತು.

 

 

ವೇದಿಕೆಯಲ್ಲಿ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಐ.ಶಶಿಕಾಂತ ಜೈನ್, ಸ್ಥಾನೀಯ ವೈದ್ಯಾಧಿಕಾರಿ ಡಾ. ಶಶಿಕಿರಣ್, ಆಡಳಿತಾಧಿಕಾರಿ ಜಗನ್ನಾಥ್ ಉಪಸ್ಥಿತರಿದ್ದರು.

 

 

 

ಪತ್ರಕರ್ತರ ಸಂಘದ ಕಾರ್ಯದರ್ಶಿ ಚೈತ್ರೇಶ್ ಸ್ವಾಗತಿಸಿದರು. ಜೊತೆ‌ಕಾರ್ಯದರ್ಶಿ ಅಶ್ರಫ್ ಆಲಿಕುಂಞ, ಕೋಶಾಧಿಕಾರಿ ಪುಷ್ಪರಾಜ ಶೆಟ್ಟಿ ವಂದಿಸಿದರು. ಉಪಾಧ್ಯಕ್ಷ ಗಣೇಶ್ ಬಿ.ಶಿರ್ಲಾಲು ಕಾರ್ಯಕ್ರಮ ನಿರ್ವಹಿಸಿದರು.

error: Content is protected !!